ADVERTISEMENT

‘ಯೋಧರ ಹೆಣದ ಮೇಲೆ ರಾಜಕೀಯ’

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 18:23 IST
Last Updated 6 ಮಾರ್ಚ್ 2019, 18:23 IST
   

ಹೌರಾ (ಪಶ್ಚಿಮ ಬಂಗಾಳ): ಪ್ರಧಾನಿ ನರೇಂದ್ರ ಮೋದಿ ಅವರು ಯೋಧರ ಮೃತದೇಹಗಳನ್ನು ಇಟ್ಟುಕೊಂಡು ಅವಕಾಶವಾದಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಆರೋಪ ಮಾಡಿದ್ದಾರೆ.‌ ತಾವೊಬ್ಬರೇ ದೇಶಪ್ರೇಮಿ ಎಂದು ಮೋದಿ ಅವರು ಬಿಂಬಿಸಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಎಂದೂ ಅವರು ಹೇಳಿದ್ದಾರೆ.

‘ಕಪ್ಪುಪಟ್ಟಿಗೆ ಸೇರಿರುವ’ ಮೋದಿ ಸರ್ಕಾರವನ್ನು ಕಿತ್ತುಹಾಕುತ್ತೇವೆ ಎಂದು ಶಪಥ ಮಾಡಿದ ಮಮತಾ, ‘ಮೋದಿ–ಅಮಿತ್ ಶಾ ಹಾಗೂ ಬಿಜೆಪಿಯ ನಾಮಫಲಕಗಳನ್ನು ಕಿತ್ತೆಸೆಯುತ್ತೇವೆ’ ಎಂದರು.

‘ಈ ಐದು ವರ್ಷಗಳಲ್ಲಿ ನೀವು (ಮೋದಿ) ಏನನ್ನೂ ಮಾಡಲಿಲ್ಲ. ಹೀಗಾಗಿ ಕ್ಷಿಪಣಿ, ಬಾಂಬ್ ಹಾಗೂ ಯೋಧರ ಮೃತದೇಹಗಳ ಮೊರೆ ಹೋಗಿದ್ದೀರಿ. ಸೈನಿಕರ ಹೆಣಗಳ ಮೇಲೆ ರಾಜಕೀಯ ಮಾಡಲು ನಿಮಗೆ ನಾಚಿಕೆಯೆನಿಸುವುದಿಲ್ಲವೇ? ನಾವು ನಮ್ಮ ಸೇನಾಪಡೆಗಳ ಜೊತೆಗಿದ್ದೇವೆಯೇ ಹೊರತು ಮೋದಿ ಸರ್ಕಾರದ ಜತೆಗೆ ಅಲ್ಲ’ ಎಂದು ಮಮತಾ ಕಿಡಿಕಾರಿದ್ದಾರೆ.

ADVERTISEMENT

‘ಬಾಲಾಕೋಟ್‌ನಲ್ಲಿ ಉಗ್ರರ ಮೇಲೆ ನಡೆದ ದಾಳಿಯ ಫಲಿತಾಂಶವೇನು ಎಂದು ಕೇಳುವವರಿಗೆ ಪಾಕಿಸ್ತಾನೀಯರು ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಒಂದು ವೇಳೆ ನಾವೆಲ್ಲರೂ ನೆರೆಯ ದೇಶಕ್ಕೆ ಸೇರಿದವರು ಎಂದು ಪರಿಗಣಿಸುವುದಾದರೆ, ನೀವೊಬ್ಬರೇ ನೈಜ ಭಾರತೀಯರೇ’ ಎಂದು ಮಮತಾ ವ್ಯಂಗ್ಯ ಮಾಡಿದ್ದಾರೆ.

‘ನನ್ನ ಧರ್ಮ ಯಾವುದು ಎಂದು ಬಿಜೆಪಿ ಮುಖಂಡರು ನಿತ್ಯವೂ ವೆಬ್‌ಸೈಟ್‌ನಲ್ಲಿ ತಡಕಾಡುತ್ತಿದ್ದಾರೆ. ನನ್ನ ಧರ್ಮ ಮಾನವೀಯತೆ ಎಂದು ಹೇಳಲು ಬಯಸುತ್ತೇನೆ. ಅವರಿಗೆ ಇದೆಲ್ಲ ಕೇಳಿಸುವುದಿಲ್ಲ. ಏಕೆಂದರೆ ಅವರ ಕೈಗಳಲ್ಲಿ ರಕ್ತದ ಕಲೆಯಿದೆ’ ಎಂದು ಮಮತಾ ತೀಕ್ಷ್ಣವಾಗಿ ಹೇಳಿದ್ದಾರೆ.

ಹೌರಾದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಮೋದಿಯನ್ನು ಗಬ್ಬರ್‌ಸಿಂಗ್‌ಗೆ ಹೋಲಿಸಿದರು.

‘ಬಿಜೆಪಿ ನೇತೃತ್ವದ ಸರ್ಕಾರವು ದೇಶದ ಎಲ್ಲ ಸಾಂಸ್ಥಿಕ ವ್ಯವಸ್ಥೆಗಳು ಹಾಗೂ ಮಾಧ್ಯಮ ಸಂಸ್ಥೆಗಳನ್ನು ಬೆದರಿಸಿದೆ. ನಾವು ಎಷ್ಟೋ ಸರ್ಕಾರಗಳನ್ನು ನೋಡಿದ್ದೇವೆ. ಆದರೆ ಎಲ್ಲರಲ್ಲೂ ಭಯ ಉತ್ಪಾದಿಸುತ್ತಿರುವ ಇಂತಹ ಪ್ರಧಾನಿಯನ್ನು ನೋಡಿಲ್ಲ’ ಎಂದು ಆರೋಪಿಸಿದರು.

ಟ್ವಿಟರ್‌ ನನ್ನದಲ್ಲ: ಮಣಿಶಂಕರ್

ತಮ್ಮ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ತೆರೆಯಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಆರೋಪಿಸಿದ್ದಾರೆ.

ಈವರೆಗೆ ತಾವು ಟ್ವಿಟರ್ ಖಾತೆ ತೆರೆದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

‘ಅನಾಮಿಕರು ತಮ್ಮ ಹೆಸರಲ್ಲಿ ಖಾತೆ ತೆರೆದಿದ್ದು, ದಿನಕ್ಕೆ ಕನಿಷ್ಠ ಒಂದು ಸಂದೇಶವಾದರೂ ಅದರಲ್ಲಿ ಪ್ರಕಟವಾಗುತ್ತಿದೆ. ಚುನಾವಣೆ ಹೊಸ್ತಿಲಲ್ಲಿ ಇಂತಹ ಕೀಳುಮಟ್ಟದ ಯತ್ನಗಳು ನಿಲ್ಲಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

***

‘ಇಡೀ ಜಗತ್ತು ಭಾರತ ಪರ, ವಿಪಕ್ಷಗಳು ಮಾತ್ರ ಪಾಕ್‌ ಪರ’

ಬಾಲಾಕೋಟ್ ದಾಳಿಯ ವಿಚಾರದಲ್ಲಿ ಇಡೀ ಜಗತ್ತು ಭಾರತದ ಬೆನ್ನಿಗೆ ನಿಂತಿರುವಾಗ ವಿರೋಧ ಪಕ್ಷಗಳು ಮಾತ್ರ ಭಯೋತ್ಪಾದನೆ ರಫ್ತು ಮಾಡುವ ಪಾಕಿಸ್ತಾನದ ಪರ ವಹಿಸಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಕಿಡಿಕಾರಿದೆ.

ವಾಯುದಾಳಿ ಕುರಿತು ಕಾಂಗ್ರೆಸ್‌ನ ವಿವಿಧ ಮುಖಂಡರು ನೀಡುತ್ತಿರುವ ಹೇಳಿಕೆಗಳು ಬೇಜವಾಬ್ದಾರಿಯಿಂದ ಕೂಡಿವೆ ಎಂದು ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹರಾವ್ ಆರೋಪಿಸಿದ್ದಾರೆ. ‘ಭಾರತೀಯ ಸೇನೆಯ ಶೌರ್ಯ ಹಾಗೂ ಬಾಲಾಕೋಟ್ ದಾಳಿಯಲ್ಲಿ ಅದು ಸಾಧಿಸಿದ ಅಪೂರ್ವ ಯಶಸ್ಸಿನಿಂದ ಕಾಂಗ್ರೆಸ್‌ ನಾಯಕರು ಹತಾಶೆ ಹಾಗೂ ನಿರಾಸೆಗೆ ಒಳಗಾಗಿರುವುದು ಅವರ ಹೇಳಿಕೆಗಳಿಂದಲೇ ವೇದ್ಯವಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಇಡೀ ದೇಶವೇ ಹೆಮ್ಮೆಯಿಂದ ಬೀಗುತ್ತಿದ್ದರೆ, ಕಾಂಗ್ರೆಸ್ ಮತ್ತವರ ಸ್ನೇಹಿತರು ಮಾತ್ರ ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುವ ಮೂಲಕ ಸೇನೆಯ ಭಾವನೆಗಳಿಗೆ ಘಾಸಿ ಮಾಡುತ್ತಿದ್ದಾರೆ’ ಎಂದು ನರಸಿಂಹರಾವ್ ದೂರಿದ್ದಾರೆ.

