ಸಲ್ಮಾನ್ ಖಾನ್
ಮುಂಬೈ: ‘ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಗಳು ಸಿನಿಮಾ ಶೂಟಿಂಗ್ ವೇಳೆ ದಾಳಿ ನಡೆಸಲು ಯೋಜನೆ ರೂಪಿಸಿದ್ದರು’ ಎಂದು ಆರೋಪ ಪಟ್ಟಿ ಉಲ್ಲೇಖಿಸಿ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
‘ನಟನ ಮೇಲೆ ದಾಳಿ ನಡೆಸಲು ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ, ತನ್ನ ಗ್ಯಾಂಗ್ ಸದಸ್ಯರಿಗೆ ₹25 ಲಕ್ಷ ಸುಪಾರಿ (ಒಪ್ಪಂದ) ನೀಡಿದ್ದರು ಎಂದು ಈ ಪ್ರಕರಣದ ತನಿಖೆ ವೇಳೆ ಕಂಡುಬಂದಿದೆ’ ಎಂದು ಅವರು ತಿಳಿಸಿದ್ದಾರೆ.
‘ದಾಳಿಗೆ ಪಾಕಿಸ್ತಾನದಿಂದ ತಂದಿದ್ದ ಎ.ಕೆ–47 ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಲು ತಂಡವು ಯೋಜನೆ ಹೊಂದಿತ್ತು’ ಎಂದರು.
‘ಈ ಪ‍್ರಕರಣದಲ್ಲಿ ಬಂಧಿತರಾದ ಧನಂಜಯ್ ತಾಪ್ಸಿಂಗ್ ಅಲಿಯಾಸ್ ಅಜಯ್ ಕಶ್ಯಪ್ (28), ಗೌತಮ್ ಭಾಟಿಯಾ(29)ವಾಸ್ಪಿ ಮೆಹಮ್ಮೂದ್ ಖಾನ್ ಅಲಿಯಾಸ್ ಚೈನಾ (36) ರಿಜ್ವಾನ್ ಹುಸೇನ್ ಅಲಿಯಾಸ್ ಜಾವೇದ್ ಖಾನ್ (25) ದೀಪಕ್ ಹವಸಿಂಗ್ ಅಲಿಯಾಸ್ ಜಾನ್(30) ವಿರುದ್ಧ ನವಿ ಮುಂಬೈನ ಪನ್ವೇಲ್ ಟೌನ್ ಪೊಲೀಸರು 350 ಪುಟಗಳ ಆರೋಪ ಪಟ್ಟಿಯನ್ನು ಜೂನ್ 21ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ’ ಎಂದು ಅವರು ತಿಳಿಸಿದರು.
‘ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ, ಆತನ ಸಹೋದರ ಅನ್ಮೋಲ್ ಬಿಷ್ಣೋಯಿ, ಸಂಪತ್ ನೆಹ್ರಾ, ಗೋಲ್ಡಿ ಬ್ರಾರ್ ಅನ್ನು ಈ ಪ್ರಕರಣದಲ್ಲಿ ಬೇಕಾದ ಆರೋಪಿಗಳು ಎಂದು ತೋರಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಸಲ್ಮಾನ್ ಖಾನ್ ಶೂಟಿಂಗ್‌ನಲ್ಲಿ ತೊಡಗಿದ್ದ ವೇಳೆ ಅಥವಾ ಪನ್ವೇಲ್‌ನಲ್ಲಿರುವ ತನ್ನ ಫಾರ್ಮ್‌ಹೌಸ್‌ನಿಂದ ಹೊರಡುವ ವೇಳೆ ದಾಳಿಗೆ ಯೋಜಿಸಿದ್ದರು. ಸಂಚು ರೂಪಿಸಿದ ಮಾಹಿತಿಯನ್ನು ಆರೋಪಪಟ್ಟಿಯಲ್ಲಿ ವಿವರವಾಗಿ ದಾಖಲಿಸಿದ್ದು, ದಾಳಿ ನಡೆಸಿ ಅಲ್ಲಿಂದ ಪರಾರಿಯಾಗಿರುವ ಮಾರ್ಗದ ವಿವರ, ಗುಪ್ತಚರ ಮಾಹಿತಿ, ಆರೋಪಿಗಳ ಮೊಬೈಲ್ ಫೋನ್ ದಾಖಲೆಗಳು, ವಾಟ್ಸ್‌ಆ್ಯಪ್ ಚಾಟ್ಸ್, ಆಡಿಯೊ, ವಿಡಿಯೊ ಕಾಲ್‌ಗಳ ವಿವರ, ಟವರ್ ಲೋಕೆಷನ್‌ಗಳನ್ನು ದಾಖಲಿಸಲಾಗಿದೆ’ ಎಂದರು.
ಬಿಷ್ಣೋಯಿ ಗ್ಯಾಂಗ್ ಸದಸ್ಯರು ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದನ್ನು ಕಳೆದ ಏಪ್ರಿಲ್‌ನಲ್ಲಿ ಪನ್ವೇಲ್ ಟೌನ್ ಪೊಲೀಸರು ಬಯಲಿಗೆ ಎಳೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.