ADVERTISEMENT

ಕೋವಿಡ್‌–19: 2021ರಲ್ಲಿ ಸತ್ತವರ ಸಂಖ್ಯೆ 1.02 ಕೋಟಿ!

2022ರಲ್ಲಿ ಶೇ 15ರಷ್ಟು ಇಳಿಕೆ

ಪಿಟಿಐ
Published 8 ಜೂನ್ 2025, 0:35 IST
Last Updated 8 ಜೂನ್ 2025, 0:35 IST
-
-   

ನವದೆಹಲಿ: ದೇಶದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್‌–19 ಪಿಡುಗಿನ ವೇಳೆ, 2021ರಲ್ಲಿ 1.02 ಕೋಟಿ ಸಾವುಗಳು ಸಂಭವಿಸಿದ್ದರೆ, 2022ರಲ್ಲಿ  ಮೃತಪಟ್ಟವರ ಸಂಖ್ಯೆ 86.5 ಲಕ್ಷ. 2021ಕ್ಕೆ ಹೋಲಿಸಿದಲ್ಲಿ, 2022ರಲ್ಲಿ ಸಂಭವಿಸಿದ ಸಾವುಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಈ ಪ್ರಮಾಣ ಶೇ 15ಕ್ಕಿಂತಲೂ ಹೆಚ್ಚು ಎಂದು ಹೊಸ ದತ್ತಾಂಶ ಹೇಳುತ್ತದೆ.

ನಾಗರಿಕ ನೋಂದಣಿ ವ್ಯವಸ್ಥೆ(ಸಿಆರ್‌ಎಸ್‌)ನಲ್ಲಿನ ಹೊಸ ದತ್ತಾಂಶಗಳನ್ನು ಕ್ರೋಡೀಕರಿಸಿ ರಜಿಸ್ಟ್ರಾರ್‌ ಜನರಲ್ ಆಫ್‌ ಇಂಡಿಯಾ ಸಿದ್ಧಪಡಿಸಿರುವ ವರದಿಯಲ್ಲಿ ಈ ಮಾಹಿತಿ ಇದೆ.

2022ರಲ್ಲಿ ಮರಣ ಹೊಂದಿದವರ ಸಂಖ್ಯೆ 86.5 ಲಕ್ಷ. ಅಂದರೆ, 2021ಕ್ಕೆ ಹೋಲಿಸಿದರೆ, ಸತ್ತವರ ಸಂಖ್ಯೆಯಲ್ಲಿನ ಇಳಿಕೆ 15.74 ಲಕ್ಷ ಇರುವುದು ದಾಖಲಾಗಿದೆ. ಹೀಗಾಗಿ, ಮರಣ ಪ್ರಮಾಣವು ಕೋವಿಡ್‌ ಪಿಡುಗಿಗೂ ಮುಂಚೆ 2020ರಲ್ಲಿ ಇದ್ದ ಪ್ರಮಾಣದಷ್ಟೇ ಇರುವುದು ಕಂಡುಬರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಲೋಕಸಭೆಗೆ ಮಾಹಿತಿ:

2022ರ ಜುಲೈ 26ರ ವರೆಗೆ, ಕೋವಿಡ್‌ನಿಂದಾಗಿ ದೇಶದಲ್ಲಿ 5.26 ಲಕ್ಷ ಜನರು ಮೃತಪಟ್ಟಿದ್ದರು ಎಂದು ಅದೇ ವರ್ಷ ಜುಲೈ 29ರಂದು ಲೋಕಸಭೆಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು.

ಈ ಅವಧಿಯಲ್ಲಿ, ಭಾರತದಲ್ಲಿ ಕೋವಿಡ್‌–19 ಸಂಬಂಧಿತ ಸಾವುಗಳ ಸಂಖ್ಯೆ 47 ಲಕ್ಷ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಕೇಂದ್ರ ಸರ್ಕಾರ ಈ ವರದಿಯನ್ನು ಬಲವಾಗಿ ತಳ್ಳಿ ಹಾಕಿತ್ತು.

ವರದಿಯಲ್ಲಿನ ಪ್ರಮುಖ ಅಂಶಗಳು

  • 2018ರಲ್ಲಿ ಸತ್ತವರ ಸಂಖ್ಯೆ 69.5 ಲಕ್ಷ ಇದ್ದರೆ 2019ರಲ್ಲಿ 76.4 ಲಕ್ಷ 2020ರಲ್ಲಿ 81.1 ಲಕ್ಷ ಜನರು ಮೃತಪಟ್ಟಿದ್ಧಾರೆ. 2021ರಲ್ಲಿ 1.02 ಕೋಟಿ ಜನರು ಮೃತಪಟ್ಟಿದ್ದಾರೆ. ಸಾವುಗಳ ಸಂಖ್ಯೆಯಲ್ಲಿ ಹೆಚ್ಚಳವು ಕೋವಿಡ್‌–19ನ ಪರಿಣಾಮವನ್ನು ತೋರಿಸುತ್ತದೆ

  • ಗುಜರಾತ್‌ ಮಹಾರಾಷ್ಟ್ರ ಮಧ್ಯಪ್ರದೇಶ ಆಂಧ್ರಪ್ರದೇಶ ತಮಿಳುನಾಡು ಉತ್ತರ ಪ್ರದೇಶ ಕರ್ನಾಟಕ ಪಶ್ಚಿಮ ಬಂಗಾಳ ಬಿಹಾರ ಹಾಗೂ ಹರಿಯಾಣ ರಾಜ್ಯಗಳು 2022ರಲ್ಲಿ ಮರಣ ಪ್ರಮಾಣ (ನೋಂದಣಿಯಾದ ಸಾವುಗಳು) ತಗ್ಗುವುದಕ್ಕೆ ಗಮನಾರ್ಹ ಕೊಡುಗೆ ನೀಡಿವೆ

  • 2022ರಲ್ಲಿ 2.54 ಜನನಗಳ ಕುರಿತು ನೋಂದಣಿ ಮಾಡಿಸಲಾಗಿದೆ. 2021ರಲ್ಲಿ ನೋಂದಣಿಯಾದ ಜನನಗಳ ಸಂಖ್ಯೆ 2.42 ಕೋಟಿ. ಇದು ಜನನ ಪ್ರಮಾಣದಲ್ಲಿ ಶೇ 5.1ರಷ್ಟು ಹೆಚ್ಚಳ ತೋರುತ್ತದೆ

  • ಉತ್ತರ ಪ್ರದೇಶ ಮಧ್ಯಪ್ರದೇಶ ಮಹಾರಾಷ್ಟ್ರ ಜಾರ್ಖಂಡ್ ಕರ್ನಾಟಕ ಗುಜರಾತ್ ತೆಲಂಗಾಣ ಛತ್ತೀಸಗಢ ಮತ್ತು ಅಸ್ಸಾಂ ರಾಜ್ಯಗಳು 2022ರಲ್ಲಿ ಜನನ ಪ್ರಮಾಣದಲ್ಲಿನ (ನೋಂದಣಿಯಾದ ಜನನಗಳು) ಹೆಚ್ಚಳಕ್ಕೆ ಗಮನಾರ್ಹ ಕೊಡುಗೆ ನೀಡಿವೆ

  • 2021–22ರಲ್ಲಿ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಜನನ ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.