ADVERTISEMENT

‘ಅಡೂರ್‌ ಚಂದ್ರಗ್ರಹಕ್ಕೆ ಹೋಗಲಿ’

ಗುಂಪು ಹಲ್ಲೆ ವಿರುದ್ಧ ಪ್ರಧಾನಿಗೆ ಪತ್ರ ಬರೆದದ್ದಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 19:51 IST
Last Updated 25 ಜುಲೈ 2019, 19:51 IST
.
.   

ತಿರುವನಂತ‍ಪುರ: ‘ಜೈ ಶ್ರೀರಾಂ’ ಘೋಷಣೆ ಅನುರಣನಗೊಳ್ಳುತ್ತಿರುವುದನ್ನು ಕೇಳಲಾಗದಿದ್ದರೆ ಖ್ಯಾತ ಚಲನಚಿತ್ರ ನಿರ್ದೇಶಕ ಅಡೂರ್‌ ಗೋಪಾ ಲಕೃಷ್ಣನ್‌ ಅವರು ಬೇರೆ ಯಾವುದೇ ಗ್ರಹಕ್ಕೆ ಹೋಗಿ ನೆಲೆಸಲು ಸ್ವತಂತ್ರರು ಎಂದು ಕೇರಳ ಬಿಜೆಪಿ ಘಟಕದ ವಕ್ತಾರ ಬಿ. ಗೋಪಾಲಕೃಷ್ಣನ್‌ ಹೇಳಿದ್ದಾರೆ.

ಪದ್ಮವಿಭೂಷಣ ಮತ್ತು ದಾದಾ ಸಾಹೇಬ್‌ ಫಾಲ್ಕೆ ಸೇರಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವ ಅಡೂರ್‌ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಿ. ಗೋಪಾಲಕೃಷ್ಣನ್‌ ಅವರು ಹರಿಹಾಯ್ದಿದ್ದಾರೆ.

ಗುಂಪು ಹಲ್ಲೆಗಳ ಸಂದರ್ಭದಲ್ಲಿ ‘ಜೈ ಶ್ರೀರಾಂ’ ಘೋಷಣೆ ಕೂಗಲಾಗುತ್ತಿದೆ. ಹಾಗಾಗಿ, ಈ ಘೋಷಣೆ ಈಗ ಒಂದು ಪ್ರಚೋದನಕಾರಿ ಯುದ್ಧಘೋಷವಾಗಿ ಮಾರ್ಪಟ್ಟಿದೆ ಎಂದು ಕಳವಳ ವ್ಯಕ್ತಪಡಿಸಿ 49 ಪ್ರಸಿದ್ಧ ವ್ಯಕ್ತಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಅದಕ್ಕೆ ಅಡೂರ್‌ ಅವರೂ ಸಹಿ ಹಾಕಿದ್ದಾರೆ. ಈ ಕಾರಣಕ್ಕಾಗಿಯೇ ಅಡೂರ್‌ ಅವರನ್ನು ಬಿ.ಗೋಪಾಲಕೃಷ್ಣ ಟೀಕಿಸಿದ್ದಾರೆ.

ADVERTISEMENT

ಭಾರತದಲ್ಲಿ ‘ಜೈಶ್ರೀರಾಂ’ ಘೋಷಣೆ ಮೊಳಗಲಿ ಎಂಬ ಕಾರಣಕ್ಕಾಗಿಯೇ ದೇಶದ ಜನರು ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಅಡೂರ್‌ ಅವರಿಗೆ ಇದನ್ನು ಸಹಿಸಲಾಗುತ್ತಿಲ್ಲ ಎಂದಾದರೆ ಅವರು ತಮ್ಮ ಹೆಸರು ಬದಲಾಯಿಸಿ ಬೇರೆ ಯಾವುದೇ ಗ್ರಹಕ್ಕೆ ಹೋಗಬಹುದು. ಇದು ರಾಮಾಯಣ ತಿಂಗಳು. ಜೈಶ್ರೀರಾಂ ಎಂಬುದು ಇಲ್ಲಿ ಮಾತ್ರವಲ್ಲ ನೆರೆಯ ದೇಶಗಳಲ್ಲಿಯೂ ಅನುರಣಿಸಲಿದೆ. ಅಗತ್ಯ ಬಿದ್ದರೆ ಅಡೂರ್‌ ಅವರ ಮನೆಯ ಸಮೀಪವೂ ಈ ಘೋಷಣೆ ಮೊಳಗಲಿದೆ. ಅವರಿಗೆ ಸಹಿಸಲಾಗದಿದ್ದರೆ ಚಂದ್ರಗ್ರಹಕ್ಕೆ ಹೋಗಲಿ ಎಂದು ಸಾಮಾಜಿಕ ಜಾಲ ತಾಣದಲ್ಲಿ ಬಿಜೆಪಿ ವಕ್ತಾರ ಹೇಳಿದ್ದಾರೆ.

ಜೈ ಶ್ರೀರಾಂ ಮತ್ತು ಸ್ವಾಮಿ ಶರಣಂ ಎಂಬ ಘೋಷಣೆ ಕೂಗಿದ್ದಕ್ಕಾಗಿ ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಜನರನ್ನು ಜೈಲಿಗೆ ಹಾಕುತ್ತಿದ್ದಾಗ ಅಡೂರ್‌ ಅವರು ಯಾಕೆ ಮೌನವಾಗಿದ್ದರು ಎಂದೂ ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.