ADVERTISEMENT

ಎಲ್ಲ ದ್ವಿಚಕ್ರ ವಾಹನಕ್ಕೆ ಎಬಿಎಸ್ ಕಡ್ಡಾಯ: ನಿತಿನ್ ಗಡ್ಕರಿ

ಪಿಟಿಐ
Published 15 ಜನವರಿ 2026, 15:45 IST
Last Updated 15 ಜನವರಿ 2026, 15:45 IST
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ   

ನವದೆಹಲಿ: ‘ಜನವರಿ 1ರ ನಂತರ ತಯಾರಾಗುವ ಎಲ್ಲ ದ್ವಿಚಕ್ರ ವಾಹನಗಳಿಗೆ ಆ್ಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಅನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

2019ರಿಂದ 2023ರವರೆಗಿನ ಅವಧಿಯಲ್ಲಿ ದೇಶದಲ್ಲಿ ಸಂಭವಿಸಿದ ದ್ವಿಚಕ್ರ ವಾಹನಗಳ ಅಪಘಾತದಲ್ಲಿ 3.35 ಲಕ್ಷ ಜನರು ಮೃತಪಟ್ಟಿದ್ದಾರೆ. ಹೀಗಾಗಿ, ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

2023ರಲ್ಲಿ ಸಂಭವಿಸಿದ ಅಪಘಾತದಲ್ಲಿ 77,539 ದ್ವಿಚಕ್ರ ವಾಹನ ಸವಾರರು ಮೃತಪಟ್ಟಿದ್ದರು. ಈ ಪೈಕಿ 50 ಸಾವಿರ ಸವಾರರು ಹೆಲ್ಮೆಟ್‌ ಧರಿಸಿಲ್ಲ. ದೇಶದಲ್ಲಿ ಸಂಭವಿಸುವ ಒಟ್ಟು ರಸ್ತೆ ಅಪಘಾತಗಳಲ್ಲಿ ದ್ವಿಚಕ್ರ ವಾಹನ ಅಪಘಾತಗಳಿಂದ ಉಂಟಾಗುವ ಸಾವುಗಳ ಪಾಲು 2014ರಲ್ಲಿ ಶೇ 30ರಷ್ಟಿದ್ದು 2023ರ ವೇಳೆಗೆ ಶೇ 45ಕ್ಕೆ ಏರಿದೆ.

ADVERTISEMENT

ಹೀಗಾಗಿ, ಎಲ್ಲ ದ್ವಿಚಕ್ರ ವಾಹನಗಳಲ್ಲಿ ಆ್ಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ ಕಡ್ಡಾಯ ಮಾಡಲಾಗಿದೆ ಮತ್ತು ವಾಹನ ಖರೀದಿ ವೇಳೆ ಗ್ರಾಹಕರಿಗೆ ಬಿಐಎಸ್ ಪ್ರಮಾಣೀಕೃತ ಪಡೆದ ಎರಡು ಹೆಲ್ಮೆಟ್‌ಗಳನ್ನು ನೀಡುವುದು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಮೊದಲು 125 ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ಮಾತ್ರ ಎಬಿಎಸ್ ಕಡ್ಡಾಯವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.