ADVERTISEMENT

ಜಮ್ಮು: ಸೇನಾ ವಾಹನದ ಮೇಲೆ ದಾಳಿ; ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಮುಂದುವರಿಕೆ

ಪಿಟಿಐ
Published 27 ಫೆಬ್ರುವರಿ 2025, 6:05 IST
Last Updated 27 ಫೆಬ್ರುವರಿ 2025, 6:05 IST
   

ಜಮ್ಮು: ‌ಬುಧವಾರ ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕರನ್ನು ಹೊಡೆದುರುಳಿಸಲು ಭದ್ರತಾ ಪಡೆಗಳು ಗುರುವಾರ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಸುಂದರ್‌ಬನಿ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿಯ ಪ್ರದೇಶಗಳನ್ನು ಸುತ್ತುವರಿದು, ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಥುವಾ ಜಿಲ್ಲೆಯ ಹೀರಾನಗರ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯ ಸಮೀಪವಿರುವ ದಯಾಲಚಕ್‌ನಲ್ಲಿ ಭದ್ರತಾ ಪಡೆಗಳು ಅನುಮಾನಾಸ್ಪದ ಫ್ರೀಕ್ವೆನ್ಸಿ ವೈರ್‌ಲೆಸ್ ಸೆಟ್ ಅನ್ನು ವಶಕ್ಕೆ ಪಡೆದ ನಂತರ ಹೊಸ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.

ಬುಧವಾರ ಸುಂದರ್‌ಬನಿ ಸೆಕ್ಟರ್‌ನ ಫಾಲ್ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿದ್ದ ಶಂಕಿತ ಭಯೋತ್ಪಾದಕರು, ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದು, ಸೇನೆ ಮತ್ತು ಪೊಲೀಸರು ಭಾರೀ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ADVERTISEMENT

ಫಾಲ್‌ನಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಅಡಗಿರುವ ಭಯೋತ್ಪಾದಕರನ್ನು ಪತ್ತೆಮಾಡಲು ಇಂದು ಬೆಳಿಗ್ಗೆ ಹೊಸ ಪ್ರದೇಶಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಟ್ಟ ಅರಣ್ಯದಲ್ಲಿ ಭಯೋತ್ಪಾದಕರನ್ನು ಬೇಟೆಯಾಡಲು ಭದ್ರತಾ ಪಡೆಗಳು ಡ್ರೋನ್ ಮತ್ತು ಸ್ನಿಫರ್ ಡಾಗ್‌ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಬಳಸುತ್ತಿವೆ ಎಂದು ಅವರು ಹೇಳಿದ್ದಾರೆ.

‘ಭಯೋತ್ಪಾದಕರು ನಿನ್ನೆ (ಬುಧವಾರ) ಅಖ್ನೂರ್‌ನ ಸುಂದರ್‌ಬನಿಯಲ್ಲಿ ಭಾರತೀಯ ಸೇನಾ ಬೆಂಗಾವಲು ಪಡೆ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ದಾಳಿಯಿಂದ ಯಾವುದೇ ಹಾನಿ ಆಗಿಲ್ಲ. ತ್ವರಿತವಾಗಿ ಪ್ರತಿದಾಳಿ ನಡೆಸಿದ್ದೇವೆ. ಕೆಲವು ಯೋಧರು ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆಗಳು ತಪ್ಪು ಸುದ್ದಿ ಹರಡುತ್ತಿವೆ. ಇದು ಉದ್ದೇಶಪೂರ್ವಕ ತಪ್ಪು ಸಂದೇಶವಾಗಿದೆ. ಉಗ್ರರನ್ನು ಹೊಡೆದುರುಳಿಸಲು ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಸೇನೆಯ ಜಮ್ಮು ಮೂಲದ ವೈಟ್ ನೈಟ್ ಕಾರ್ಪ್ಸ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.