ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ: ನಟಿ-ಸಾಮಾಜಿಕ ಕಾರ್ಯಕರ್ತೆ ಸೇರಿ 12 ಜನರಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 13:08 IST
Last Updated 4 ಜನವರಿ 2020, 13:08 IST
ಸದಾಫ್ ಜಾಫರ್
ಸದಾಫ್ ಜಾಫರ್   

ಲಖನೌ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಲಖನೌ‌ನಲ್ಲಿ ನಡೆದಿದ್ದ ಪ್ರತಿಭಟನೆ ಸಂದರ್ಭ ಫೇಸ್‌ಬುಕ್‌ನಲ್ಲಿ ಲೈವ್ ವಿಡಿಯೋ ಮಾಡಿ ಬಂಧನಕ್ಕೊಳಗಾಗಿದ್ದ ನಟಿ, ಸಾಮಾಜಿಕ ಹೋರಾಟಗಾರ್ತಿ ಸದಾಫ್ ಜಾಫರ್ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.

ಇದರೊಂದಿಗೆ ಕಳೆದ ತಿಂಗಳು ತಮ್ಮ ನಿವಾಸದಲ್ಲೇ ಬಂಧನಕ್ಕೊಳಗಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಮತ್ತು ಕ್ಯಾನ್ಸರ್ ಪೀಡಿತರಾದ ಎಸ್. ಆರ್. ದಾರಾಪುರಿ ಅವರಿಗೂ ಜಾಮೀನು ದೊರಕಿದೆ.

ಜಾಫರ್ ಅವರ ಮೇಲೆ ಗಲಭೆ ಆರೋಪ ಹೊರಿಸಲಾಗಿತ್ತು. ಜಾಫರ್ ವಿರುದ್ಧ ಕೇಳಿಬಂದಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ಲಖನೌ ಪೊಲೀಸರು ತಿಳಿಸಿದ್ದಾರೆ ಎಂದು ಜಾಮೀನು ಆದೇಶದಲ್ಲಿ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರು ಹೇಳಿದ್ದಾರೆ.

ADVERTISEMENT

ಡಿಸೆಂಬರ್ 24ರಂದು ಲಖನೌನ ನ್ಯಾಯಾಲಯದಲ್ಲಿ ಕಾಂಗ್ರೆಸ್ ವಕ್ತಾರೆಯೂ ಆಗಿರುವ ಜಾಫರ್ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ, ಜಾಫರ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಸಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿ ಹೋಗಿದ್ದ ಫೇಸ್‌ಬುಕ್ ವಿಡಿಯೋದಲ್ಲಿ ಬಂಧನಕ್ಕೂ ಮುನ್ನ ಮಾತನಾಡಿದ್ದ ಜಾಫರ್, ಲಖನೌನ ಪರಿವರ್ತನ್ ಚೌಕದಲ್ಲಿ ಪೊಲೀಸರಿಗೆ ನೀವ್ಯಾಕೆ ಅವರನ್ನು ತಡೆಯಲಿಲ್ಲ? ಯಾವಾಗ ಹಿಂಸಾಚಾರ ಭುಗಿಲೆದ್ದಿತೋ ಆಗ ನೀವು ಸುಮ್ಮನೆ ನಿಂತು ಶೋವನ್ನು ನೋಡುತ್ತಿದ್ದಿರಿ. ಹೆಲ್ಮೆಟ್‌ನ ಉಪಯೋಗವೇನು? ಯಾಕೆ ನೀವೇನು ಮಾಡಲಿಲ್ಲ ಎಂದು ಪ್ರಶ್ನಿಸಿದ್ದರು.
ಮತ್ತೊಂದು ವಿಡಿಯೋದಲ್ಲಿ ಅವರ ಮುಖ ಕಾಣದೆ ಕೇವಲ ಧ್ವನಿ ಕೇಳಿಸುತ್ತಿತ್ತು. ಅದರಲ್ಲಿ ನೀವ್ಯಾಕೆ ನನ್ನನ್ನು ಬಂಧಿಸಿದ್ದೀರಿ? ಕಲ್ಲು ತೂರಿದವರನ್ನು ನೀವ್ಯಾಕೆ ಬಂಧಿಸಲಿಲ್ಲ? ಎಂದು ಕೇಳಿದ್ದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಡಿಸೆಂಬರ್ 19ರಂದು ಲಖನೌನಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿದ್ದರು ಹಾಗೂ ಪೊಲೀಸ್ ಠಾಣೆಯ ಹೊರಗೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಕಾಯ್ದೆ ವಿರೋಧಿ ಪ್ರತಿಭಟನಾಕಾರರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆ ಹಿನ್ನೆಲೆಯಲ್ಲಿ 200ಕ್ಕೂ ಅಧಿಕ ಜನರನ್ನು ಬಂಧಿಸಲಾಗಿತ್ತು. ಈ ಪೈಕಿ ಸಾಮಾಜಿಕ ಹೋರಾಟಗಾರ್ತಿ ಸದಾಫ್ ಜಾಫರ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಎಸ್. ಆರ್. ದಾರಾಪುರಿ ಸೇರಿ ಇತರೆ 10 ಜನರಿಗೆ ಜಾಮೀನು ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಸಂಸತ್ತಿನ ಉಭಯ ಸದನಗಳಲ್ಲಿ ಪೌರತ್ವ ತಿದ್ದುಪಡಿ ಮಸೂದೆಗೆ ಅನುಮೋದನೆ ದೊರೆತಂದಿನಿಂದಲೂ ಉತ್ತರಪ್ರದೇಶದಾದ್ಯಂತ ಮತ್ತು ದೇಶದ ಹಲವೆಡೆ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆಗಳು ಆರಂಭವಾದವು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ದೇಶಾದ್ಯಂತ ಸುಮಾರು 25 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.