ADVERTISEMENT

ಪೂರ್ವ ಲಡಾಖ್‌ನ ಹಿಂಸಾತ್ಮಕ ಗಡಿ ಸಂಘರ್ಷಕ್ಕೆ ಒಂದು ವರ್ಷ: ಹುತಾತ್ಮರಿಗೆ ಗೌರವ

ಪೂರ್ವ ಲಡಾಖ್‌ನ ಹಿಂಸಾತ್ಮಕ ಗಡಿ ಸಂಘರ್ಷಕ್ಕೆ ಒಂದು ವರ್ಷ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 19:31 IST
Last Updated 15 ಜೂನ್ 2021, 19:31 IST
ಫೈರ್ ಅಂಡ್ ಫ್ಯೂರಿ ಕೋರ್‌ನ ಮೇಜರ್ ಜನರಲ್ ಆಕಾಶ್ ಕೌಶಿಕ್ ಅವರು ಲೇಹ್‌ನ ಯುದ್ಧ ಸ್ಮಾರಕದಲ್ಲಿ ಗಾಲ್ವನ್ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದರು–ಪಿಟಿಐ ಚಿತ್ರ
ಫೈರ್ ಅಂಡ್ ಫ್ಯೂರಿ ಕೋರ್‌ನ ಮೇಜರ್ ಜನರಲ್ ಆಕಾಶ್ ಕೌಶಿಕ್ ಅವರು ಲೇಹ್‌ನ ಯುದ್ಧ ಸ್ಮಾರಕದಲ್ಲಿ ಗಾಲ್ವನ್ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದರು–ಪಿಟಿಐ ಚಿತ್ರ   

ಶ್ರೀನಗರ: ಸರಿಯಾಗಿ ಒಂದು ವರ್ಷದ ಹಿಂದೆ ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ನಡೆದ ಕಾದಾಟದಲ್ಲಿ ಹುತಾತ್ಮರಾದ ಭಾರತದ 20 ಯೋಧರಿಗೆ ಸೇನಾಪಡೆಯು ಮಂಗಳವಾರ ಗೌರವ ಸಲ್ಲಿಸಿತು.

2020ರ ಜೂನ್ 15ರಂದು ಪೂರ್ವ ಲಡಾಖ್‌ನ ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಇರುವ ಗಾಲ್ವನ್ ಕಣಿವೆಯಲ್ಲಿ 16ನೇ ಬಿಹಾರ ರೆಜಿಮೆಂಟ್‌ಗೆ ಸೇರಿದ ಕರ್ನಲ್ ಸಂತೋಷ್ ಬಾಬು ಸೇರಿದಂತೆ 20 ಯೋಧರು ಮೃತಪಟ್ಟಿದ್ದರು. ಚೀನಾ ಸೈನಿಕರ ಜೊತೆ ಹಿಂಸಾತ್ಮಕ ಹೊಡೆದಾಟ ನಡೆದಿತ್ತು. ಈ ಘರ್ಷಣೆಯಲ್ಲಿ ನೂರಾರು ಸೈನಿಕರು ಕಲ್ಲು, ದೊಣ್ಣೆ, ಕಬ್ಬಿಣದ ಸಲಾಕೆ ಹಾಗೂ ಇತರೆ ಪರಿಕರಗಳನ್ನು ಹಿಡಿದು ಸೆಣಸಿದ್ದರು.

ಘರ್ಷಣೆಯ ಮೊದಲ ವಾರ್ಷಿಕದ ದಿನ ಫೈರ್ ಅಂಡ್ ಫ್ಯೂರಿ ಕೋರ್‌ ಕಡೆಯಿಂದ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ‘ಫೈರ್ ಅಂಡ್ ಫ್ಯೂರಿ ಕೋರ್‌ನ ಮೇಜರ್ ಜನರಲ್ ಆಕಾಶ್ ಕೌಶಿಕ್ ಅವರು ಯುದ್ಧ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದರು’ ಎಂದು ಹೇಳಿದ್ದಾರೆ.

ADVERTISEMENT

ಅತ್ಯಂತ ಕಡಿದಾದ ಎತ್ತರದ ಭೂಪ್ರದೇಶದಲ್ಲಿ ಹೋರಾಡಿದ ಮತ್ತು ರಾಷ್ಟ್ರದ ಸೇವೆಯಲ್ಲಿ ಅಪ್ರತಿಮ ತ್ಯಾಗ ಮಾಡಿದ ಧೀರ ಸೈನಿಕರಿಗೆ ರಾಷ್ಟ್ರವು ಎಂದಿಗೂ ಕೃತಜ್ಞವಾಗಿರುತ್ತದೆ ಎಂದು ಹೇಳಿದ್ದಾರೆ.

