ADVERTISEMENT

ದೆಹಲಿ ಚುನಾವಣೆ | ಆಪ್ ಪ್ರಣಾಳಿಕೆ ಬಿಡುಗಡೆ: ಪ್ರಚಾರ ಬಿರುಸು

ಏಜೆನ್ಸೀಸ್
Published 4 ಫೆಬ್ರುವರಿ 2020, 10:19 IST
Last Updated 4 ಫೆಬ್ರುವರಿ 2020, 10:19 IST
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್   

ನವದೆಹಲಿ: ಆಮ್ ಆದ್ಮಿ ಪಕ್ಷದ (ಆಪ್) ಚುನಾವಣಾ ಪ್ರಣಾಳಿಕೆ ಮಂಗಳವಾರ ಬಿಡುಗಡೆಯಾಯಿತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೊಡಿಯಾ ಪ್ರಣಾಳಿಕೆ ಬಿಡುಗಡೆ ಮಾಡಿದರು.

‘ನಮ್ಮ ಸರ್ಕಾರ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬಂದರೆ ಶಾಲೆಗಳಲ್ಲಿದೇಶಭಕ್ತಿ ಕಲಿಸುವಪಠ್ಯಕ್ರಮ ಆರಂಭಿಸುತ್ತೇವೆ.ಮಕ್ಕಳಲ್ಲಿ ರಾಷ್ಟ್ರೀಯತೆಯ ಮನೋಭಾವ,ಸಶಸ್ತ್ರ ಪಡೆಗಳ ಬಗ್ಗೆ ಪ್ರೀತಿ ಮತ್ತು ತ್ರಿವರ್ಣ ಧ್ವಜದ ಬಗ್ಗೆ ಗೌರವ ಮೂಡುವಂತೆ ಕಾಳಜಿ ವಹಿಸುತ್ತೇವೆ’ ಎಂದು ಸಿಸೊಡಿಯಾ ಪ್ರಣಾಳಿಕೆಯ ಮುಖ್ಯಾಂಶ ತಿಳಿಸಿದರು.

‘ದೆಹಲಿಯಲ್ಲಿರುವ ಎಲ್ಲ ಕುಟುಂಬಗಳನ್ನು ಸಂಪದ್ಭರಿತವಾಗಿಸುವ ಕನಸು ನಮ್ಮದು. ಆಪ್ ಸರ್ಕಾರವು ಗುಣಮಟ್ಟದ ಶಿಕ್ಷಣ, ಆರೋಗ್ಯ, ಶುದ್ಧ ಕುಡಿಯುವ ನೀರು, 24 ತಾಸು ವಿದ್ಯುತ್ ಸರಬರಾಜು ಒದಗಿಸುವ ಭರವಸೆ ನೀಡಲಿದೆ.ದೆಹಲಿ ಜನ್ ಲೋಕ್‌ಪಾಲ್ ಮಸೂದೆ ಜಾರಿಗೆ ಪ್ರಯತ್ನಕ್ಕೆ ಹೊಸ ವೇಗದಿಂದ ಪ್ರಯತ್ನ ಮುಂದುವರಿಸುತ್ತೇವೆ’ ಎಂದು ಅವರು ಪ್ರಣಾಳಿಕೆಯ ಅಂಶಗಳ ಬಗ್ಗೆ ಮಾಹಿತಿ ನೀಡಿದರು.

ADVERTISEMENT

ಪ್ರಚಾರ ಬಿರುಸು

ಮತದಾನಕ್ಕೆ ಕೇವಲ ನಾಲ್ಕುದಿನಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಆಪ್ ದೆಹಲಿಯಲ್ಲಿ ಪ್ರಚಾರ ಬಿರುಸುಗೊಳಿಸಿವೆ. ದ್ವಾರಕಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ದೆಹಲಿಯ ಕಂಟೋನ್ಮೆಂಟ್, ಪಟೇಲ್ ನಗರ್ ಮತ್ತು ತಿರ್ಮಾಪುರ್ ಪ್ರದೇಶದಲ್ಲಿ ಗೃಹ ಸಚಿವ ಅಮಿತ್ ಶಾ ಭಾಷಣ ಮಾಡಲಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ಕುದಿಬಿಂದು ಎನಿಸಿರುವ ಶಾಹಿನ್ ಬಾಗ್‌ ಧರಣಿ ವಿರುದ್ಧ ಬಿಜೆಪಿ ನಾಯಕರು ಒಬ್ಬರಾದ ಮೇಲೆ ಒಬ್ಬರಂತೆ ಕಿಡಿಕಾರುತ್ತಿದ್ದಾರೆ.

‘ಅದು ಸೀಲಾಂಪುರ್, ಜಾಮಿಯಾ ಅಥವಾ ಶಾಹಿನ್ ಬಾಗ್ ಆಗಿರಲಿ. ಕಳೆದ ಕೆಲ ದಿನಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಕೇವಲ ಕಾಕತಾಳೀಯವಾಗಿರಲು ಸಾಧ್ಯವೇ? ಇದು ದೇಶದ ಸೌಹಾರ್ದಕ್ಕೆ ಧಕ್ಕೆ ತರುವ ಹೊಸ ಪ್ರಯತ್ನ’ ಎಂದು ಮೋದಿ ಸೋಮವಾರ ರ್‍ಯಾಲಿಯೊಂದರಲ್ಲಿ ಭಾಷಣ ಮಾಡುವಾಗ ಹರಿಹಾಯ್ದಿದ್ದರು.

ಸಂಜೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾಷಣ ಮಾಡಲಿದ್ದಾರೆ. ದೆಹಲಿಯಲ್ಲಿ ಫೆ.8ರಂದು ಮತದಾನ ನಡೆಯಲಿದೆ. ಫೆ.11ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.