‘ಭಾರತ ಹಾಗೂ ಸೇನಾಪಡೆಗಳ ಆತ್ಮವಿಶ್ವಾಸ ಹೆಚ್ಚಾಗಿದ್ದು, ‘ನವಭಾರತ’ದ ಉದಯದ ಸಂಭ್ರಮ ಮೂಡಿದೆ. ಆದರೆ ಉದಯಿಸುತ್ತಿರುವ ಹೊಸ ಭಾರತದಲ್ಲಿ ತಮ್ಮ ಅಡಿಪಾಯ ಏನಾಗುವುದೋ ಎಂಬ ಭೀತಿಯಲ್ಲಿ ಕಾಂಗ್ರೆಸ್ ಹಾಗೂ ಅದರ ಸ್ನೇಹಿತರು ಚಿಂತಾಕ್ರಾಂತರಾಗಿದ್ದಾರೆ’ ಎಂದು ಹೇಳಿದ್ದಾರೆ. ದೇಶದ ವಿಚಾರದಲ್ಲಿ ರಾಜಕೀಯ ಹಿತಾಸಕ್ತಿಗಳನ್ನು ಬದಿಗಿಡಬೇಕಾದ ವಿರೋಧಪಕ್ಷಗಳು, ವಾಯುಪಡೆಯ ದಾಳಿಯ ನೈಜತೆಯನ್ನು ಪ್ರಶ್ನಿಸುತ್ತಿವೆ. ಪಾಕಿಸ್ತಾನ ಪರ ಕಾರ್ಯಸೂಚಿಯನ್ನು ಚುನಾವಣೆಯಲ್ಲಿ ತರಲು ಅನುವಾಗುತ್ತಿವೆ. ಇದು ಖಂಡನಾರ್ಹವಷ್ಟೇ ಅಲ್ಲ, ಅವರ ರಾಜಕೀಯ ದಾರಿಯ ವಿಪತ್ತು ಕೂಡಾ’ ಎಂದು ನರಸಿಂಹರಾವ್ ಹೇಳಿದ್ದಾರೆ.‌

***

ಪ್ರಧಾನಿಗೆ ದಿಗ್ವಿಜಯ್ ಸವಾಲು

ಪುಲ್ವಾಮಾ ಕುರಿತಾದ ಹೇಳಿಕೆ ಸಂಬಂಧ ತಮ್ಮ ವಿರುದ್ಧ ಪ್ರಕರಣ ದಾಖಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಸವಾಲು ಹಾಕಿದ್ದಾರೆ.

ಪುಲ್ವಾಮಾದಲ್ಲಿ ನಡೆದದ್ದು ದುರ್ಘಟನೆ ಎಂದು ಹೇಳಿದ್ದಕ್ಕೆ ತಮ್ಮನ್ನುರಾಷ್ಟ್ರವಿರೋಧಿ, ಪಾಕಿಸ್ತಾನದ ಬೆಂಬಲಿಗ ಎಂದು ಬಿಜೆಪಿ ಮುಖಂಡರು ಆರೋಪ ಮಾಡಿರುವುದಕ್ಕೆ ದಿಗ್ವಿಜಯ್ ಹೀಗೆ ತಿರುಗೇಟು ನೀಡಿದ್ದಾರೆ.

