ADVERTISEMENT

ಬ್ರ್ಯಾಂಡಿಂಗ್‌, ಜಾಹೀರಾತು ಪ್ರದರ್ಶನ: ಅದಾನಿ ಸಮೂಹದಿಂದ ನಿಯಮ ಉಲ್ಲಂಘನೆ

ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರ ರಚಿಸಿದ್ದ ಸಮಿತಿಗಳಿಂದ ಪತ್ತೆ

ಪಿಟಿಐ
Published 21 ಜುಲೈ 2021, 8:27 IST
Last Updated 21 ಜುಲೈ 2021, 8:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ (ಪಿಟಿಐ): ಬ್ರ್ಯಾಂಡಿಂಗ್‌ಗೆ ಸಂಬಂಧಿಸಿ ಒಪ್ಪಂದಗಳಲ್ಲಿ ಉಲ್ಲೇಖಿಸಿರುವ ನಿಯಮಗಳನ್ನು ಅದಾನಿ ಸಮೂಹ ಉಲ್ಲಂಘಿಸಿರುವುದನ್ನು ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರ (ಎಎಐ) ನೇಮಿಸಿದ್ದ ಮೂರು ಸಮಿತಿಗಳು ಪತ್ತೆ ಮಾಡಿವೆ.

ಅಹಮದಾಬಾದ್‌, ಮಂಗಳೂರು ಹಾಗೂ ಲಖನೌ ವಿಮಾನನಿಲ್ದಾಣಗಳ ನಿರ್ವಹಣೆಯ ಜವಾಬ್ದಾರಿಯನ್ನು ಅದಾನಿ ಸಮೂಹಕ್ಕೆ ಕಳೆದ ವರ್ಷ ನೀಡಲಾಗಿದೆ. ಈ ವಿಮಾನ ನಿಲ್ದಾಣಗಳಲ್ಲಿ ಬ್ರ್ಯಾಂಡಿಂಗ್, ಜಾಹೀರಾತು ಫಲಕಗಳ ಪ್ರದರ್ಶನಕ್ಕೆ ಸಂಬಂಧಿಸಿ, ಎಎಐ ಹಾಗೂ ಅದಾನಿ ಸಮೂಹದ ನಡುವೆ ನಡೆದಿರುವ ಒಪ್ಪಂದದಲ್ಲಿ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ.

ಈ ಮೂರು ವಿಮಾನ ನಿಲ್ದಾಣಗಳನ್ನು ಕ್ರಮವಾಗಿ ಅದಾನಿ ಅಹಮದಾಬಾದ್‌ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌ (ಎಎಐಎಲ್‌), ಅದಾನಿ ಮಂಗಳೂರು ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌ (ಎಎಂಐಎಎಲ್‌) ಹಾಗೂ ಅದಾನಿ ಲಖನೌ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌ (ಎಎಲ್‌ಐಎಎಲ್‌) ಎಂಬ ಕಂಪನಿಗಳು ನಿರ್ವಹಿಸುತ್ತಿವೆ.

ADVERTISEMENT

ಕಂಪನಿಗಳ ಹೆಸರುಗಳಿರುವ ಫಲಕಗಳ ಅಳತೆ, ಅವುಗಳನ್ನು ಪ್ರದರ್ಶಿಸುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ಕಂಪನಿಗಳು ಉಲ್ಲಂಘಿಸಿರುವುದನ್ನು ಈ ಸಮಿತಿಗಳು ಜನವರಿಯಲ್ಲಿ ಪತ್ತೆ ಮಾಡಿದ್ದವು. ಇದರ ಬೆನ್ನಲ್ಲೇ, ಈ ಮೂರು ವಿಮಾನ ನಿಲ್ಧಾಣಗಳಲ್ಲಿ ಬ್ರ್ಯಾಂಡಿಂಗ್‌ ಹಾಗೂ ಜಾಹೀರಾತು ಫಲಕಗಳ ಪ್ರದರ್ಶನ ಸರಿಪಡಿಸುವ ಕಾರ್ಯಕ್ಕೆ ಕಂಪನಿಗಳು ಚಾಲನೆ ನೀಡಿವೆ.

‘ಅಹಮದಾಬಾದ್‌ ವಿಮಾನನಿಲ್ದಾಣದಲ್ಲಿರುವ ಜಾಹೀರಾತು ಫಲಕಗಳ ಅಳವಡಿಕೆಯಲ್ಲಿ ನಿಯಮಾನುಸಾರ ಬದಲಾವಣೆ ಪೂರ್ಣಗೊಂಡಿದೆ. ಲಖನೌ ಹಾಗೂ ಮಂಗಳೂರು ವಿಮಾನನಿಲ್ದಾಣಗಳಲ್ಲಿ ಈ ಕಾರ್ಯ ನಡೆಯುತ್ತಿದೆ’ ಎಂದು ಎಎಐ ತಿಳಿಸಿದೆ.

ಈ ವಿಷಯ ಕುರಿತ ವಿವಿಧ ದಾಖಲೆಗಳನ್ನು ಆರ್‌ಟಿಐನಡಿ ಅರ್ಜಿ ಸಲ್ಲಿಸಿ ಪಡೆದುಕೊಂಡಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.