
ನವದೆಹಲಿ: ಮಾಜಿ ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿ ಅವರ ಪುತ್ರ ಉತ್ತರ ಪ್ರದೇಶದ ಮಾಜಿ ಶಾಸಕ ಅಬ್ಬಾಸ್ ಅನ್ಸಾರಿ ಅವರಿಗೆ ಗ್ಯಾಂಗ್‌ಸ್ಟರ್ ಕಾಯ್ದೆ ಪ್ರಕರಣದಲ್ಲಿ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ಸುಪ್ರೀಂ ಕೋರ್ಟ್ ಮಂಗಳವಾರ ದೃಢಪಡಿಸಿದೆ.
ಹಲ್ಲೆ ಮತ್ತು ಸುಲಿಗೆ ಪ್ರಕರಣದಲ್ಲಿ ಅನ್ಸಾರಿಗೆ ಸುಪ್ರೀಂ ಕೋರ್ಟ್ 2025 ಮಾರ್ಚ್ 7ರಂದು ಆರು ವಾರಗಳ ಮಧ್ಯಂತರ ಜಾಮೀನು ನೀಡಿತ್ತು.
ಅನ್ಸಾರಿ ಪರ ವಕೀಲರಾದ ಕಪಿಲ್ ಸಿಬಲ್ ಮತ್ತು ನಿಜಾಮ್ ಪಾಷಾ ಅವರ ವಾದಗಳನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರ ಪೀಠವು ಅನ್ಸಾರಿಗೆ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ಪೂರ್ಣಪ್ರಮಾಣದಲ್ಲಿ ಮಂಜೂರುಗೊಳಿಸಿತು.
ಇತರ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದ ಅನ್ಸಾರಿಗೆ ಗ್ಯಾಂಗ್‌ಸ್ಟರ್ ಕಾಯ್ದೆ ಪ್ರಕರಣದಲ್ಲೂ ಮಧ್ಯಂತರ ಜಾಮೀನು ದೊರೆತ ಕಾರಣ ಅವರೂ ಕಳೆದ ಮಾರ್ಚ್‌ನಲ್ಲಿ ಜೈಲಿನಿಂದ ಬಿಡುಗಡೆಗೊಂಡಿದ್ದರು.
ಇತರ ಪ್ರಕರಣಗಳಿಗೆ ಸಂಬಂಧಿಸಿ 2022ರಲ್ಲಿ ಕಸ್ಟಡಿಗೆ ಪಡೆಯಲಾಗಿದ್ದ ಅನ್ಸಾರಿ ಅವರನ್ನು ಗ್ಯಾಂಗ್‌ಸ್ಟರ್ ಕಾಯ್ದೆ ಪ್ರಕರಣದಡಿ 2024ರಲ್ಲಿ ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.