ADVERTISEMENT

ತಬ್ಲೀಗ್‌ ಜಮಾತ್‌ | ಒಂದೇ ದಿನ 9,000 ಮಂದಿ ಕ್ವಾರಂಟೈನ್‌

ಸಂಪರ್ಕಿತರ ಗುರುತು ಪತ್ತೆ ಕಾರ್ಯಾಚರಣೆ * ದೇಶದಲ್ಲಿ ಸಾವಿನ ಸಂಖ್ಯೆ 73ಕ್ಕೆ ಏರಿಕೆ

ಪಿಟಿಐ
Published 2 ಏಪ್ರಿಲ್ 2020, 19:33 IST
Last Updated 2 ಏಪ್ರಿಲ್ 2020, 19:33 IST
ಮಧ್ಯಪ್ರದೇಶದ ಇಂದೋರ್‌ನಲ್ಲಿ ಕೊರೊನಾ ಸೋಂಕಿತರ ತಪಾಸಣೆಗೆ ತೆರಳಿದ್ದ ವೈದ್ಯರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದರು
ಮಧ್ಯಪ್ರದೇಶದ ಇಂದೋರ್‌ನಲ್ಲಿ ಕೊರೊನಾ ಸೋಂಕಿತರ ತಪಾಸಣೆಗೆ ತೆರಳಿದ್ದ ವೈದ್ಯರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದರು   
""

ನವದೆಹಲಿ: ಕೊರೊನಾ ವೈರಾಣು ಹರಡುವಿಕೆ ತಡೆ ಪ್ರಯತ್ನಗಳು ಇನ್ನಷ್ಟು ಸಮರ್ಥವಾಗಿ ಮುಂದುವರಿದಿವೆ. ಒಂದೆಡೆ, ಸೋಂಕಿತರು ಮತ್ತು ಅವರ ಸಂಪರ್ಕ‌ಕ್ಕೆ ಬಂದವರನ್ನು ಗುರುತಿಸುವ ಕಾರ್ಯ ಜೋರಾಗಿ ನಡೆದಿದೆ. ಇನ್ನೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳ ಜತೆಗೆ ವಿಡಿಯೊ ಕಾನ್ಫರೆನ್ಸ್‌ ನಡೆಸಿ, ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ವೈರಾಣು ಪ್ರಸರಣ ತಡೆಗೆ ಯುದ್ಧೋಪಾದಿಯಲ್ಲಿ ಕೆಲಸ ಮಾಡುವ ಅಗತ್ಯವನ್ನು ಮನದಟ್ಟು ಮಾಡಿದ್ದಾರೆ.

ತಬ್ಲೀಗ್‌ ಜಮಾತ್‌ನ ಧಾರ್ಮಿಕ ಸಭೆಗೆ ಸಂಬಂಧಿಸಿ, ಕೊರೊನಾ ವೈರಾಣು ಹರಡುವಿಕೆ ತಡೆಯುವ ದಿಸೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿರುಸಿನಿಂದ ಕೈಗೊಂಡ ಕ್ರಮಗಳು ಫಲ ನೀಡಿವೆ. ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಮತ್ತು ಅವರ ಸಂಪರ್ಕಕ್ಕೆ ಬಂದ 9 ಸಾವಿರ ಜನರನ್ನು ಗುರುತಿಸಿ ಗುರುವಾರದಿಂದ ಪ್ರತ್ಯೇಕವಾಗಿ ಇರಿಸಲಾಗಿದೆ. ಇವರಲ್ಲಿ 1,306 ಮಂದಿ ವಿದೇಶಿಯರು ಸೇರಿದ್ದಾರೆ.

ದೆಹಲಿಯಲ್ಲಿ ತಬ್ಲೀಗ್‌ ಜಮಾತ್‌ನ ಎರಡು ಸಾವಿರಕ್ಕೂ ಹೆಚ್ಚು ಸದಸ್ಯರ ಪೈಕಿ ರೋಗ ಲಕ್ಷಣಗಳು ಕಾಣಿಸಿಕೊಂಡ 334 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 1,804 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ. ಇವರಲ್ಲಿ 250 ಮಂದಿ ವಿದೇಶಿಯರು ಎಂದು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲಿಲ ಶ್ರೀವಾಸ್ತವ ತಿಳಿಸಿದ್ದಾರೆ.

ADVERTISEMENT

ದೇಶದಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್‌ ಮೇಲೆ ಕೇಂದ್ರ ಗೃಹ ಸಚಿವಾಲಯವು ನಿರಂತರ ನಿಗಾ ಇರಿಸಿದೆ. ಲಾಕ್‌ಡೌನ್‌ ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಅವರು ರಾಜ್ಯಗಳಿಗೆ ಪತ್ರ ಬರೆದಿದ್ದಾರೆ.

