ADVERTISEMENT

ದೆಹಲಿ: ಹನುಮ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ– 9 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 5:09 IST
Last Updated 17 ಏಪ್ರಿಲ್ 2022, 5:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಾಯುವ್ಯ ಭಾಗದ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಶನಿವಾರ ಹನುಮ ಜಯಂತಿಯ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ 9 ಜನರನ್ನು ಬಂಧಿಸಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಐಪಿಸಿ ಸೆಕ್ಷನ್ 147, 148, 149, 186, 353, 332, 323, 427, 436, 307, 120ಬಿ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯಲ್ಲಿ 8 ಜನರ ಪೊಲೀಸರು ಸೇರಿದಂತೆ 9 ಜನರು ಗಾಯಗೊಂಡಿದ್ದರು.

'ಕಲ್ಲುತೂರಾಟದಲ್ಲಿ ಒಟ್ಟು 9 ಜನರು(8 ಪೊಲೀಸರು ಮತ್ತು ಓರ್ವ ನಾಗರಿಕ) ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಬಿಜೆಆರ್‌ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಮನೆಗೆ ಕಳುಹಿಸಲಾಗಿದೆ. ಒಬ್ಬರು ಸಬ್‌ಇನ್‌ಸ್ಪೆಕ್ಟರ್‌ಗೆ ಗುಂಡಿನ ಗಾಯವಾಗಿದೆ. ಅವರ ಪರಿಸ್ಥಿತಿ ಸ್ಥಿರವಾಗಿದೆ' ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಇದಕ್ಕೂ ಮುನ್ನ, 'ಘಟನೆಗೆ ಸಂಬಂಧಿಸಿದಂತೆ ನಾವು ಎಫ್‌ಐಆರ್ ದಾಖಲಿಸಿದ್ದೇವೆ ಮತ್ತು ತನಿಖೆ ಕೈಗೊಳ್ಳಲಾಗಿದೆ, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ' ಎಂದು ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಪೊಲೀಸ್ ಕಮಿಷನರ್ ದೀಪೇಂದ್ರ ಪಥಾಕ್ ಸುದ್ದಿಸಂಸ್ಥೆ ಐಎಎನ್ಎಸ್‌ಗೆ ತಿಳಿಸಿದ್ದರು.

ಹನುಮ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಶೋಭಾ ಯಾತ್ರೆಯಲ್ಲಿ ಶನಿವಾರ ಸಂಜೆ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ವೇಳೆ ನಡೆದ ಕಲ್ಲುತೂರಾಟದಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದರು. ಉದ್ರಿಕ್ತರು ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಘಟನೆ ನಡೆದ ಸ್ಥಳಕ್ಕೆ ಕೂಡಲೇ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಅನ್ನು ಒದಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.