ADVERTISEMENT

ಸೇನೆಗೆ ಅವಮಾನಿಸುವ ಪೋಸ್ಟ್‌: ಕ್ಷಮೆ ಯಾಚಿಸಿದ ಬಾಲಿವುಡ್‌ ನಟಿ ರಿಚಾ ಚಡ್ಡಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2022, 9:34 IST
Last Updated 24 ನವೆಂಬರ್ 2022, 9:34 IST
   

ನವದೆಹಲಿ: ಪಾಕ್‌ ಆಕ್ರಮಿತ ಕಾಶ್ಮೀರ ವಶಕ್ಕೆ ಸೇನೆ ಸಿದ್ಧವಾಗಿದೆ ಎಂಬ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿಕೆ ವಿಚಾರವಾಗಿ ಸೇನೆಯನ್ನು ಅವಮಾನಿಸುವ ರೀತಿಯಲ್ಲಿ ಟ್ವೀಟ್‌ ಮಾಡಿದ್ದ ಬಾಲಿವುಡ್‌ ನಟಿ ರಿಚಾ ಚಡ್ಡಾ, ತಮ್ಮ ಪೋಸ್ಟ್‌ ಡಿಲೀಟ್‌ ಮಾಡಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ.


ಪಾಕ್‌ ಆಕ್ರಮಿತ ಕಾಶ್ಮೀರ ವಶಕ್ಕೆ ಸೇನೆ ಸಿದ್ಧವಾಗಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ರಿಚಾ, ‘ಗಲ್ವಾನ್‌ ಹಾಯ್‌ ಎನ್ನುತ್ತಿದೆ’ ಎಂಬುದಾಗಿ ಟ್ವೀಟ್‌ ಮಾಡಿ ಎಲ್ಲರ ಆಕ್ರೋಶಕ್ಕೆ ತುತ್ತಾಗಿದ್ದರು.


‘ಉದ್ದೇಶಪೂರ್ವಕವಾಗಿ ಪೋಸ್ಟ್‌ ಮಾಡಿರಲಿಲ್ಲವಾದರೂ, ವಿವಾದ ಸೃಷ್ಟಿಸಿರುವ ಆ ಮೂರು ಪದಗಳಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಸೇನೆಯಲ್ಲಿರುವ ನನ್ನ ಸಹೋದರರು ಕುರಿತು ನನಗೆ ಸದಾ ಗೌರವವಿದೆ. ನನ್ನ ಮಾತುಗಳು ಅವರಿಗೆ ಬೇಸರ ಮೂಡಿಸಿದರೆ, ಅದರಿಂದ ನನಗೆ ದುಃಖವಾಗುತ್ತದೆ. ನನ್ನ ತಾತ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಮಾವ ಕೂಡ ಸೇನೆಯ ಭಾಗವಾಗಿದ್ದರು. ಹೀಗಾಗಿ ಸೇನೆಯೊಂದಿಗೆ ನನ್ನ ರಕ್ತ ಸಂಬಂಧಿಕರಿದ್ದಾರೆ. ಅವರನ್ನು ನೋಯಿಸುವ ಯಾವ ಉದ್ದೇಶವೂ ಇರಲಿಲ್ಲ’ ಎಂದು ರಿಚಾ ಕ್ಷಮೆ ಯಾಚಿಸಿ ಟ್ವೀಟ್‌ ಮಾಡಿದ್ದಾರೆ.

ADVERTISEMENT


ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿಕೆಯನ್ನು ಹಂಚಿಕೊಂಡು, ‘ಗಲ್ವಾನ್‌ ಹಾಯ್‌ ಎನ್ನುತ್ತಿದೆ’ ಎಂಬುದಾಗಿ ಬರೆದುಕೊಂಡಿದ್ದರು. ಇದರಿಂದ ಆಕ್ರೋಶಗೊಂಡ ನೆಟ್ಟಿಗರು ಇಂತಹ ಹೇಳಿಕೆ ನೀಡಲು ನಾಚಿಕೆಯಾಗಬೇಕು ಎಂದು ಪ್ರತಿಕ್ರಿಯಿಸಿದ್ದರು. ಬಿಜೆಪಿ ನಾಯಕರು ಪ್ರತಿಕ್ರಿಯಿಸಿ ಇದೊಂದು ಅವಮಾನಕಾರಿ ಪೋಸ್ಟ್‌ ಎಂದು ಕಿಡಿಕಾರಿದ್ದರು. ತಕ್ಷಣ ಪೋಸ್ಟ್‌ ಡಿಲೀಟ್‌ ಮಾಡಿದ ರಿಚಾ, ಬಳಿಕ ಕ್ಷಮೆಯಾಚನೆ ಬರಹ ಪ್ರಕಟಿಸಿದ್ದಾರೆ.


2020ರ ಜೂನ್‌ನಲ್ಲಿ ಗಲ್ವಾನ್‌ ಕಣಿವೆಯಲ್ಲಿ ಭಾರತ–ಚೀನಾ ಸಂಘರ್ಷವಾಗಿತ್ತು. ಇದರಲ್ಲಿ 20 ಭಾರತೀಯ ಸೈನಿಕರು ವೀರ ಮರಣವನ್ನಪ್ಪಿದ್ದರು. ಪ್ರತಿದಾಳಿಯಲ್ಲಿಚೀನಾದ ಸೈನಿಕರು ಕೂಡ ಸಾವನ್ನಪ್ಪಿದ್ದರು. ಇದಾದ ಬಳಿಕ ಚೀನಾ ಮತ್ತು ಭಾರತ ಗಡಿಯಲ್ಲಿ ಯುದ್ಧದ ಭೀತಿ ಆವರಿಸಿತ್ತು. ಸೇನೆಯ ಈ ವೀರ ಹೋರಾಟವನ್ನು ರಿಚಾ ಗೇಲಿ ಮಾಡಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.