ADVERTISEMENT

ಕಾಂಗ್ರೆಸ್ ಟೀಕೆ ಬೆನ್ನಲ್ಲೇ, ಬಿಜೆಪಿ ಹೊಗಳಿದ ಹಾರ್ದಿಕ್ ಪಟೇಲ್

ಪಿಟಿಐ
Published 23 ಏಪ್ರಿಲ್ 2022, 12:20 IST
Last Updated 23 ಏಪ್ರಿಲ್ 2022, 12:20 IST
ಹಾರ್ದಿಕ್ ಪಟೇಲ್, ಕಾಂಗ್ರೆಸ್ ಮುಖಂಡ
ಹಾರ್ದಿಕ್ ಪಟೇಲ್, ಕಾಂಗ್ರೆಸ್ ಮುಖಂಡ   

ಅಹಮದಾಬಾದ್: ಇತ್ತೀಚೆಗೆ ತಮ್ಮದೇ ಪಕ್ಷದ ಕಾರ್ಯವೈಖರಿ ವಿರುದ್ಧ ಟೀಕಾಪ್ರಹಾರ ಮಾಡಿದ್ದ ಗುಜರಾತ್ ಕಾಂಗ್ರೆಸ್ ಘಟಕದ ನಾಯಕ ಹಾರ್ದಿಕ್ ಪಟೇಲ್ ಅವರು, ಈಗ ಬಿಜೆಪಿಯ ನಿರ್ಣಯ ಕೈಗೊಳ್ಳುವ ಸಾಮರ್ಥ್ಯದ ಬಗ್ಗೆ ಹಾಡಿ ಹೊಗಳಿದ್ದಾರೆ. ಆದರೆ ಪ್ರತಿಪಕ್ಷವಾದ ಕಾಂಗ್ರೆಸ್‌ಗೆ ನಾಯಕತ್ವದ ಕೊರತೆಯಿದೆ ಎಂದಿದ್ದಾರೆ.

ಅವರು ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಲು ಮುಂದಾಗಿದ್ದಾರೆ ಎಂಬ ಊಹಾಪೋಹ ರಾಜ್ಯ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಆದರೆ ತಾವೊಬ್ಬ 'ಹೆಮ್ಮೆಯ ಹಿಂದೂ' ಎಂದು ಹೇಳಿಕೊಂಡಿರುವ ರಾಜ್ಯ ಕಾಂಗ್ರೆಸ್ ಘಟಕದ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಅವರು, ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗುಜರಾತ್‌ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಟೇಲ್ ಸಮುದಾಯದ ನಾಯಕ ನರೇಶ್ ಪಟೇಲ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಯೋಜಿಸಿದೆ. ಒಂದು ವೇಳೆ ಅವರು ಕಾಂಗ್ರೆಸ್ ಸೇರ್ಪಡೆಯಾದರೆ, ಪಟೇಲ್ ಸಮುದಾಯದ ನಾಯಕರಾದ ತಮ್ಮ ಪ್ರಭಾವಳಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದು ಹಾರ್ದಿಕ್ ಪಟೇಲ್ ಅವರ ಅಳಕು. ಇದು ಹಾರ್ದಿಕ್ ಪಟೇಲ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ADVERTISEMENT

ರಾಜ್ಯ ಕಾಂಗ್ರೆಸ್ ಕಾರ್ಯವೈಖರಿ ವಿರುದ್ಧ ಟೀಕೆ ಮಾಡಿದ ಒಂದು ವಾರದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 'ನನ್ನ ಅಭಿಪ್ರಾಯಗಳನ್ನು ಪಕ್ಷದ ಹೈಕಮಾಂಡ್‌ಗೆ ತಿಳಿಸಿದ್ದೇನೆ. ರಾಜ್ಯದ ಜನತೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸರಿಯಾದ ನಿರ್ಧಾರ ಕೈಗೊಳ್ಳಲಿದೆ ಎಂಬ ಭರವಸೆಯಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.