ದಿಗ್ಬಂಧನ: ಸಲಹೆ ಕೇಳಿದ ಪ್ರಧಾನಿ ಮೋದಿ
ಲಾಕ್‌ಡೌನ್‌ ಹಿಂದಕ್ಕೆ ಪಡೆದ ಬಳಿಕ ಜನರು ಹಂತಹಂತವಾಗಿ ಹೊರಗೆ ಬರುವಂತಾಗಬೇಕು. ಅದಕ್ಕಾಗಿ, ಸಮಾನ ಕಾರ್ಯತಂತ್ರವನ್ನು ಸೂಚಿಸುವಂತೆ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿಗಳನ್ನು ಗುರುವಾರ ಕೋರಿದ್ದಾರೆ.

ಕೊರೊನಾ ವಿರುದ್ಧದ ಹೋರಾಟದ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಲಾಕ್‌ಡೌನ್‌ ಅನ್ನು ಎಲ್ಲ ರಾಜ್ಯಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಕರೆ ಕೊಟ್ಟರು.

21 ದಿನಗಳ ದಿಗ್ಬಂಧನದಿಂದ ಸ್ವಲ್ಪ ಮಟ್ಟಿನ ಯಶಸ್ಸು ಸಿಕ್ಕಿದೆ. ಮುಂದಿನ ಕೆಲವು ವಾರಗಳಲ್ಲಿ ಸೋಂಕು ಪರೀಕ್ಷೆ, ಗುರುತಿಸುವಿಕೆ ಮತ್ತು ಪ್ರತ್ಯೇಕವಾಗಿ ಇರಿಸುವಿಕೆಯನ್ನು ಹೆಚ್ಚಿಸುವ ಮೂಲಕ ಸೋಂಕು ಹರಡುವಿಕೆ ತಡೆಯಬೇಕು ಎಂದು ಪ್ರಧಾನಿ ಹೇಳಿದರು.

ಕೆಲವು ದೇಶಗಳಲ್ಲಿ ಸೋಂಕಿನ ಎರಡನೇ ಅಲೆ ಕಾಣಿಸಿಕೊಂಡಿದೆ ಎಂಬ ಆತಂಕಕಾರಿ ವಿಚಾರವನ್ನು ಅವರು ಪ್ರಸ್ತಾಪಿಸಿದರು. ಪಿಡುಗು
ತಡೆಗೆ ಎಲ್ಲ ರಾಜ್ಯಗಳು ಸಮುದಾಯ ಆಧರಿತ ಕಾರ್ಯತಂತ್ರವನ್ನು ಅನುಸರಿಸಬೇಕು ಎಂದು ಸೂಚಿಸಿದರು.

ದೇಶದ ಹಲವು ಭಾಗಗಳಲ್ಲಿ ಕೊಯ್ಲು ಋತು ಆರಂಭವಾಗಿದೆ. ಹಾಗಾಗಿ, ಕೃಷಿ ಚಟುವಟಿಕೆಗಳಿಗೆ ದಿಗ್ಬಂಧನದಿಂದ ವಿನಾಯಿತಿ ನೀಡಬಹುದು. ಆದರೆ, ಹೊಲದಲ್ಲಿ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯನ್ನು ಕೈಬಿಡಬಾರದು ಎಂದು ಪ್ರಧಾನಿ ಹೇಳಿದರು.

ಬಿಕ್ಕಟ್ಟಿನಿಂದ ಪಾರಾಗಲು ಆರ್ಥಿಕ ಮತ್ತು ವೈದ್ಯಕೀಯ ಸಂಪನ್ಮೂಲ ನೆರವು ಬೇಕು ಎಂದು ಕೆಲವು ಮುಖ್ಯಮಂತ್ರಿಗಳು ಪ್ರಧಾನಿಯನ್ನು ಕೋರಿದರು.

ಲಾಕ್‌ಡೌನ್‌ ಹೇರಿಕೆಯ ಬಳಿಕ ಮೋದಿ ಅವರು ಮುಖ್ಯಮಂತ್ರಿಗಳ ಜತೆಗೆ ಎರಡನೇ ಬಾರಿ ವಿಡಿಯೊ ಕಾನ್ಫರೆನ್ಸ್‌ ನಡೆಸಿದರು.

