ADVERTISEMENT

ಅಫ್ಗನ್‌ ಬಿಕ್ಕಟ್ಟು: ದೋಹಾದಿಂದ 146 ಭಾರತೀಯರು 4 ವಿಮಾನಗಳಲ್ಲಿ ತಾಯ್ನಾಡಿಗೆ

ಪಿಟಿಐ
Published 23 ಆಗಸ್ಟ್ 2021, 6:26 IST
Last Updated 23 ಆಗಸ್ಟ್ 2021, 6:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಫ್ಗಾನಿಸ್ತಾನದಿಂದ ನ್ಯಾಟೊ ಮತ್ತು ಅಮೆರಿಕದ ವಿಮಾನಗಳ ಮೂಲಕ ಸ್ಥಳಾಂತರಗೊಂಡಿದ್ದ 146 ಮಂದಿ ಭಾರತೀಯರನ್ನು ಸೋಮವಾರ ಕತಾರ್‌ನ ರಾಜಧಾನಿ ದೋಹಾದಿಂದ ನಾಲ್ಕು ವಿಮಾನಗಳ ಮೂಲಕ ಭಾರತಕ್ಕೆ ಕರೆತರಲಾಯಿತು.

ದೋಹಾದಿಂದ ಕರೆತರಲಾದ ಎರಡನೇ ತಂಡ ಇದಾಗಿದೆ. ಭಾನುವಾರ 135 ಮಂದಿಯನ್ನು ಕರೆತರಲಾಗಿತ್ತು. ಇವರೆಲ್ಲ ವಿವಿಧ ಕಂಪನಿಗಳಿಗಾಗಿ ಅಫ್ಗಾನಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯಾಗಿದ್ದರು.

ಸೋಮವಾರ ಕರೆತರಲಾದ ಭಾರತೀಯರ ಪೈಕಿ 104 ಮಂದಿ ವಿಸ್ತಾರಾ ವಿಮಾನದಲ್ಲಿ ಬಂದಿಳಿದರೆ, 30 ಮಂದಿ ಕತಾರ್‌ ಏರ್‌ವೇಸ್‌ನಲ್ಲಿ, 11 ಮಂದಿ ಇಂಡಿಯೊ ವಿಮಾನದಲ್ಲಿ ಹಾಗೂ ಒಬ್ಬರು ಏರ್‌ ಇಂಡಿಯಾ ವಿಮಾನದಲ್ಲಿ ವಾಪಸಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಭಾರತವು ಭಾನುವಾರ ಅಫ್ಗನ್‌ನ ಇಬ್ಬರು ಸಂಸದರ ಸಹಿತ 392 ಮಂದಿಯನ್ನು ಮೂರು ವಿವಿಧ ವಿಮಾನಗಳ ಮೂಲಕ ಕರೆತಂದಿತ್ತು.

ವಿಶ್ವಸಂಸ್ಥೆಯಿಂದ 120 ಮಂದಿ ಸ್ಥಳಾಂತರ:ವಿಶ್ವಸಂಸ್ಥೆಯ ವತಿಯಿಂದಲೂ ಕಾಬೂಲ್‌ನಿಂದ ಜನರನ್ನು ಸ್ಥಳಾಂತರಿಸುವ ಕೆಲಸ ಆರಂಭವಾಗಿದ್ದು, 120 ಮಂದಿಯನ್ನು ಕಜಕಿಸ್ತಾನದ ಅಲ್ಮಾಟಿಗೆ ಕರೆದೊಯ್ಯಲಾಗಿದೆ ಎಂದು ಮಹಾಪ್ರಧಾನ ಕಾರ್ಯದರ್ಶಿ ಆಂಟೆನಿಯೊ ಗುಟೆರಸ್‌ ಅವರ ವಕ್ತಾರ ಸ್ಟೀಫನೆ ಡುಜರಿಕ್‌ ತಿಳಿಸಿದ್ದಾರೆ.

ಕಳೆದ ವಾರವೂ ಒಂದು ವಿಮಾನದಲ್ಲಿ 100 ಮಂದಿಯನ್ನು ಇದೇ ರೀತಿ ಕಜಕಿಸ್ತಾನಕ್ಕೆ ಸ್ಥಳಾಂತರಿಸಲಾಗಿತ್ತು. ಇವರೆಲ್ಲ ವಿವಿಧ ಸರ್ಕಾರೇತರ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.