ADVERTISEMENT

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಪುಣ್ಯತಿಥಿ:ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಗೌರವ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 5:30 IST
Last Updated 27 ಜುಲೈ 2025, 5:30 IST
   

ನವದೆಹಲಿ: ಇಂದು ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಖ್ಯಾತ ವಿಜ್ಞಾನಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಕಲಾಮ್ ಒಬ್ಬ ಸ್ಪೂರ್ತಿದಾಯಕ ದಾರ್ಶನಿಕ, ಅತ್ಯುತ್ತಮ ವಿಜ್ಞಾನಿ, ಮಾರ್ಗದರ್ಶಕ ಮತ್ತು ಮಹಾನ್ ದೇಶಭಕ್ತ ಎಂದು ಸ್ಮರಿಸಿದ್ದಾರೆ.

ಕಲಾಂ ಅವರ ಚಿಂತನೆಗಳು ದೇಶದ ಯುವಕರನ್ನು ಅಭಿವೃದ್ಧಿ ಹೊಂದಿದ ಮತ್ತು ಬಲಿಷ್ಠ ಭಾರತವನ್ನು ನಿರ್ಮಿಸಲು ಕೊಡುಗೆ ನೀಡಲು ಪ್ರೇರೇಪಿಸುತ್ತವೆ ಎಂದು ಮೋದಿ ಹೇಳಿದ್ದಾರೆ.

ADVERTISEMENT

ಕಲಾಂ 2002-07ರ ನಡುವೆ ದೇಶದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ಅವರು ತಮ್ಮ ಸರಳ ಜೀವನ ಮತ್ತು ಪಕ್ಷಾತೀತ ನಡವಳಿಕೆಗಾಗಿ ಜನರು ಮತ್ತು ರಾಜಕೀಯ ಪಕ್ಷಗಳ ಗೌರವ ಹಾಗೂ ಮೆಚ್ಚುಗೆಯನ್ನು ಗಳಿಸಿದ್ದರು.

ಡಾ. ಎಪಿಜೆ ಅಬ್ದುಲ್ ಕಲಾಂ ಜಿ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ಸಲ್ಲಿಸುತ್ತೇನೆ. ಅವರೊಬ್ಬ ದೂರದೃಷ್ಟಿಯ ನಾಯಕ ಮತ್ತು ಜನರ ರಾಷ್ಟ್ರಪತಿಯಾಗಿದ್ದರು. ವಿಜ್ಞಾನ ಪ್ರಯೋಗಾಲಯದಿಂದ ರಾಜಕೀಯ ಕ್ಷೇತ್ರಕ್ಕೆ ಅವರ ಅಪಾರ ಕೊಡುಗೆಗಳು ಹೊಸ ಮತ್ತು ಮುಂದುವರಿದ ಭಾರತದ ಅಡಿಪಾಯವಾಗಿದೆ. ಅವರು ಮುಂದಿನ ಪೀಳಿಗೆಗೆ ದಾರಿದೀಪವಾಗಿ ಉಳಿಯುತ್ತಾರೆ ಎಂದು ಕೇಂದ್ರದ ಗೃಹ ಸಚಿವ ಅಮಿತ್ ಶಾ ಎಕ್ಸ್ ಪೋಸ್ಟ್ ಹಂಚಿಕೊಂಡಿದ್ದಾರೆ.

ಅಗಾಧ ಪಾಂಡಿತ್ಯ, ಸರಳತೆ, ಮುತ್ಸದ್ದಿತನ ಎಲ್ಲವನ್ನೂ ಹೊಂದಿದ್ದ ಅಪರೂಪದ ವ್ಯಕ್ತಿತ್ವ ಅಬ್ದುಲ್ ಕಲಾಂರದ್ದು. ದೇಶದ ಕ್ಷಿಪಣಿ ವ್ಯವಸ್ಥೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಅವರ ಸಂಶೋಧನಾ ಬದುಕು, ಜನಸಾಮಾನ್ಯರಿಗಾಗಿ ರಾಷ್ಟ್ರಪತಿ ಭವನದ ಬಾಗಿಲು ತೆರೆದ ಅವರ ಸಾಮಾಜಿಕ ಕಳಕಳಿ ಎಲ್ಲವೂ ಇತಿಹಾಸದಲ್ಲಿ ಅವರನ್ನು ಅಮರವಾಗಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ವಿಜ್ಞಾನಿಯಾಗಿ, ರಾಷ್ಟ್ರಪತಿಯಾಗಿ ತಮ್ಮಿಡೀ ಬದುಕನ್ನೇ ರಾಷ್ಟ್ರನಿರ್ಮಾಣಕ್ಕಾಗಿ ಸವೆಸಿದ ಮಹಾಚೇತನಕ್ಕೆ ಗೌರವಪೂರ್ವಕ ನಮನಗಳು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.