ADVERTISEMENT

82ನೇ ವಸಂತಕ್ಕೆ ಕಾಲಿರಿಸಿದ ಗಾನ ಕೋಗಿಲೆ ಲತಾ ಮಂಗೇಶ್ಕರ್

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2011, 19:30 IST
Last Updated 28 ಸೆಪ್ಟೆಂಬರ್ 2011, 19:30 IST
82ನೇ ವಸಂತಕ್ಕೆ ಕಾಲಿರಿಸಿದ ಗಾನ ಕೋಗಿಲೆ ಲತಾ ಮಂಗೇಶ್ಕರ್
82ನೇ ವಸಂತಕ್ಕೆ ಕಾಲಿರಿಸಿದ ಗಾನ ಕೋಗಿಲೆ ಲತಾ ಮಂಗೇಶ್ಕರ್   

ನವದೆಹಲಿ (ಪಿಟಿಐ):    ಏಳು ದಶಕದಿಂದ ತಮ್ಮ ಸುಮಧುರ ಕಂಠಸಿರಿಯಿಂದ ಸಂಗೀತ ಪ್ರಿಯರ ಮನವನ್ನು ತಣಿಸುತ್ತಿರುವ ಗಾನ ಕೋಗಿಲೆ ಲತಾ ಮಂಗೇಶ್ಕರ್ ಬುಧವಾರ 82ನೇ ವರ್ಷಕ್ಕೆ ಕಾಲಿರಿಸಿದರು.
ಕೊನೆಯ ಉಸಿರು ಇರುವವರೆಗೂ ಸಂಗೀತ ತಮ್ಮಂದಿಗೆ ಇರಲಿದೆ ಎಂದು ಹೇಳಿರುವ ಲತಾ, ತಮ್ಮ ಗಾಯನ ಜೀವನವನ್ನು ಮುಂದುವರೆಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಆಡಂಬರವಿರದ ಹುಟ್ಟುಹಬ್ಬ ಆಚರಣೆಯಲ್ಲಿ ನಂಬಿಕೆ ಇಟ್ಟಿರುವ ಲತಾ ಅವರು ಶೀಘ್ರದಲ್ಲಿಯೇ ತಮ್ಮ ಮೊದಲ ರವೀಂದ್ರ ಸಂಗೀತ ಆಲ್ಬಂ (ಮುದ್ರಿಕೆ) ಹೊರತರುವ ಯೋಜನೆಯಲ್ಲಿದ್ದಾರೆ.

`ಹುಟ್ಟಿದ ದಿನಕ್ಕಾಗಿ ಯಾವುದೇ ವಿಶೇಷ ಯೋಜನೆಗಳನ್ನು ನಾನು ಹಾಕಿಕೊಂಡಿಲ್ಲ. ಹೃದಯನಾಥ ಮಂಗೇಶ್ಕರ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ನಾನು ಇಂದು ಸ್ವೀಕರಿಸುತ್ತಿರುವುದು ನನಗೆ ಹೆಮ್ಮೆ ತಂದಿದೆ~ ಎಂದು ಲತಾ ಹೇಳಿದ್ದಾರೆ.

ಸಂಗೀತ ಕ್ಷೇತ್ರದಿಂದ ನಿವೃತ್ತಿಯಾಗುವ ಯೋಜನೆ ಇದೆ ಎಂಬ ವರದಿಗಳನ್ನು ಇದೇ ಸಂದರ್ಭದಲ್ಲಿ ಅವರು ತಳ್ಳಿ ಹಾಕಿದರು.

`ನಾನು ಈಗ ರವೀಂದ್ರ ಸಂಗೀತ ಆಲ್ಬಂ ಮಾಡುವುದರಲ್ಲಿ ನಿರತಳಾಗಿದ್ದೇನೆ. ಈ ಹಿಂದೆ ನಾನು ಕೆಲವು ಹಾಡುಗಳನ್ನು ಹಾಡಿದ್ದೆನಾದರೂ, ಇಡೀ ಆಲ್ಬಂನಲ್ಲಿ ಎಲ್ಲಾ ಹಾಡುಗಳನ್ನು ಹಾಡಿರುವುದು ಇದೇ ಮೊದಲು. ಮುಂಬರುವ ಜನವರಿಯಲ್ಲಿ ಅದು ಬಿಡುಗಡೆಯಾಗಲಿದೆ ಎಂಬ ವಿಶ್ವಾಸವಿದೆ~ ಎಂದು ತಿಳಿಸಿದರು.

