ADVERTISEMENT

ಕೈಗಾ: ಎರಡು ಅಣು ವಿದ್ಯುತ್‌ ಸ್ಥಾವರಗಳ ನಿರ್ಮಾಣಕ್ಕೆ ಸಮ್ಮತಿ

ಪಿಟಿಐ
Published 21 ಏಪ್ರಿಲ್ 2022, 12:44 IST
Last Updated 21 ಏಪ್ರಿಲ್ 2022, 12:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕರ್ನಾಟಕದ ಕೈಗಾದಲ್ಲಿ ತಲಾ 700 ಮೆಗಾವ್ಯಾಟ್‌ ಸಾಮರ್ಥ್ಯದ ಎರಡು ಅಣು ವಿದ್ಯುತ್‌ ಸ್ಥಾವರಗಳನ್ನು ನಿರ್ಮಿಸುವ ಯೋಜನೆಗೆ ಅಣುಶಕ್ತಿ ನಿಯಂತ್ರಣ ಮಂಡಳಿಯು (ಎಇಆರ್‌ಬಿ)ಮಾರ್ಚ್‌ 31ರಂದು ಅನುಮತಿ ನೀಡಿದೆ.

ಕೈಗಾದಲ್ಲಿ 5 ಮತ್ತು 6ನೇ ಸ್ಥಾವರದ ನಿರ್ಮಾಣಕ್ಕೆ ದೊರೆತಿರುವ ಅನುಮೋದನೆ ದೊರೆತಿದ್ದು ಭಾರತೀಯ ಅಣುಶಕ್ತಿ ವಿದ್ಯುತ್‌ ನಿಗಮವು (ಎನ್‌ಪಿಸಿಐಎಲ್‌) ಉದ್ದೇಶಿತ ಎರಡೂ ಸ್ಥಾವರಗಳನ್ನು ನಿರ್ಮಿಸಲಿದೆ. ಹಾಲಿ ಇರುವ ತಲಾ 220 ಮೆಗಾವ್ಯಾಟ್‌ ಸಾಮರ್ಥ್ಯದ ನಾಲ್ಕು ಸ್ಥಾವರಗಳಿಂದ ಪ್ರತ್ಯೇಕವಾಗಿ ಇದು ಸ್ಥಾಪನೆಯಾಗಲಿದೆ. ವಿಕಿರಣ ವಾಹಕ ನಿಯಂತ್ರಣ ಘಟಕ, ನಿಯಂತ್ರಣ ವ್ಯವಸ್ಥೆಯ ಮೇಲ್ವಿಚಾರಣೆ ವ್ಯವಸ್ಥೆ ಕಾರ್ಯಾರಂಭ ಮಾಡಿದೆ ಎಂದು ಎನ್‌ಪಿಸಿಐಎಲ್‌ ತಿಳಿಸಿದೆ.

ಎರಡು ನೂತನ ಸ್ಥಾವರಗಳ ನಿರ್ಮಾಣ ಮುಂದಿನ ವರ್ಷ ಆರಂಭವಾಗಲಿದೆ ಎಂದು ಸರ್ಕಾರ ಸಂಸತ್ತಿನಲ್ಲಿ ಕಳೆದ ತಿಂಗಳು ತಿಳಿಸಿತ್ತು. ವೆಚ್ಚ ನಿಯಂತ್ರಣ, ನಿರ್ಮಾಣ ಸಮಯ ತಗ್ಗಿಸಲು ₹ 1.05 ಲಕ್ಷ ಕೋಟಿ ವೆಚ್ಚದಲ್ಲಿ 700 ಮೆಗಾವ್ಯಾಟ್ ಸಾಮರ್ಥ್ಯದ 10 ಸ್ಥಾವರಗಳನ್ನು ತ್ವರಿತಗತಿಯಲ್ಲಿ ನಿರ್ಮಿಸಲು ಕೇಂದ್ರ ಸಚಿವ ಸಂಪುಟ ಜೂನ್ 2017ರಲ್ಲಿ ಒಪ್ಪಿಗೆ ನೀಡಿತ್ತು.

ADVERTISEMENT

ಕೈಗಾ ನಂತರ ಗೋರಖ್‌ಪುರ ಹರಿಯಾಣ ಅಣುವಿದ್ಯುತ್‌ ಪರಿಯೋಜನೆಯ 3 ಮತ್ತು 4ನೇ ಘಟಕಗಳು, ರಾಜಸ್ಥಾನದ ಮಹಿ ಬನ್ಸ್ವಾರಾದಲ್ಲಿ 700 ಮೆಗಾವ್ಯಾಟ್‌ ಸಾಮರ್ಥ್ಯದ ನಾಲ್ಕು ಘಟಕಗಳ ನಿರ್ಮಾಣ 2024ರಲ್ಲಿ ಆರಂಭವಾಗಲಿದೆ. ನಂತರ ಚುಟ್ಕಾ ಮಧ್ಯಪ್ರದೇಶ ಅಣುವಿದ್ಯುತ್ ಯೋಜನೆಯ 1 ಮತ್ತು 2ನೇ ಘಟಕದ ನಿರ್ಮಾಣ ಕಾರ್ಯವು 2025ರಲ್ಲಿ ಆರಂಭವಾಗಲಿದೆ.

ಪ್ರಸ್ತುತ ಭಾರತದಲ್ಲಿ ಅಣುಶಕ್ತಿ ಆಧರಿತ ವಿದ್ಯುತ್‌ ಉತ್ಪಾದನೆಯ 22 ರಿಯಾಕ್ಟರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು ಉತ್ಪಾದನಾ ಸಾಮರ್ಥ್ಯ 6,780 ಮೆಗಾವ್ಯಾಟ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.