ADVERTISEMENT

90 ಮತಗಳಿಗೆ ಧನ್ಯವಾದಗಳು: ಇರೋಮ್ ಶರ್ಮಿಳಾ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 8:53 IST
Last Updated 13 ಮಾರ್ಚ್ 2017, 8:53 IST
90 ಮತಗಳಿಗೆ ಧನ್ಯವಾದಗಳು: ಇರೋಮ್ ಶರ್ಮಿಳಾ
90 ಮತಗಳಿಗೆ ಧನ್ಯವಾದಗಳು: ಇರೋಮ್ ಶರ್ಮಿಳಾ   

ಮಣಿಪುರ: ಸೇನಾ ವಿಶೇಷಾಧಿಕಾರ ಕಾಯ್ದೆ ರದ್ದತಿಗಾಗಿ 16 ವರ್ಷಗಳ ಉಪವಾಸ ಸತ್ಯಾಗ್ರಹ ಮುಗಿಸಿದ ಬಳಿಕ ರಾಜಕೀಯ ಪ್ರವೇಶಿಸಿ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಪಿಆರ್‌ಜೆಎ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇರೋಮ್ ಶರ್ಮಿಳಾ ಅವರಿಗೆ ಸಿಕ್ಕಿದ್ದು ಕೇವಲ 90 ಮತಗಳು!

2000 ಇಸವಿ ನವೆಂಬರ್ 2 ಇಂಫಾಲ ಕಣಿವೆಯಲ್ಲಿರುವ ಮಾಲೋಮ್ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ 10 ಮಂದಿಯನ್ನು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಗುಂಡಿಕ್ಕಿ ಕೊಂದರು. 1958ರ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆಯಡಿ ಭದ್ರತಾಪಡೆ ಹಿಂಸಾಪೀಡಿತ ಪ್ರದೇಶದಲ್ಲಿ ಯಾರನ್ನು ಬೇಕಾದರೂ ಗುಂಡಿಕ್ಕಿ ಸಾಯಿಸಬಹುದು ಮತ್ತು ವಾರೆಂಟ್ ಇಲ್ಲದೆ ಬಂಧಿಸಬಹುದು. ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮಾಡಿದ್ದೂ ಅದನ್ನೇ. ಈ ಘಟನೆ 'ಮಾಲೋಮ್ ಹತ್ಯಾಕಾಂಡ'ವೆಂದೇ ಕರೆಯಲ್ಪಡುತ್ತದೆ. ಮರುದಿನ ಮಾಧ್ಯಮಗಳಲ್ಲಿ ಈ ಸುದ್ದಿ ನೋಡಿದ 28ರ ಹರೆಯದ ಕವಿಯತ್ರಿ ಇರೋಮ್ ಚಾನು ಶರ್ಮಿಳಾ ಇಂತಹ ಒಂದು ಕಠಿಣ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅಮಾಯಕ ವ್ಯಕ್ತಿಗಳ ಜೀವ ಅಪಹರಿಸಿದ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆಯನ್ನು ರದ್ದು ಪಡಿಸಬೇಕು ಎಂಬುದು ಶರ್ಮಿಳಾ ಒತ್ತಾಯವಾಗಿತ್ತು. ತಮ್ಮ ಆಗ್ರಹವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಆಕೆ ಕೈಗೊಂಡ ನಿರ್ಧಾರ ಅಮರಣ ಉಪವಾಸ ಸತ್ಯಾಗ್ರಹ.

ಮನುಷ್ಯರನ್ನು ಈ ರೀತಿ ಕೊಲ್ಲುವುದು ಸರಿಯೇ? ಎಂದು ಪ್ರಶ್ನಿಸಿದ ಶರ್ಮಿಳಾ 1958ರ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆ ವಿರುದ್ಧ ಹೋರಾಡಲು ನಿರ್ಧರಿಸಿದ್ದರು. ಅವರ ಆಯ್ಕೆ ಮಾಡಿದ ಹೋರಾಟದ ದಾರಿ ಉಪವಾಸ ಸತ್ಯಾಗ್ರಹವಾಗಿತ್ತು.  ಉಪವಾಸ ಆರಂಭಿಸಿದ ಮೂರು ದಿನಗಳಲ್ಲಿ ಪೊಲೀಸರು ಆಕೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ 309ನೇ ಸೆಕ್ಷನ್ ಪ್ರಕಾರ 'ಆತ್ಮಹತ್ಯೆಗೆ ಯತ್ನ' ಎಂಬ ಆರೋಪವನ್ನು ಹೊರಿಸಿ ಬಂಧಿಸಿದರು. ಆದರೂ ಪಟ್ಟು ಬಿಡದ ಶರ್ಮಿಳಾ ಉಪವಾಸ ಮುಂದುವರಿಸಿ ನ್ಯಾಯ ಸಿಗುವವರೆಗೆ ಹೋರಾಟ ನಡೆಸುವೆ ಎಂದು ಸರ್ಕಾರಕ್ಕೆ ಸೆಡ್ಡು ಹೊಡೆದು ನಿಂತು ಬಿಟ್ಟರು. ಹೀಗೆ 16 ವರ್ಷಗಳ ಕಾಲ ಅವರ ಉಪವಾಸ ಸತ್ಯಾಗ್ರಹ ಮುಂದುವರಿಯಿತು.

