ADVERTISEMENT

ಅಪಘಾತ ಸಂತ್ರಸ್ತರಿಗೆ ₹2 ಲಕ್ಷ ಪರಿಹಾರ: ಕೇಂದ್ರ ಪ್ರಸ್ತಾವ

ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ ಹೆದ್ದಾರಿ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 13:58 IST
Last Updated 3 ಸೆಪ್ಟೆಂಬರ್ 2025, 13:58 IST
<div class="paragraphs"><p>ಅಪಘಾತ</p></div>

ಅಪಘಾತ

   

–ಪ್ರಾತಿನಿಧಿಕ ಚಿತ್ರ

ನವದೆಹಲಿ: ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ₹1 ಲಕ್ಷ ಪರಿಹಾರ ನೀಡಲು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವಾಲಯ ಪ್ರಸ್ತಾವ ಸಿದ್ಧಪಡಿಸಿದೆ. 

ADVERTISEMENT

ಅಪಘಾತ ಸಂತ್ರಸ್ತರಿಗೆ ಪರಿಹಾರ ನೀಡಲು ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಲು ಸಂಸತ್‌ 2022ರ ಏಪ್ರಿಲ್‌ನಲ್ಲಿ ಒಪ್ಪಿಗೆ ನೀಡಿತ್ತು. ಈ ಕಾನೂನು ಜಾರಿಯಾಗಿಲ್ಲ ಎಂದು ಆಕ್ಷೇಪಿಸಿ ವಕೀಲ ಕಿಶನ್‌ ಚಂದ್‌ ಜೈನ್‌ ಎಂಬವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಕೇಂದ್ರ ಸರ್ಕಾರದ ವಿಳಂಬ ಧೋರಣೆಯನ್ನು ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲಾ ನೇತೃತ್ವದ ಪೀಠವು ಏಪ್ರಿಲ್‌ನಲ್ಲಿ ತರಾಟೆಗೆ ತೆಗೆದುಕೊಂಡಿತ್ತು. ಪರಿಹಾರ ಯೋಜನೆಗೆ ನಾಲ್ಕು ತಿಂಗಳಲ್ಲಿ ಅಂತಿಮ ರೂಪ ನೀಡಬೇಕು ಎಂದು ನ್ಯಾಯಪೀಠವು ಗಡುವು ವಿಧಿಸಿತ್ತು. ವಿಮಾ ಕಂಪನಿಗಳಿಂದ ಅಪಘಾತ ಸಂತ್ರಸ್ತರಿಗೆ ಪರಿಹಾರ ನೀಡುವ ಪ್ರಸ್ತಾವವನ್ನು ಸಚಿವಾಲಯ ಸಿದ್ಧಪಡಿಸಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಆಗಸ್ಟ್‌ 29ರಂದು ಪ್ರಮಾಣಪತ್ರ ಸಲ್ಲಿಸಿದೆ. 

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠವು, ಈ ಪ್ರಸ್ತಾವ ಪರಿಶೀಲಿಸಲು ಜೈನ್‌ ಹಾಗೂ ಅಮಿಕಸ್‌ ಕ್ಯೂರಿ ಗೌರವ್ ಅಗರವಾಲ್‌ ಅವರಿಗೆ ಕಾಲಾವಕಾಶ ನೀಡಿತು. ವಿಚಾರಣೆಯನ್ನು ಅಕ್ಟೋಬರ್‌ಗೆ ಮುಂದೂಡಿತು. 

ಈ ಕರಡು ಬಗ್ಗೆ ಅಭಿಪ್ರಾಯ ತಿಳಿಸುವಂತೆ ಹಣಕಾಸು ಸಚಿವಾಲಯ, ಕಾನೂನು ಸಚಿವಾಲಯ ಮತ್ತು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವನ್ನು ಹೆದ್ದಾರಿ ಸಚಿವಾಲಯ ಕೋರಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.