ಶಶಿ ತರೂರ್
ನವದೆಹಲಿ: ‘ಆಪರೇಷನ್ ಸಿಂಧೂರ’ದ ನಂತರ ರಾಜತಾಂತ್ರಿಕ ಕಾರ್ಯಾಚರಣೆಯ ಭಾಗವಾಗಿ ವಿದೇಶಗಳಿಗೆ ಕಳುಹಿಸುತ್ತಿರುವ ಸರ್ವ ಪಕ್ಷಗಳ ನಿಯೋಗಗಳಿಗೆ ಸಂಸದರನ್ನು ಆಯ್ಕೆ ಮಾಡಿರುವ ರೀತಿಗೆ ತಮ್ಮದೇ ಪಕ್ಷದ ಆಕ್ಷೇಪ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಧೋರಣೆಗೆ ಪ್ರತಿಕ್ರಿಯಿಸಲು ಕಾಂಗ್ರೆಸ್ ನಾಯಕ ಶಶಿ ತರೂರ್ ಸೋಮವಾರ ನಿರಾಕರಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ನಂತರ ಭಾರತ-ಪಾಕಿಸ್ತಾನ ಮಿಲಿಟರಿ ಸಂಘರ್ಷದ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರಿಂದ ವಿವರಣೆ ಪಡೆಯುವ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ವಿದೇಶಾಂಗ ವ್ಯವಹಾರಗಳ ಸಂಸತ್ತಿನ ಸ್ಥಾಯಿ ಸಮಿತಿಯ ಅಧ್ಯಕ್ಷರೂ ಆದ ತರೂರ್ ‘ನಾನು ಖಂಡಿತವಾಗಿಯೂ ಆ ವಿಷಯದ ಬಗ್ಗೆ ಮಾತನಾಡುವುದಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.
ಬಿಜೆಪಿ ನೇತೃತ್ವದ ಸರ್ಕಾರವು ಸರ್ವಪಕ್ಷಗಳ ಏಳು ನಿಯೋಗಗಳಲ್ಲಿ, ಒಂದು ನಿಯೋಗ ಮುನ್ನಡೆಸಲು ತರೂರ್ ಅವರನ್ನು ಮುಖ್ಯಸ್ಥರಾಗಿ ಆಯ್ಕೆ ಮಾಡಿದೆ. ತರೂರ್ ಅವರ ತಂಡವು ಅಮೆರಿಕ ಮತ್ತು ಇತರ ನಾಲ್ಕು ದೇಶಗಳಿಗೆ ಭೇಟಿ ನೀಡಲಿದೆ.
ಸರ್ವ ಪಕ್ಷಗಳ ನಿಯೋಗಕ್ಕೆ ಕಾಂಗ್ರೆಸ್ ಸೂಚಿಸಿದ ನಾಲ್ವರ ಹೆಸರಲ್ಲಿ ತರೂರ್ ಹೆಸರು ಇರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.