ಕಳೆದ ವರ್ಷ ದೆಹಲಿ ಹೈಕೋರ್ಟ್‍ಗೆ ಹಾಜರು ಪಡಿಸಿದಾಗ ಕಣ್ಣೀರಿಟ್ಟ ಶರ್ಮಿಳಾ, ''ನಾನು ಬದುಕಬೇಕು. ನನಗೆ ಬದುಕಬೇಕೆಂಬ ಆಸೆ ಇದೆ. ನನಗೆ ಮದುವೆಯಾಗಬೇಕು, ಪ್ರೀತಿ ಬೇಕಿದೆ. ಇದೆಲ್ಲಾ ಬಯಕೆಗಳನ್ನು ಈಡೇರಿಸುವ ಮುನ್ನ ಮಣಿಪುರದಿಂದ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆಯನ್ನು ತೆಗೆದುಹಾಕಬೇಕು'' ಎಂದು ಹೇಳಿದ್ದರು.

ADVERTISEMENT

16 ವರ್ಷಗಳ ಕಾಲ ಉಪವಾಸ ಸತ್ಯಾಗ್ರಹದ ಮೂಲಕ ಗಳಿಸಲು ಸಾಧ್ಯವಾಗದೇ ಇದ್ದುದನ್ನು ರಾಜಕೀಯ ಹೋರಾಟ ಮೂಲಕ ಗಳಿಸಬಹುದು ಎಂಬ ಉದ್ದೇಶದಿಂದಲೇ ಶರ್ಮಿಳಾ ಕಳೆದ ವರ್ಷ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿ ರಾಜಕೀಯಕ್ಕೆ ಪ್ರವೇಶಿಸಿದರು.

‘ಪೀಪಲ್ ರಿಸರ್ಜೆನ್ಸ್ ಅಂಡ್ ಜಸ್ಟಿಸ್ ಅಲಯನ್ಸ್ (PRJA) ಎಂಬ ಸ್ವತಂತ್ರ ಪಕ್ಷವನ್ನು ಹುಟ್ಟುಹಾಕಿದ ಶರ್ಮಿಳಾ, ವಿಧಾನಸಭಾ ಚುನಾವಣೆಯಲ್ಲಿ ಮಣಿಪುರ ಮುಖ್ಯಮಂತ್ರಿ  ಇಬೋಬಿ ಸಿಂಗ್ ಅವರ ವಿರುದ್ಧ ತೋಬಲ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಶರ್ಮಿಳಾ ಅವರಿಗೆ ಸಿಕ್ಕಿದ್ದು ಕೇವಲ 90 ಮತಗಳು.

ಮಣಿಪುರದ ಜನರಿಗಾಗಿ 16 ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿ, ರಾಜ್ಯದ ಏಳಿಗೆಗಾಗಿ ಶ್ರಮಿಸಿದ್ದ 'ಉಕ್ಕಿನ ಮಹಿಳೆ'ಗೆ ಜನರ ಬೆಂಬಲ ಸಿಗದೇ ಹೋಯಿತು. ಈ ಪರಾಭವದ ಮೂಲಕ ಶರ್ಮಿಳಾ ಅವರ ರಾಜಕೀಯ ಕನಸು ಕೂಡಾ ನುಚ್ಚುನೂರಾಯಿತು.

ನಾನು ಇನ್ನು ಮಂದೆ ಇಲ್ಲಿ ಕಾಲಿಡಲ್ಲ ಎಂದು ಹೇಳಿ ಶರ್ಮಿಳಾ ಹೊರ ನಡೆದಾಗ ಅವರ ಕಣ್ಣಲ್ಲಿ ನೀರಿತ್ತು. ರಾಜಕೀಯ ರಂಗದಲ್ಲಿ ತಮಗೆ ಹಿನ್ನಡೆಯಾಗಿದ್ದಕ್ಕೆ ನೊಂದಿರುವ ಶರ್ಮಿಳಾ ತಮ್ಮ ಫೇಸ್‍ಬುಕ್‍ನಲ್ಲಿ  ‘Thanks for 90 votes’ ಎಂದು ಬರೆದು ರಾಜಕೀಯದ ಹಾದಿ ತೊರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.