ADVERTISEMENT

ಆ್ಯಸಿಡ್‌ ದಾಳಿ | ಬಾಕಿ ಪ್ರಕರಣ: 4 ವಾರದೊಳಗೆ ವಿವರ ಸಲ್ಲಿಸಿ– ಸುಪ್ರೀಂ ಕೋರ್ಟ್

ಪಿಟಿಐ
Published 4 ಡಿಸೆಂಬರ್ 2025, 15:33 IST
Last Updated 4 ಡಿಸೆಂಬರ್ 2025, 15:33 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಆ್ಯಸಿಡ್‌ ದಾಳಿ ಪ್ರಕರಣಗಳ ವಿಚಾರಣೆಯಲ್ಲಿ ಆಗುತ್ತಿರುವ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ದೇಶದಾದ್ಯಂತ ಬಾಕಿ ಇರುವ ಇಂತಹ ಪ್ರಕರಣಗಳ ಕುರಿತ ವಿವರಗಳನ್ನು ನಾಲ್ಕು ವಾರಗಳೊಳಗೆ ಸಲ್ಲಿಸುವಂತೆ ಎಲ್ಲ ಹೈಕೋರ್ಟ್‌ಗಳಿಗೆ ಗುರುವಾರ ಸೂಚಿಸಿದೆ.

‘ಆ್ಯಸಿಡ್‌ ದಾಳಿ ಪ್ರಕರಣಗಳ ವಿಚಾರಣೆಯಲ್ಲಿ ತೋರುವ ವಿಳಂಬವು ನ್ಯಾಯಾಂಗ ವ್ಯವಸ್ಥೆಯ ಅಪಹಾಸ್ಯವೇ ಸರಿ’ ಎಂದು ಮುಖ್ಯನ್ಯಾಯಮೂರ್ತಿ ಸೂರ್ಯ ಕಾಂತ್‌ ನೇತೃತ್ವದ ಪೀಠ ಹೇಳಿದೆ.

ADVERTISEMENT

‘ಆ್ಯಸಿಡ್‌ ದಾಳಿ ಪ್ರಕರಣಗಳ ವಿಲೇವಾರಿಗೆ ವೇಗ ನೀಡುವುದಕ್ಕಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು’ ಎಂಬ ಸಲಹೆ ನೀಡಿರುವ ಪೀಠವು, ಈ ಸಂಬಂಧ ಕೇಂದ್ರ ಸರ್ಕಾರ ಹಾಗೂ ಅಂಗವಿಕಲರ ಸಬಲೀಕರಣ ಇಲಾಖೆಗೆ ನೋಟಿಸ್‌ ಜಾರಿ ಮಾಡಿದೆ.

ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಕೂಡ ಈ ಪೀಠದಲ್ಲಿದ್ದಾರೆ.

‘ಆ್ಯಸಿಡ್‌ ದಾಳಿಯ ಸಂತ್ರಸ್ತರನ್ನು ಅಂಗವಿಕಲರು ಎಂಬುದಾಗಿ ಪರಿಗಣಿಸಬೇಕು. ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯಡಿ ಲಭ್ಯವಿರುವ ಎಲ್ಲ ಸವಲತ್ತುಗಳು ಇವರಿಗೂ ಸಿಗುವಂತಾಗಬೇಕು. ಇದಕ್ಕಾಗಿ ಕಾಯ್ದೆಗೆ ತಿದ್ದುಪಡಿ ತರಬೇಕು ಇಲ್ಲವೇ ಸುಗ್ರೀವಾಜ್ಞೆ ಹೊರಡಿಸಲು ಪರಿಗಣಿಸಿ’ ಎಂದು ಕೇಂದ್ರ ಸರ್ಕಾರಕ್ಕೆ ಪೀಠವು ಸೂಚಿಸಿದೆ.

ಆ್ಯಸಿಡ್‌ ದಾಳಿಗೆ ಒಳಗಾಗಿರುವ ಶಾಹೀನ್‌ ಮಲಿಕ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವಿಚಾರಣೆ ವೇಳೆ ಪೀಠ ಈ ಸೂಚನೆಗಳನ್ನು ನೀಡಿದೆ.

ವಿಚಾರಣೆ ವೇಳೆ, ‘ಈ ವಿಚಾರವನ್ನು ಸರ್ಕಾರವು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳುವುದು’ ಎಂದು ಸಾಲಿಸಿಟರ್‌ ಜನರಲ್ ತುಷಾರ್‌ ಮೆಹ್ತಾ ಅವರು ಪೀಠಕ್ಕೆ ತಿಳಿಸಿದರು.

