ADVERTISEMENT

ಇರಾನ್‌, ಪಾಕ್‌, ಅಫ್ಗನ್‌ನಿಂದ ಸರಕು ಸಾಗಣೆಗೆ ನಿರ್ಬಂಧ: ಅದಾನಿ ಸಮೂಹ ಪ್ರಕಟಣೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 17:46 IST
Last Updated 11 ಅಕ್ಟೋಬರ್ 2021, 17:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಹಮದಾಬಾದ್: ‘ಇರಾನ್‌, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದಿಂದ ನವೆಂಬರ್‌ 15ರಿಂದ ಜಾರಿಗೆ ಬರುವಂತೆ ಮುಂದಿನ ಸೂಚನೆಯವರೆಗೆ ಯಾವುದೇ ಸರಕು ಸಾಗಣೆಯನ್ನು ನಿರ್ವಹಿಸುವುದಿಲ್ಲ’ ಎಂದು ಅದಾನಿ ಸಮೂಹ ಮಾಲೀಕತ್ವದ ಅದಾನಿ ಬಂದರು ಮತ್ತು ಎಸ್‌ಇಝಡ್‌ ಸಂಸ್ಥೆಯು ಸೋಮವಾರ ಪ್ರಕಟಿಸಿದೆ.

ಅದಾನಿ ಬಂದರು ಮತ್ತು ಎಸ್‌ಇಝಡ್‌ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಬ್ರತ್ ತ್ರಿಪಾಠಿ ಅವರು ಈಕುರಿತುಕಂಪನಿಯ ಗ್ರಾಹಕ ಸಮೂಹಕ್ಕೆ ಮಾಹಿತಿ ನೀಡಿದ್ದಾರೆ.

ಅದಾನಿ ಸಮೂಹ ನಿರ್ವಹಣೆ ಮಾಡುತ್ತಿರುವ ಎಲ್ಲ ಟರ್ಮಿನಲ್‌ಗಳು ಮತ್ತು ಒಪ್ಪಂದವುಳ್ಳ ಟರ್ಮಿನಲ್‌ಗಳಿಗೂ ಇದು ಅನ್ವಯವಾಗಲಿದೆ. ಮುಂದಿನ ಸೂಚನೆವರೆಗೂ ಇದು ಜಾರಿಯಲ್ಲಿರುತ್ತದೆ ಎಂದು ಹೇಳಿಕೆ ತಿಳಿಸಿದೆ.

ADVERTISEMENT

ಕಂಪನಿಯು ನಿರ್ವಹಣೆ ಮಾಡುವ ಮುಂದ್ರಾ ಬಂದರಿನಲ್ಲಿ ಸುಮಾರು ₹ 21 ಸಾವಿರ ಕೋಟಿ ಮೌಲ್ಯದ 3000 ಕೆ.ಜಿ ಹೆರಾಯಿನ್‌ ಜಪ್ತಿಯಾದ ಘಟನೆಯ ಒಂದು ತಿಂಗಳ ನಂತರ ಕಂಪನಿಯ ಈ ಹೇಳಿಕೆ ಹೊರಬಿದ್ದಿದೆ.

ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಸೆಪ್ಟೆಂಬರ್ 11ರಂದು ಹೆರಾಯಿನ್‌ ಪತ್ತೆ ಮಾಡಿದ್ದರು. ಚೆನ್ನೈ ಮೂಲದ, ವಿಜಯವಾಡದಲ್ಲಿ ನೋಂದಣಿಯಾಗಿದ್ದ ಆಶಿ ಟ್ರೇಡಿಂಗ್‌ ಸಂಸ್ಥೆಯ ಹೆಸರಿನಲ್ಲಿ ಇದನ್ನು ತರಿಸಿಕೊಳ್ಳಲಾಗಿತ್ತು. ಭಾಗಶಃ ಸಂಸ್ಕರಿಸಿದ್ದ ಶಿಲೆಗಳು ಎಂದು ಹೇಳಲಾಗಿತ್ತು. ಮಚವರಂ ಸುಧಾಕರ್‌ ಮತ್ತು ಅವರ ಹೆಂಡತಿ ಗೋವಿಂದರಾಜು ದುರ್ಗಾಪೂರ್ಣ ವೈಶಾಲಿ ಅವರ ಹೆಸರಿನಲ್ಲಿ 40 ಅಡಿಯ ಎರಡು ಕಂಟೇನರ್‌ಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಅಫ್ಗಾನಿಸ್ತಾನದಿಂದ ಇದನ್ನು ಆಮದು ಮಾಡಿಕೊಳ್ಳಲಾಗಿತ್ತು. ಇರಾನ್‌ನ ಬಂದರ್‌ ಅಬ್ಬಾಸ್‌ನಲ್ಲಿ ಇದನ್ನು ಹಡಗಿಗೆ ಹಾಕಲಾಗಿತ್ತು. ಅಫ್ಗಾನಿಸ್ತಾನದ ಹಸನ್‌–ಹುಸೇನ್‌ ಲಿ. ಎಂಬ ಕಂಪನಿಯು ಇದನ್ನು ರಪ್ತು ಮಾಡಿತ್ತು. ಎರಡು ಕಂಟೇನರ್‌ಗಳಲ್ಲಿರುವ ಸರಕಿನ ಮೌಲ್ಯ₹7.5 ಕೋಟಿ ಎಂದು ಹೇಳಲಾಗಿತ್ತು ಎಂಬ ವಿಚಾರಗಳು ತನಿಖೆಯಲ್ಲಿ ತಿಳಿದು ಬಂದಿದ್ದವು.

ಅಪಪ್ರಚಾರ ತಡೆ ಯತ್ನ

ಮುಂದ್ರಾ ಬಂದರಿನಲ್ಲಿ ಭಾರಿ ಪ್ರಮಾಣದ ಡ್ರಗ್ಸ್‌ ಪತ್ತೆಯಾದ ಬಳಿಕ ಅದಾನಿ ಸಮೂಹದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಹಾಗಾಗಿ, ಸೆಪ್ಟೆಂಬರ್‌ 21ರಂದು ಕಂಪನಿಯು ಹೇಳಿಕೆ ಬಿಡುಗಡೆ ಮಾಡಿತ್ತು. ‘ಅದಾನಿ ಸಮೂಹದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಗುತ್ತಿರುವ ಅಪಪ್ರಚಾರ ತಡೆಯುವುದಕ್ಕಾಗಿಯೇ ಹೇಳಿಕೆ ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು. ಅದಾನಿ ಬಂದರು ಮತ್ತು ಎಸ್‌ಇಝಡ್‌ ಸಂಸ್ಥೆಯು ಬಂದರು ನಿರ್ವಹಣೆ ಸೇವೆಗಳನ್ನು ಮಾತ್ರ ಒದಗಿಸುತ್ತದೆ. ಮುಂದ್ರಾ ಮತ್ತು ನಮ್ಮ ಇತರ ಬಂದರುಗಳ ಮೂಲಕ ಸಾವಿರಾರು ಟನ್‌ ಸರಕು ಸಾಗಾಟವಾಗುತ್ತದೆ. ಅವೆಲ್ಲವನ್ನೂ ತನಿಖೆಗೆ ಒಳಪಡಿಸುವ ಕೆಲಸ ಮಾಡುವುದಿಲ್ಲ’ ಎಂದು ಹೇಳಿಕೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.