ADVERTISEMENT

ಕಾಂಚಿಪುರ: 40 ವರ್ಷಗಳ ಬಳಿಕ ದೇವರ ದರ್ಶನ

48 ದಿನಗಳ ಕಾಲ ಉತ್ಸವ: ಲಕ್ಷಾಂತರ ಭಕ್ತಾದಿಗಳು ಆಗಮಿಸುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 19:36 IST
Last Updated 30 ಜೂನ್ 2019, 19:36 IST
ಕಂಚಿಪುರದ ಅಥಿ ವರದಾರ್‌ ದೇವಾಲಯದ ಬಳಿ ಅಳವಡಿಸಿರುವ ಸ್ವಾಗತ ಕಮಾನುಗಳು
ಕಂಚಿಪುರದ ಅಥಿ ವರದಾರ್‌ ದೇವಾಲಯದ ಬಳಿ ಅಳವಡಿಸಿರುವ ಸ್ವಾಗತ ಕಮಾನುಗಳು   

ಚೆನ್ನೈ: ತಮಿಳುನಾಡಿನ ದೇಗುಲಗಳ ನಗರ ಕಾಂಚಿಪುರದಲ್ಲಿ ‘ಅಥಿ ವರದಾರ್‌’ ದೇವರ ದರ್ಶನ 40 ವರ್ಷಗಳ ಬಳಿಕ ದೊರೆಯಲಿದೆ.

ಲಕ್ಷಾಂತರ ಭಕ್ತಾದಿಗಳು ದರ್ಶನ ಪಡೆಯಲು ಉತ್ಸುಕರಾಗಿದ್ದು, ದೇವಾಲಯದ ಆಡಳಿತ ಮಂಡಳಿ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.

40 ವರ್ಷಕ್ಕೊಮ್ಮೆ ಈ ದೇವಾಲಯದ ಬಾಗಿಲುಗಳನ್ನು ತೆರೆಯುವ ಸಂಪ್ರದಾಯ ಇಲ್ಲಿದೆ. ಈ ಹಿಂದೆ 1979ರಲ್ಲಿ ದರ್ಶನ ಭಾಗ್ಯ ಕಲ್ಪಿಸಲಾಗಿತ್ತು. ಇದಕ್ಕೂ ಮೊದಲು 1939ರಲ್ಲಿ ದರ್ಶನ ಕಲ್ಪಿಸಲಾಗಿತ್ತು.

ADVERTISEMENT

48 ದಿನಗಳ ಕಾಲ ನಡೆಯುವ ಉತ್ಸವವು ಸೋಮವಾರದಿಂದ ಆರಂಭವಾಗಲಿದೆ. ಪ್ರತಿ ದಿನ ಬೆಳಿಗ್ಗೆ 5ಗಂಟೆಯಿಂದ ರಾತ್ರಿ 8ಗಂಟೆಯವರೆಗೆ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ. ಆಗಸ್ಟ್‌ 17ರವರೆಗೆ ಭಕ್ತಾದಿಗಳಿಗೆ ದರ್ಶನದ ಅವಕಾಶ ಲಭಿಸಲಿದೆ.

ಮೊದಲ 40 ದಿನಗಳ ಕಾಲ ಅಂದರೆ ಜುಲೈ 1ರಿಂದ ಆಗಸ್ಟ್‌ 9ರವರೆಗೆ ಬೆನ್ನು ನೆಲಕ್ಕೆ ಒರಗಿದ ರೀತಿಯಲ್ಲಿ ದೇವರ ವಿಗ್ರಹವನ್ನಿರಿಸಲಾಗುವುದು. ಬಳಿಕ ಕೊನೆಯ ಎಂಟು ದಿನಗಳಾದ ಆಗಸ್ಟ್‌ 10ರಿಂದ 17ರವರೆಗೆ ನಿಂತಿರುವ ಭಂಗಿಯಲ್ಲಿರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ವಿವಿಧೆಡೆಯಿಂದ ಬರುವ ಭಕ್ತಾದಿಗಳಿಗೆ ಬೆಳಿಗ್ಗೆ 5 ಗಂಟೆಯಿಂದ ಸಂಜೆ 5ರವರೆಗೆ ಹಾಗೂ ಸ್ಥಳೀಯರಿಗೆ ಸಂಜೆ 5ರಿಂದ ರಾತ್ರಿ 8ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. www.tnhrce.org ವೆಬ್‌ಸೈಟ್‌ನಲ್ಲೂ ₹500 ಪಾವತಿಸಿ ಹೆಸರು ನೋಂದಾಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.