ಮೋದಿ ವಿಡಿಯೊ ಸಂದೇಶ ಇಂದು: ದೇಶದ ಜನರಿಗಾಗಿ ಪ್ರಧಾನಿಯವರು ವಿಡಿಯೊ ಸಂದೇಶವನ್ನು ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಬಿಡುಗಡೆ ಮಾಡಲಿದ್ದಾರೆ. ಈ ವಿಚಾರವನ್ನು ಟ್ವೀಟ್‌ ಮೂಲಕ ಅವರು ತಿಳಿಸಿದ್ದಾರೆ.

ಮಾಹಿತಿಗೆ ವೆಬ್‌ ಪೋರ್ಟಲ್‌: ಸುಳ್ಳು ಸುದ್ದಿ ಮತ್ತು ವದಂತಿಗಳು ಜನರಲ್ಲಿ ಆತಂಕ ಹುಟ್ಟಿಸಬಹುದು. ಹಾಗಾಗಿ, ಜನರು ಮಾಹಿತಿಯನ್ನು ದೃಢೀಕರಿಸಲು ಸಾಧ್ಯವಾಗುವಂತಹ ಪೋರ್ಟಲ್‌ ಆರಂಭಿಸುವಂತೆ ವಾರ್ತಾ ಮತ್ತು ಪ್ರಸಾರ ಸಚಿವಾಲಯವನ್ನು ಗೃಹ ಸಚಿವಾಲಯ ಕೋರಿದೆ. ಮಹಾ ನಿರ್ದೇಶಕರ ನೇತೃತ್ವದಲ್ಲಿ ವಿಶೇಷ ಘಟಕವೊಂದನ್ನು ಪ್ರಸಾರ ಸಚಿವಾಲಯವು ಆರಂಭಿಸಿದೆ. ಜನರು ಈ ಪೋರ್ಟಲ್‌ಗೆ (pibfactcheck@gmail.com) ಬರೆದು ತಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು. ಇಂತಹ ಘಟಕಗಳನ್ನು ರಾಜ್ಯ ಮಟ್ಟದಲ್ಲಿಯೂ ಆರಂಭಿಸುವಂತೆ ಸೂಚಿಸಲಾಗಿದೆ.

ಪ್ರತಿಕಾಯ ಪರೀಕ್ಷೆ: ಕೊರೊನಾ ವೈರಸ್‌ ಹರಡುವಿಕೆಗೆ ಸಂಬಂಧಿಸಿದ ಸೂಕ್ಷ್ಮ ಪ್ರದೇಶಗಳಲ್ಲಿ, ದೇಹದೊಳಗೆ ಪ್ರವೇಶಿಸಿದ ಹಾನಿಕಾರಕ ಅಂಶಗಳ ವಿರುದ್ಧ ಹೋರಾಡಲು ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳ (ಆ್ಯಂಟಿಬಾಡಿ) ಪರೀಕ್ಷೆಗಳನ್ನು ವ್ಯಾಪಕವಾಗಿ ನಡೆಸಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ (ಐಸಿಎಂಆರ್‌) ಶಿಫಾರಸು ಮಾಡಿದೆ. ಇದರಿಂದ ಕೊರೊನಾ ಪ್ರಕರಣಗಳನ್ನು ತ್ವರಿತವಾಗಿ ಪತ್ತೆ ಮಾಡಲು ಸಾಧ್ಯ ಎಂದು ಪರಿಷತ್‌ ಹೇಳಿದೆ.

ವಿದೇಶಿ ಸರ್ಕಾರದ ನೆರವು ಬೇಡ:ಪಿಎಂ ಕೇರ್ಸ್‌ ನಿಧಿಗೆ ಬೇರೆ ದೇಶಗಳ ಸರ್ಕಾರಗಳಿಂದ ದೇಣಿಗೆ ಸ್ವೀಕರಿಸಲಾಗುವುದಿಲ್ಲ. ಆದರೆ, ಸಾಗರೋತ್ತರ ಭಾರತೀಯ ಪ್ರಜೆಗಳು, ವಿದೇಶಿಯರು ಮತ್ತು ಸರ್ಕಾರೇತರ ಸಂಸ್ಥೆಗಳಿಂದ ನೆರವು ಪಡೆಯಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

*
ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಅವುಗಳನ್ನು ಪ್ರತ್ಯೇಕಿಸಿ, ವೈರಾಣು ಅಲ್ಲಿಂದ ಹೊರಗೆ ಪಸರಿಸದಂತೆ ಮಾಡಲು ಯುದ್ಧೋಪಾದಿಯಲ್ಲಿ ಕೆಲಸ ಮಾಡುವುದು ಅನಿವಾರ್ಯ.
–ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.