ADVERTISEMENT

ವೈಯಕ್ತಿಕ ಬಳಕೆಯ ಕಾನ್ಸನ್‌ಟ್ರೇಟರ್‌ಗಳಿಗೂ ಜಿಎಸ್‌ಟಿ: ಅಸಾಂವಿಧಾನಿಕ ಎಂದ ಕೋರ್ಟ್‌

ಪಿಟಿಐ
Published 23 ಮೇ 2021, 13:11 IST
Last Updated 23 ಮೇ 2021, 13:11 IST
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ    

ನವದೆಹಲಿ: ವೈದ್ಯಕೀಯ ಚಿಕಿತ್ಸಾ ಪರಿಕರಗಳ ಕೊರತೆ ಇದ್ದು ಕೋವಿಡ್ ರೋಗಿಗಳು ಆಮ್ಲಜನಕ ಕಾನ್ಸನ್‌ಟ್ರೇಟರ್ಸ್‌ ಸೇರಿದಂತೆ ಪರ್ಯಾಯವಾಗಿ ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಕೆಲವರು ವಿದೇಶಗಳಿಂದಲೂ ಇಂಥ ಪರಿಕರಗಳನ್ನು ತರಿಸಿಕೊಳ್ಳುತ್ತಿದ್ದಾರೆ ಎಂದು ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಅಲ್ಲದೆ, ವೈಯಕ್ತಿಕವಾಗಿ ಆಮದುಮಾಡಿಕೊಳ್ಳುತ್ತಿರುವ ಅಥವಾ ವೈಯಕ್ತಿಕವಾಗಿ ಬಳಸಲು ಕೊಡುಗೆಯಾಗಿ ಪಡೆಯಲಾಗಿರುವ ಆಮ್ಲಜನಕ ಕಾನ್ಸನ್‌ಟ್ರೇಟರ್ಸ್‌ಗಳ ಮೇಲೂ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) ವಿಧಿಸುವುದು ಅಸಾಂವಿಧಾನಿಕ ಕ್ರಮವಾಗಿದೆ ಎಂದು ಹೈಕೋರ್ಟ್‌ ವ್ಯಾಖ್ಯಾನಿಸಿದೆ.

ಅಲ್ಲದೆ, ವೈಯಕ್ತಿಕ ಬಳಕೆಗೆ ಆಮದುಮಾಡಿಕೊಂಡ ಅಥವಾ ಕೊಡುಗೆ ಪಡೆದ ಆಮ್ಲಜನಕ ಕಾನ್ಸನ್‌ಟ್ರೇಟರ್ಸ್‌ಗಳ ಮೇಲೆ ಶೇ 12ರಷ್ಟು ಐಜಿಎಸ್‌ಟಿ ವಿಧಿಸುವ ಕೇಂದ್ರ ಆರ್ಥಿಕ ಸಚಿವಾಲಯದ ಮೇ 1ರ ಆದೇಶವನ್ನು ಪೀಠ ವಜಾಮಾಡಿತು. ಮೇ 1ಕ್ಕೂ ಹಿಂದೆ ವೈಯಕ್ತಿಕ ಬಳಕೆಗೆ ತರಿಸಿಕೊಂಡ ಕಾನ್ಸನ್‌ಟ್ರೇಟರ್ಸ್‌ಗಳ ಮೇಲೆ ಶೇ 28ರಷ್ಟು ಐಜಿಎಸ್‌ಟಿ ವಿಧಿಸಲಾಗುತ್ತಿತ್ತು.

ADVERTISEMENT

ಕೋವಿಡ್‌–19ನಿಂದ ಬಳಲುತ್ತಿರುವ 85 ವರ್ಷದ ಗುರುಚರಣ್‌ ಸಿಂಗ್ ಅವರು, ವೈಯಕ್ತಿಕ ಬಳಕೆಗೆ ಆಮದು ಮಾಡಿಕೊಂಡ ಆಮ್ಲಜನಕ ಕಾನ್ಸನ್‌ಟ್ರೇಟರ್ಸ್‌ಗಳ ಮೇಲೆ ಐಜಿಎಸ್‌ಟಿ ವಿಧಿಸುವ ಕೇಂದ್ರ ಕ್ರಮವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ನನ್ನ ಆರೋಗ್ಯ ಸ್ಥಿತಿ ಗಮನಿಸಿ ಅಮೆರಿಕದಲ್ಲಿರುವ ನನ್ನ ಸಂಬಂಧಿ ಇದನ್ನು ಕೊಡುಗೆ ನೀಡಿದ್ದರು ಎಂದೂ ತಿಳಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೀವ್‌ ಶಕ್ಧೇರ್ ಮತ್ತು ತಾಲ್ವಂತ್‌ ಸಿಂಗ್ ಅವರಿದ್ದ ನ್ಯಾಯಪೀಠವು, ಸದ್ಯ ದೆಹಲಿ ಸೇರಿ ವಿವಿಧೆಡೆ ದ್ರವೀಕೃತ ಆಮ್ಲಜನಕದ ಕೊರತೆ ಇದೆ. ಜನರು ಅಮ್ಲಜನಕ ಸಿಲಿಂಡರ್, ಕಾನ್ಸನ್‌ಟ್ರೇಟರ್‌ಗಳಿಗೆ ಪರಿತಪಿಸುತ್ತಿದ್ದಾರೆ. ಕೊರತೆ ಇರುವ ಕಾರಣ ಜನರು ಸ್ವಯಂ ಆಗಿ ಸಂಬಂಧಿಕರು, ಸ್ನೇಹಿತರ ಮೂಲಕ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ ಎಂದಿದೆ.

ಮೇ 21ರಂದು ನೀಡಿರುವ ತೀರ್ಪಿನಲ್ಲಿ ಸದ್ಯ ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳು ಪರ್ಯಾಯವಾಗಿ ಬಳಕೆ ಆಗುತ್ತಿವೆ. ಈ ಕಾರಣ, ಬೇಡಿಕೆಗೆ ಅನುಸಾರ ಇವುಗಳ ಉತ್ಪಾದನೆ ಆಗದ್ದರಿಂದಾಗಿ ವಿದೇಶಗಳಿಂದ ತರಿಸಿಕೊಳ್ಳಲು ಒತ್ತು ನೀಡುತ್ತಿದ್ದಾರೆ. ಈ ಕಾರಣದಿಂದಲೇ ಜಿಎಸ್‌ಟಿ ವಿಧಿಸುವ ಕ್ರಮ ಅಸಂವಿಧಾನಿಕವಾದುದು ಎಂದು ಪೀಠ ಅಭಿಪ್ರಾಯಪಡಲಿದೆ ಎಂದು ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.