ADVERTISEMENT

9 ಶಾಲಾ ಮಕ್ಕಳ ಸಾವು: ಬಿಜೆಪಿ ಮುಖಂಡನ ವಿರುದ್ಧ ದೂರು

ಪಿಟಿಐ
Published 26 ಫೆಬ್ರುವರಿ 2018, 19:34 IST
Last Updated 26 ಫೆಬ್ರುವರಿ 2018, 19:34 IST
9 ಶಾಲಾ ಮಕ್ಕಳ ಸಾವು: ಬಿಜೆಪಿ ಮುಖಂಡನ ವಿರುದ್ಧ ದೂರು
9 ಶಾಲಾ ಮಕ್ಕಳ ಸಾವು: ಬಿಜೆಪಿ ಮುಖಂಡನ ವಿರುದ್ಧ ದೂರು   

ಮುಜಫರ್‌ಪುರ /ಬಿಹಾರ: ಫೆಬ್ರುವರಿ 24 ರಂದು ಬೊಲೆರೊ ವಾಹನ ಹರಿದು 9 ಶಾಲಾ ಮಕ್ಕಳು ಸಾವನ್ನಪ್ಪಿದ ಪ್ರಕರಣ ಸಂಬಂಧ ಇಲ್ಲಿನ ಬಿಜೆಪಿ ಮುಖಂಡ ಮನೋಜ್‌ ಬೈತಾ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಅಪಘಾತ ಮಾಡಿದ ಕಾರಿನ ಮುಂಭಾಗದಲ್ಲಿ ಬಿಜೆಪಿ ಧ್ವಜ ಮತ್ತು ಬಿಜೆಪಿ ದಲಿತ ಪ್ರಧಾನ ಕಾರ್ಯದರ್ಶಿ ಎನ್ನುವ ನಾಮಫಲಕ ಆಳವಡಿಸಲಾಗಿತ್ತು.

ಅಪಘಾತ ಸಂಭವಿಸಿದಾಗ ಕಾರಿನಲ್ಲಿ ಬೈತಾ ಜೊತೆ 3 ಜನ ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದರು.

ADVERTISEMENT

ಆರೋಪಿಗಳನ್ನು ರಾಜ್ಯ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂಬ ಆರ್‌ಜೆಡಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ,ಬೈತಾ ಮನೆ ಮೇಲೆ ದಾಳಿ ನಡೆಸಲಾಗಿದೆ. ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು ಎಂದು ಹೇಳಿದ್ದಾರೆ.

*

‘ರಾಮ ಲಲ್ಲಾ’ ಇದ್ದಲ್ಲೇ ಮಂದಿರ: ಕಟಿಯಾರ್‌

ಬಾರಾಬಂಕಿ (ಉತ್ತರ ಪ್ರದೇಶ): ‘ರಾಮ ಲಲ್ಲಾ’ ಮೂರ್ತಿ ಇರುವ ಸ್ಥಳದಲ್ಲಿಯೇ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಆಗಲಿದೆ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ವಿನಯ ಕಟಿಯಾರ್‌ ಹೇಳಿದ್ದಾರೆ.

‘ಅಯೋಧ್ಯೆ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಎಷ್ಟು ಸಮಯ ಬೇಕು ಎಂದು ಹೇಳುವುದಕ್ಕೆ ಸಾಧ್ಯ ಇಲ್ಲ’ ಎಂದಿದ್ದಾರೆ.

‘ರಾಮ ಲಲ್ಲಾ ಮೂರ್ತಿ ಈಗ ಇರುವ ಸ್ಥಳ ಶ್ರೀರಾಮನಿಗೆ ಸೇರಿದ್ದು. ಆ ಮೂರ್ತಿ ಮುಂದೆಯೂ ಅಲ್ಲಿಯೇ ಇರಲಿದೆ.’ ಎಂದು ಅವರು ಹೇಳಿದ್ದಾರೆ.

ದೇಶದ ಪ್ರದೇಶದ ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಜತೆಯಾಗಿ ಕೆಲಸ ಮಾಡುತ್ತಿದ್ದಾರೆ. ಅಪರಾಧಿಗಳು ಸ್ವಯಂಪ್ರೇರಿತರಾಗಿ ಪೊಲೀಸರ  ಮುಂದೆ ಶರಣಾಗುತ್ತಿದ್ದಾರೆ ಎಂದರು.

*

ರೈಲಿಗೆ ಸಿಲುಕಿ ಆರು ಜನರ ಸಾವು

ಲಖನೌ: ಹಾಪುರ ಜಿಲ್ಲೆಯ ಪಿಲ್ಕುವಾ ರೈಲು ನಿಲ್ದಾಣದಲ್ಲಿ ರೈಲಿನ ಎಂಜಿನ್‌ಗೆ ಸಿಲುಕಿ ಆರು ಜನ ಮೃತಪಟ್ಟಿದ್ದಾರೆ.

‘ಏಳು ಯುವಕರು ಹಳಿ ದಾಟುತ್ತಿದ್ದರು. ಆಗ ಅದೇ ಹಳಿಯಲ್ಲಿ ರೈಲು ಬರುತ್ತಿರುವುದನ್ನು ನೋಡಿ ಹಿಂದಕ್ಕೆ ಓಡಲು ಯತ್ನಿಸಿದರು. ಅದೇ ವೇಳೆ  ಆ ಹಳಿಯಲ್ಲಿ  ಬರುತ್ತಿದ್ದ ರೈಲಿನ ಎಂಜಿನ್‌ಗೆ ಸಿಲುಕಿ ಆರು ಮಂದಿ ಮೃತಪಟ್ಟರು’ ಎಂದು ರೈಲ್ವೆ ಎಸ್‌ಪಿ ದುಬೆ ಅವರು ತಿಳಿಸಿದ್ದಾರೆ.

*

ಉಗ್ರ ಸಾವು

ಶ್ರೀನಗರ: ಇಲ್ಲಿನ ಪುಲ್ವಾಮಾ ಜಿಲ್ಲೆಯ ಪೊಲೀಸ್‌ ಠಾಣೆಯ ಮೇಲೆ ನಡೆದ ಗ್ರೆನೇಡ್‌ ದಾಳಿಯಲ್ಲಿ ಉಗ್ರಯೊಬ್ಬ ಮೃತಪಟ್ಟಿದ್ದಾನೆ.

ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಮುಶ್ತಾಕ್‌ ಅಹ್ಮದ್‌ ಚೋಪನ್‌ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.