`ನನ್ನ ಕೊನೆಯುಸಿರು ಇರುವವರೆಗೂ ಸಂಗೀತ ನನ್ನಲ್ಲೇ ಇರಲಿದೆ. ಇತ್ತೀಚೆಗಷ್ಟೇ ಗಾಯತ್ರಿ ಮಂತ್ರದ ಆಲ್ಬಂ ಮಾಡಿದ್ದೇನೆ. ನಿರಂತರವಾಗಿ ನಾನು ಸಂಗೀತದ ಚಟುವಟಿಕೆಯಲ್ಲೇ ತೊಡಗಿಕೊಂಡಿದ್ದೇನೆ~ ಎಂದು ಲತಾ ಹೇಳಿದರು.

`ಸಂಗೀತದ ದೇವತೆ~ ಎಂದು ಎಲ್ಲರಿಂದಲೂ ಕರೆಸಿಕೊಳ್ಳುವ ಲತಾ ಮಂಗೇಶ್ಕರ್ ಅವರು ಬುಧವಾರ ಹೃದಯನಾಥ ಪುರಸ್ಕಾರವನ್ನು ಸ್ವೀಕರಿಸಿದರು. ಅವರ ಕಿರಿಯ ಸಹೋದರ 75ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೃದಯೇಶ್ ಆರ್ಟ್ಸ್ ಸಂಸ್ಥೆ ಈ ಪ್ರಶಸ್ತಿಯನ್ನು ಹುಟ್ಟು ಹಾಕಿದೆ.

ಚಿತ್ರ ತಯಾರಕ ಯಶ್ ಚೋಪ್ರಾ ಮತ್ತು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಪ್ರಶಸ್ತಿಯನ್ನು ಲತಾ ಮಂಗೇಶ್ಕರ್‌ಗೆ ಪ್ರದಾನ ಮಾಡಿದರು.

ಲತಾ ಮತ್ತು ಟ್ವಿಟರ್... : ಕುತೂಹಲ ಸಂಗತಿ ಎಂದರೆ, ಸಾಮಾಜಿಕ ಸಂವಹನ ತಾಣವಾದ ಟ್ವಿಟರ್ ಅನ್ನು ಬಳಸಲು ಲತಾ ಗೆ ಸ್ಫೂರ್ತಿ ಬಿಗ್ ಬಿ! ಪ್ರತಿದಿನ ಅಂತರ್ಜಾಲದಲ್ಲಿ ತಮ್ಮ ಆಲೋಚನೆಗಳನ್ನು ಹರಿಯ ಬಿಡುವುದು ಈಗ ಹವ್ಯಾಸವಾಗಿ ಮಾರ್ಪಟ್ಟಿದೆ ಎಂದು ಲತಾ ಹೇಳಿದ್ದಾರೆ.  

`ನೀವು ಟ್ವಿಟರ್‌ಗೆ ಸೇರಬೇಕು ಎಂದು ಯಾರೋ ಹೇಳಿದರು. ಅಮಿತಾಭ್ ಬಚ್ಚನ್ ಸೇರಿದಂತೆ ಹಲವು ಜನರು ಅದರಲ್ಲಿ ಇರುವುದನ್ನು ನೋಡಿದೆ. ಬಚ್ಚನ್ ಅವರು ನಿರಂತರವಾಗಿ ಅದನ್ನು ಬಳಸುತ್ತಾ ಇರುತ್ತಾರೆ. ಅದನ್ನು ಗಮನಿಸಿ ನಾನೂ ಟ್ವಿಟರ್‌ನಲ್ಲಿ ಖಾತೆ ತೆರೆದೆ. ಈಗ ಅದು ಹವ್ಯಾಸವಾಗಿ ಹೋಗಿದೆ. ನನ್ನ ಆಲೋಚನೆಗಳನ್ನು ನಾನೇ ಟ್ವಿಟರ್ ಪುಟದಲ್ಲಿ ಬರೆಯುತ್ತೇನೆ~ ಎಂದು ಲತಾ ವಿವರಿಸಿದ್ದಾರೆ.

ತಮ್ಮ ಎಲ್ಲಾ ಯಶಸ್ಸಿಗೆ ದೇವರು, ಅಭಿಮಾನಿಗಳು ಕಾರಣ ಎಂದು ಹೇಳಿರುವ ಭಾರತ ರತ್ನ ಪುರಸ್ಕೃತ ಗಾಯಕಿ, `ಎಲ್ಲರ ಪ್ರೀತಿಯಿಂದ ನಾನು ನಮ್ರಳಾಗಿದ್ದೇನೆ~ ಎಂದಿದ್ದಾರೆ. `ಈಡೇರದ ಯಾವ ಆಸೆಗಳೂ ನನ್ನಲ್ಲಿಲ್ಲ. ನನ್ನ ಜೀವನ ನನಗೆ ಸಂಪೂರ್ಣ ತೃಪ್ತಿ ನೀಡಿದೆ. ದೇವರು ನನ್ನ ಮೇಲೆ ದಯೆ ತೋರಿದ್ದಾನೆ. ಎಲ್ಲವನ್ನೂ ನೀಡಿದ್ದಾನೆ~ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.