ADVERTISEMENT

ರಾಹುಲ್‌ಗೆ ಆಘಾತ ತಂದ ‘ಇವಿಎಂ’ ಸಮೀಕ್ಷೆ: ಬಿಜೆಪಿ

ಪಿಟಿಐ
Published 2 ಜನವರಿ 2026, 16:19 IST
Last Updated 2 ಜನವರಿ 2026, 16:19 IST
ಗೌರವ್ ಭಾಟಿಯಾ
ಗೌರವ್ ಭಾಟಿಯಾ   

ನವದೆಹಲಿ:‘ಇವಿಎಂಗಳು ವಿಶ್ವಾಸಾರ್ಹ ಎಂದು ಕರ್ನಾಟಕದಲ್ಲಿ ನಡೆದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಶೇ 83.61ರಷ್ಟು ಜನರು ಹೇಳಿದ್ದಾರೆ. ರಾಜ್ಯ ಸರ್ಕಾರದ ಸಂಸ್ಥೆಯೇ ನಡೆಸಿದ ಈ ಸಮೀಕ್ಷೆಯ ಫಲಿತಾಂಶ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪಾಲಿಗೆ ಭಾರಿ ಆಘಾತವೇ ಸರಿ’ ಎಂದು ಬಿಜೆಪಿ ಶುಕ್ರವಾರ ಕುಟುಕಿದೆ.

‘ಭಾರತದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಯುತ್ತವೆ ಎಂದು ಸಮೀಕ್ಷೆಯ ಭಾಗವಾಗಿದ್ದ ಬಹುತೇಕ ಜನರು ಹೇಳಿದ್ದಾರೆ. ಇದರಿಂದ ಕಾಂಗ್ರೆಸ್‌ ನಾಯಕ ಹಾಗೂ ಅವರು ಮಾಡುತ್ತಿದ್ದ ಮತ ಕಳುವು ಆರೋಪದ ವಿಶ್ವಾಸಾರ್ಹತೆ ಕುರಿತು ಪ್ರಶ್ನೆಗಳು ಉದ್ಭವಿಸುವಂತಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ.

ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಕರ್ನಾಟಕ ಸರ್ಕಾರ ಅಧೀನದ ಸಂಸ್ಥೆಯೊಂದು ಪ್ರಕಟಿಸಿರುವ ಈ ವರದಿಯು ರಾಹುಲ್‌ ಗಾಂಧಿ ಹಾಗೂ ರಾಜ್ಯದಲ್ಲಿರುವ ಅವರ ಪಕ್ಷದ್ದೇ ಸರ್ಕಾರದ ನಡುವಿನ ವಿರೋಧಾಭಾಸವನ್ನು ಪ್ರತಿಬಿಂಬಿಸುತ್ತದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.  

ADVERTISEMENT

ಮೈಸೂರು ಮೂಲದ ‘ಗ್ರಾಸ್‌ರೂಟ್ಸ್ ರಿಸರ್ಚ್ ಆ್ಯಂಡ್ ಅಡ್ವೊಕಸಿ ಮೂವ್‌ಮೆಂಟ್’ (ಜಿಆರ್‌ಎಎಎಂ) ಸಂಸ್ಥೆಯು 2025ರ ಮೇ ತಿಂಗಳಿನಲ್ಲಿ ಈ ಸಮೀಕ್ಷೆ ನಡೆಸಿತ್ತು. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಈ ಸಮೀಕ್ಷಾ ವರದಿಯನ್ನು ಪ್ರಕಟಿಸಿದೆ.

‘ಮತಕಳವು ಆರೋಪಕ್ಕೆ ವ್ಯತಿರಿಕ್ತ.....’ ಇವಿಎಂ ಮೂಲಕ ಮುಕ್ತ ಮತ್ತು ಸ್ವತಂತ್ರವಾಗಿ ಚುನಾವಣೆ ನಡೆಸಲು ಸಾಧ್ಯ ಎಂಬುದನ್ನು ರಾಜ್ಯದ ಬಹುತೇಕ ಜನರು ಒಪ್ಪಿಕೊಂಡಿದ್ದಾರೆ ಎಂಬುದನ್ನು ಕರ್ನಾಟಕ ಸರ್ಕಾರವೇ ಪ್ರಕಟಿಸಿರುವ ವರದಿ ಹೇಳುತ್ತದೆ. ಚುನಾವಣಾ ಆಯೋಗವು ಮತಕಳವಿಗೆ ನೆರವು ನೀಡುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಡುತ್ತಿರುವ ಆರೋಪವನ್ನು ಈ ಸಮೀಕ್ಷಾ ವರದಿ ನಿವಾಳಿಸಿ ಬಿಸಾಡುತ್ತದೆ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.