ADVERTISEMENT

ಹಸಿವು, ಅಪೌಷ್ಟಿಕತೆ ನಿವಾರಣೆಗೆ ಸರ್ಕಾರದ ಕ್ರಮಗಳು ಸಾಕಾಗುತ್ತಿಲ್ಲ: ಕಳವಳ

ಸಾಮಾಜಿಕ ಹೋರಾಟಗಾರರ ಕಳವಳ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 12:21 IST
Last Updated 21 ಅಕ್ಟೋಬರ್ 2022, 12:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ನವದೆಹಲಿ: ದೇಶದಲ್ಲಿನ ಹಸಿವು ಹಾಗೂ ಅಪೌಷ್ಟಿಕತೆ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಈ ಸಂಬಂಧ ಜಾರಿಗೊಳಿಸಿರುವ ಯೋಜನೆಗಳು ಕೂಡ ಸಾಕಾಗುವುದಿಲ್ಲ ಎಂದು ಸಾಮಾಜಿಕ ಹೋರಾಟಗಾರರು ಶುಕ್ರವಾರ ಕಳವಳ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾಗಿರುವ ವರದಿಯು ‘ಜಾಗತಿಕ ಹಸಿವು ಸೂಚ್ಯಂಕ’ದಲ್ಲಿ ಭಾರತಕ್ಕೆ ಕಡಿಮೆ ಸ್ಥಾನ ನೀಡಿರುವುದನ್ನು ತಿರಸ್ಕರಿಸಿರುವ ಕೇಂದ್ರದ ನಿಲುವು ಸಹ ತಪ್ಪು ಎಂದು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ‘ರೈಟ್‌ ಟು ಫುಡ್‌ ಕ್ಯಾಂಪೇನ್‌’ನ (ಆರ್‌ಎಫ್‌ಸಿ) ದೀಪಾ ಸಿನ್ಹಾ, ‘ಹಸಿವು ಹಾಗೂ ಆಹಾರ ಅಭದ್ರತೆ ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ಆದರೆ, ಜಾಗತಿಕ ಹಸಿವು ಸೂಚ್ಯಂಕಕ್ಕೆ ಸಂಬಂಧಿಸಿ ಕೇಂದ್ರದ ಪ್ರತಿಕ್ರಿಯೆಯು, ದೇಶದ ಗಮನವನ್ನು ಬೇರೆಡೆ ಸೆಳೆಯುವ ತಂತ್ರದ ಭಾಗವಾಗಿದೆ’ ಎಂದರು.

ADVERTISEMENT

‘ವಸ್ತುಸ್ಥಿತಿಯನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿದೆ. ಕೋವಿಡ್‌–19 ಪಿಡುಗಿನ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ ಉಚಿತವಾಗಿ ಹೆಚ್ಚುವರಿ ಆಹಾರಧಾನ್ಯಗಳನ್ನು ಪೂರೈಸಲಾಗಿದೆ. ಆದರೂ, ದೇಶದಲ್ಲಿ ಆಹಾರ ಅಭದ್ರತೆ ಹೆಚ್ಚಾಗಿದೆ’ ಎಂದು ಅವರು ಹೇಳಿದರು.

‘ಕೋವಿಡ್‌ ಪಿಡುಗು ಜನರ ಉಳಿತಾಯವನ್ನು ಅಳಿಸಿ ಹಾಕಿದೆ. ಒಂಟಿ ಮಹಿಳೆಯರು, ದಲಿತರು, ಆದಿವಾಸಿಗಳು ಸೇರಿದಂತೆ ಜನರು ಹಸಿವಿನಿಂದ ಕಂಗಾಲಾಗಿದ್ದಾರೆ. ಜಾಗತಿಕ ಹಸಿವು ಸೂಚ್ಯಂಕಕ್ಕೆ ಸಂಬಂಧಿಸಿ ಹಲವು ನೆರೆಯ ದೇಶಗಳು ಸಾಕಷ್ಟು ಪ್ರಗತಿ ಸಾಧಿಸಿರುವಾಗ, ಭಾರತ ಏಕೆ ತನ್ನ ಸ್ಥಾನವನ್ನು ಸುಧಾರಿಸಿಕೊಂಡಿಲ್ಲ ಎಂಬುದೇ ಅಚ್ಚರಿ ಮೂಡಿಸುತ್ತದೆ’ ಎಂದು ಹೇಳಿದರು.

‘ಕೋವಿಡ್‌ ಪಿಡುಗಿಗೂ ಮುಂಚಿನ ಅವಧಿಗೆ ಹೋಲಿಸಿದಾಗ, ದೇಶದಲ್ಲಿ ಆಹಾರ ಭದ್ರತೆಯು ಪರಿಮಾಣಾತ್ಮಕ ಹಾಗೂ ಗುಣಾತ್ಮಕವಾಗಿ ಅಧೋಗತಿ ಕಾಣುತ್ತಿದೆ ಎಂಬುದು ಸಂಘಟನೆಯು (ಆರ್‌ಎಫ್‌ಸಿ) ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ’ ಎಂದರು.

‘ರೇಷನ್‌ ಕಾರ್ಡ್ ಹೊಂದಿರದವರಿಗೆ ಪಡಿತರ ನೀಡುವ ಸಲುವಾಗಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಮತ್ತೊಬ್ಬ ಹೋರಾಟಗಾರ್ತಿ ಅಂಜಲಿ ಭಾರದ್ವಾಜ್‌ ಹೇಳಿದರು.

‘ಈ ಎಲ್ಲ ಅಂಶಗಳು ದೇಶದಲ್ಲಿ ಅಸಮಾನತೆ ಹಾಗೂ ಬಡತನ ಹೆಚ್ಚುತ್ತಿದೆ ಎಂಬುದನ್ನು ತೋರಿಸುತ್ತವೆ. ಆದರೆ, ಸರ್ಕಾರ ಮಾತ್ರ ಸಂವೇದನೆ ಇಲ್ಲದ ರೀತಿ ಪ್ರತಿಕ್ರಿಯಿಸುತ್ತಿದೆ’ ಎಂದು ಹೋರಾಟಗಾರ ಹರ್ಷ ಮಂದರ್‌ ಹೇಳಿದರು.

‘ದೇಶದಲ್ಲಿ ಹಸಿವು, ಅಪೌಷ್ಟಿಕತೆ ಸಮಸ್ಯೆ ಗಂಭೀರವಾಗಿವೆ. ಆರೋಗ್ಯ ಕ್ಷೇತ್ರ ಮೂಲಸೌಕರ್ಯಗಳಿಲ್ಲದೇ ಸೊರಗಿದೆ ಎಂಬುದನ್ನು ಇಂತಹ ಸೂಚ್ಯಂಕಗಳು ಸಾರುತ್ತವೆ’ ಎಂದು ಜನ ಸ್ವಾಸ್ಥ್ಯ ಅಭಿಯಾನದ ಡಾ.ವಂದನಾ ಪ್ರಸಾದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.