ಸೈನಿಕರ ಹತ್ಯೆಯ ಬಳಿಕ ಭಾರತ ಹಾಗೂ ಚೀನಾ ನಡುವೆ ಯುದ್ಧದ ಕಾರ್ಮೋಡ ಆವರಿಸಿತ್ತು. 11 ಸುತ್ತಿನ ಮಾತುಕತೆಯ ಬಳಿಕ ಉಭಯ ಪಡೆಗಳು ಒಮ್ಮತಕ್ಕೆ ಬಂದವು. ಆದರೂ ಎರಡೂ ಪಡೆಗಳು ವಿವಾದಿತ ಜಾಗದ ತಮ್ಮ ನೆಲೆಗಳಲ್ಲಿ ಸೈನಿಕರು ಹಾಗೂ ಕಣ್ಗಾವಲು ಹೆಚ್ಚಿಸಿದ್ದವು.

ಕೆಚ್ಚು ಸ್ಮರಿಸಿದ ಸೇನಾ ಮುಖ್ಯಸ್ಥ

ಚೀನಾದ ಆಕ್ರಮಣ ಮೆಟ್ಟಿನಿಂತು ದೇಶದ ಸಮಗ್ರತೆ ಕಾಪಾಡಿ ಪ್ರಾಣ ತ್ಯಜಿಸಿದ 20 ಸೈನಿಕರ ಶೌರ್ಯವನ್ನು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಮಂಗಳವಾರ ಕೊಂಡಾಡಿದರು.

‘ಕಷ್ಟಕರ ಭೂಪ್ರದೇಶದಲ್ಲಿ ಎದುರಾಳಿಯೊಂದಿಗೆ ಹೋರಾಡಿದ ಸೈನಿಕರ ಸರ್ವೋಚ್ಚ ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಸಂತೋಷ್ ಬಾಬು ಪ್ರತಿಮೆ ಅನಾವರಣ

ಸೂರ್ಯಪೇಟೆ, (ತೆಲಂಗಾಣ): ಗಾಲ್ವನ್ ಘರ್ಷಣೆಯಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಅವರ ಪ್ರತಿಮೆಯನ್ನು ತೆಲಂಗಾಣದ ಸೂರ್ಯಪೇಟೆಯಲ್ಲಿ ಸಚಿವ ಕೆ.ಟಿ. ರಾಮರಾವ್ ಅವರು ಮಂಗಳವಾರ ಅನಾವರಣ ಮಾಡಿದರು.

ಸಂತೋಷ್ ಬಾಬು ಅವರ ಕುಟುಂಬಕ್ಕೆ ತೆಲಂಗಾಣ ಸರ್ಕಾರ ₹5 ಕೋಟಿ ನೆರವು, ಅವರ ಪತ್ನಿಗೆ ಸರ್ಕಾರಿ ಉದ್ಯೋಗ ಹಾಗೂ ಹೈದರಾಬಾದ್‌ನಲ್ಲಿ ಫ್ಲಾಟ್ ನೀಡಿದೆ.

‘ವರ್ಷ ಕಳೆದರೂ ಸ್ಪಷ್ಟತೆಯಿಲ್ಲ’

ಪೂರ್ವ ಲಡಾಖ್‌ನಲ್ಲಿ ಯಾವುದೇ ಅತಿಕ್ರಮಣ ನಡೆದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥನೆ ಬಗ್ಗೆ ವರ್ಷ ಕಳೆದರೂ ಸ್ಪಷ್ಟತೆ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಗಾಲ್ವನ್‌ ಕಣಿವೆಯಲ್ಲಿ ಭಾರತೀಯ ಪಡೆಗಳು ಮಾಡಿದ ಸರ್ವೋಚ್ಚ ತ್ಯಾಗವನ್ನು ಸೋನಿಯಾ ನೆನಪಿಸಿಕೊಂಡರು. ವಿವಾದಿತ ಜಾಗದಲ್ಲಿ ಯಥಾಸ್ಥಿತಿ ಮರುಸ್ಥಾಪನೆಗೆ ತೆಗೆದುಕೊಂಡ ಕ್ರಮಗಳನ್ನು ಇಡೀ ದೇಶಕ್ಕೆ ತಿಳಿಸಬೇಕು ಎಂದು ಪ್ರಧಾನಿಗೆ ಅವರು ಜ್ಞಾಪಿಸಿದರು.

‘ಘಟನೆ ನಡೆದ ಸಂದರ್ಭಗಳ ಬಗ್ಗೆ ಸರ್ಕಾರವು ವಿವರವಾದ ಮಾಹಿತಿಯನ್ನು ರಾಷ್ಟ್ರದ ಜನರಿಗೆ ತಿಳಿಸುತ್ತದೆ ಎಂದು ತಾಳ್ಮೆಯಿಂದ ಕಾಯುತ್ತಿದ್ದೇವೆ. ಯಾವುದೇ ಉಲ್ಲಂಘನೆ ಕೂಡ ಅತಿಕ್ರಮಣ ಎಂದು ಪ್ರಧಾನಿ ಕೊನೆಯದಾಗಿ ಹೇಳಿದ್ದರು. ಆದರೆ ಇನ್ನೂ ಯಾವುದೇ ಸ್ಪಷ್ಟತೆ ಲಭ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.