ಇದೇ ವೇಳೆ ಸ್ವತಃ ಶಾಹೀನ್‌ ಮಲಿಕ್‌ ವಾದ ಮಂಡಿಸಿ,‘ನನ್ನ ಮೇಲೆ 2009ರಲ್ಲಿ ಆ್ಯಸಿಡ್‌ ದಾಳಿ ನಡೆಯಿತು. 2013ರ ವರೆಗೆ ಪ್ರಕರಣದ ವಿಚಾರಣೆಯಲ್ಲಿ ಯಾವುದೇ ಪ್ರಗತಿ ಇರಲಿಲ್ಲ. ಈಗ ರೋಹಿಣಿ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ’ ಎಂದು ಪೀಠಕ್ಕೆ ಅರುಹಿದರು.

ಈ ವಿಷಯ ಕೇಳಿ ಅಚ್ಚರಿ ವ್ಯಕ್ತಪಡಿಸಿದ ಪೀಠ,‘ಮಲಿಕ್‌ ಅವರ ಪ್ರಕರಣದ ವಿಚಾರಣೆ 2009ರಿಂದ ವಿಚಾರಣೆಗೆ ಬಾಕಿ ಉಳಿದಿದೆ. ಇದು ನಾಚಿಕೆಗೇಡಿನದು. ರಾಷ್ಟ್ರವೇ ತಲೆತಗ್ಗಿಸುವ ವಿಚಾರ’ ಎಂದು ಅಸಮಾಧಾನ ವ್ಯಕ್ತಪಡಿಸಿತು.

‘ಸಂತ್ರಸ್ತರು ಎದುರಿಸುತ್ತಿರುವ ಸವಾಲುಗಳಿಗೆ ರಾಷ್ಟ್ರ ರಾಜಧಾನಿಯಲ್ಲಿಯೇ ನ್ಯಾಯ ಸಿಗುತ್ತಿಲ್ಲ ಎಂದರೆ ಹೇಗೆ? ಇಂತಹ ಪ್ರಕರಣಗಳಲ್ಲಿ ನ್ಯಾಯ ಕೊಡಿಸುವವರು ಯಾರು?’ ಎಂದು ಸಿಜೆಐ ಸೂರ್ಯ ಕಾಂತ್‌ ಹೇಳಿದರು.

ಪ್ರಕರಣವನ್ನು ಯಾಕೆ ಇನ್ನೂ ಇತ್ಯರ್ಥಪಡಿಸಲಾಗಿಲ್ಲ ಎಂಬ ಬಗ್ಗೆ ವಿವರಣೆಯೊಂದಿಗೆ ಅರ್ಜಿ ಸಲ್ಲಿಸುವಂತೆ ಮಲಿಕ್‌ ಅವರಿಗೆ ಸೂಚಿಸಿದ ಸಿಜೆಐ, ಮುಂದಿನ ವಾರದಿಂದ ಪ್ರತಿನಿತ್ಯ ಮಲಿಕ್‌ ಅವರ ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು.

ಬಲವಂತದಿಂದಾಗಿ ಆ್ಯಸಿಡ್‌ ಸೇವಿಸುವವರು ಹಲವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆಹಾರ ಸೇವನೆಗೆ ಕೃತಕ ನಾಳಗಳನ್ನು ಅಳವಡಿಸಲಾಗುತ್ತದೆ. ತೀವ್ರವಾದ ಅಂಗವೈಕಲ್ಯದಿಂದ ನರಳಬೇಕಾಗುತ್ತದೆ
ಶಾಹೀನ್‌ ಮಲಿಕ್‌ ಆ್ಯಸಿಡ್‌ ದಾಳಿ ಸಂತ್ರಸ್ತೆ 
ದೇಹದ ಮೇಲೆ ಆ್ಯಸಿಡ್‌ ಎರಚಿದ ಘಟನೆಗಳ ಬಗ್ಗೆ ಕೇಳಿರುವೆ. ಸಂತ್ರಸ್ತರಿಗೆ ಬಲವಂತದಿಂದ ಆ್ಯಸಿಡ್‌ ಕುಡಿಸಿರುವ ಪ್ರಕರಣದ ಬಗ್ಗೆ ಕೇಳಿರಲಿಲ್ಲ. ಇದು ಆಘಾತಕಾರಿ
ಸೂರ್ಯ ಕಾಂತ್ ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.