ADVERTISEMENT

ಆಧಾರ್‌ ಅಪ್‌ಡೇಟ್‌: ಮಕ್ಕಳಿಗೆ ಶುಲ್ಕ ಮನ್ನಾ

ಪಿಟಿಐ
Published 4 ಅಕ್ಟೋಬರ್ 2025, 23:30 IST
Last Updated 4 ಅಕ್ಟೋಬರ್ 2025, 23:30 IST
ಆಧಾರ್‌
ಆಧಾರ್‌   

ನವದೆಹಲಿ: ಆಧಾರ್‌ ಕಾರ್ಡ್‌ನಲ್ಲಿ ಮಕ್ಕಳ ಬಯೋಮೆಟ್ರಿಕ್‌ ಅಪ್‌ಡೇಟ್‌ ಮಾಡಲು ವಿಧಿಸಲಾಗುತ್ತಿದ್ದ ಶುಲ್ಕವನ್ನು ವರ್ಷದ ಮಟ್ಟಿಗೆ ಮನ್ನಾ ಮಾಡಲಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಶನಿವಾರ ತಿಳಿಸಿದೆ.

ಅಕ್ಟೋಬರ್‌ 1ರಿಂದ ಇದು ಜಾರಿಗೆ ಬಂದಿದ್ದು, ಒಂದು ವರ್ಷದವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ಹೇಳಿದೆ.

ಮಕ್ಕಳ ‘ಕಡ್ಡಾಯ ಬಯೊಮೆಟ್ರಿಕ್‌ ನವೀಕರಣ’ಕ್ಕೆ (ಎಂಬಿಯು) ಶುಲ್ಕ ಮನ್ನಾ ಮಾಡಿರುವುದರಿಂದ 6 ಕೋಟಿ ಮಕ್ಕಳಿಗೆ ಉಪಯುಕ್ತವಾಗಲಿದೆ ಎಂದು ಅದು ತಿಳಿಸಿದೆ.

ADVERTISEMENT

ಐದು ವರ್ಷದೊಳಗಿನ ಮಕ್ಕಳ ಭಾವಚಿತ್ರ, ಹೆಸರು, ಜನ್ಮ ದಿನಾಂಕ, ಲಿಂಗ, ವಿಳಾಸ ಮತ್ತು ಜನನ ಪ್ರಮಾಣ ಪತ್ರವನ್ನು ಒದಗಿಸಿ ಆಧಾರ್‌ಗೆ ನೋಂದಾಯಿಸಬಹುದು. ಈ ವಯಸ್ಸಿನ ಮಕ್ಕಳಲ್ಲಿ ಬೆರಳಚ್ಚು ಮತ್ತು ಕಣ್ಣಿನ ಪಾಪೆ (ಐರಿಸ್‌) ಅಷ್ಟಾಗಿ ಪಕ್ವವಾಗಿರುವುದಿಲ್ಲ. ಹೀಗಾಗಿ ಅವರ ಬಯೋಮೆಟ್ರಿಕ್‌ ದಾಖಲಿಸಲು ಆಗುವುದಿಲ್ಲ.

ಹಾಲಿ ನಿಯಮದ ಪ್ರಕಾರ ಮಕ್ಕಳಿಗೆ ಐದು ವರ್ಷಗಳು ತುಂಬಿದ ಬಳಿಕ ಅವರ ಬೆರಳಚ್ಚು, ಕಣ್ಣಿನ ಪಾಪೆ ಮತ್ತು ಭಾವಚಿತ್ರಗಳನ್ನು ಆಧಾರ್‌ನಲ್ಲಿ ಅಪ್‌ಡೇಟ್‌ ಮಾಡಬೇಕು. ಆ ಮಕ್ಕಳು 15ರಿಂದ 17ರ ನಡುವಿನ ವಯಸ್ಸಿನಲ್ಲಿ ಇರುವಾಗ ಎರಡನೇ ಬಾರಿಗೆ ಅವುಗಳನ್ನು ಅಪ್‌ಡೇಟ್‌ ಮಾಡಬೇಕು. ಹೀಗೆ 5ರಿಂದ 7 ವರ್ಷ ಮತ್ತು 15ರಿಂದ 17 ವರ್ಷದ ನಡುವಿನ ಮಕ್ಕಳ ಬಯೋಮೆಟ್ರಿಕ್‌ ಅಪ್‌ಡೇಟ್‌ಗೆ ಈಗ ಶುಲ್ಕ ವಿಧಿಸುವುದಿಲ್ಲ. ಆ ನಂತರ ಪ್ರತಿ ಅಪ್‌ಡೇಟ್‌ಗೆ ₹125 ವಿಧಿಸಲಾಗುತ್ತದೆ ಎಂದು ಪ್ರಾಧಿಕಾರ ಹೇಳಿದೆ.

ಪ್ರಾಧಿಕಾರದ ಈ ನಿರ್ಧಾರದಿಂದ 5ರಿಂದ 17 ವರ್ಷದೊಳಗಿನ ಎಲ್ಲ ಮಕ್ಕಳಿಗೂ ‘ಕಡ್ಡಾಯ ಬಯೋಮೆಟ್ರಿಕ್‌ ಅಪ್‌ಡೇಟ್‌’ ವರ್ಷದ ಮಟ್ಟಿಗೆ ಉಚಿತವಾಗಿದೆ ಎಂದು ಪ್ರಕಟಣೆ ತಿಳಿಸಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.