‘ನಾನು ದೆಹಲಿಯಲ್ಲಿದ್ದುಕೊಂಡೇ ಟ್ವೀಟ್ ಮಾಡಿದ್ದೇನೆ. ಹೇಗಿದ್ದರೂ ದೆಹಲಿಯ ಪೊಲೀಸರು ಕೇಂದ್ರ ಸರ್ಕಾರದ ಅಧೀನಲ್ಲಿದ್ದಾರೆ. ನಿಮಗೆ ಧೈರ್ಯವಿದ್ದರೆ ನನ್ನ ವಿರುದ್ಧ ಪ್ರಕರಣ ದಾಖಲಿಸಿ’ ಎಂದು ಸವಾಲು ಎಸೆದಿದ್ದಾರೆ.

‘ಮೋದಿ ಮತ್ತವರ ಸಚಿವರು ನನ್ನ ವಿರುದ್ಧ ಹಲವು ಆರೋಪಗಳನ್ನು ಹೊರಿಸಿದ್ದಾರೆ. ದೇಶದ್ರೋಹ ಪ್ರಕರಣ ದಾಖಲಿಸುವ ಮಾತನ್ನೂ ಆಡಿದ್ದಾರೆ’ ಎಂದು ದಿಗ್ವಿಜಯ್ ಹೇಳಿದ್ದಾರೆ.

‘ಪುಲ್ವಾಮಾ ಉಗ್ರರ ದಾಳಿಯಲ್ಲಿ ಗುಪ್ತಚರ ವೈಫಲ್ಯವಾಗಿದ್ದು, ಮೋದಿ ಯಾವ ಕ್ರಮ ತೆಗೆದುಕೊಂಡಿದ್ದಾರೆ? ಇದಕ್ಕೆ ಹೊಣೆ ಯಾರು ಎಂದು ಹೇಳುವಿರಾ. ಯಾರನ್ನಾದರೂ ಇದಕ್ಕೆ ಹೊಣೆಗಾರರನ್ನಾಗಿ ಮಾಡುವಿರಾ. ಎನ್‌ಎಸ್‌ಎ, ಐಬಿ ಅಥವಾ ರಾ ಮುಖ್ಯಸ್ಥರಿಂದ ಸ್ಪಷ್ಟನೆ ಕೇಳಿದ್ದೀರಾ?’ ಎಂದು ಮೋದಿ ಅವರಿಗೆ ದಿಗ್ವಿಜಯ್ ಸಿಂಗ್‌ ಅವರು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

***

ವಾಕ್‌ಚತುರರು...

ವಾಯುದಾಳಿಯಿಂದ ಪಾಕಿಸ್ತಾನ ಹೆದರಿದೆ. ಏನೂ ಆಗಿಲ್ಲದಿದ್ದರೆ, ಪಾಕಿಸ್ತಾನ ಏಕೆ ಚಿಂತೆ ಮಾಡುತ್ತಿತ್ತು? ಭಾರತಕ್ಕೆ ನುಗ್ಗಲು ಯತ್ನಿಸಿದ ಅವರ ವಿಮಾನಗಳನ್ನು ಹಿಮ್ಮೆಟ್ಟಿಸಿದ್ದೇವೆ. ಇದು ದೇಶದ ಘನತೆಗೆ ಸಂಬಂಧಿಸಿದ್ದು, ಪ್ರಶ್ನಾರ್ಹವಲ್ಲ. ರಾಷ್ಟ್ರೀಯ ಹಿತಾಸಕ್ತಿ ವಿಷಯಕ್ಕೆ ಬಂದಾಗ ಇಡೀ ದೇಶವೇ ಒಗ್ಗಟ್ಟಾಗಿ ವರ್ತಿಸಿದೆ.

ರಾಜನಾಥ್ ಸಿಂಗ್, ಕೇಂದ್ರ ಗೃಹಸಚಿವ

***
ಭಯೋತ್ಪಾದನೆ ವಿಚಾರ ಇನ್ನು ಕೆಲಸಕ್ಕೆ ಬರುವುದಿಲ್ಲ ಎಂಬುದು ಪಾಕಿಸ್ತಾನಕ್ಕೆ ಮೊದಲ ಬಾರಿ ಅರ್ಥವಾಗಿದೆ. ಈಗ ಅವರು ಉಗ್ರರನ್ನು ಬಂಧಿಸುವ, ಉಗ್ರವಾದ ಹತ್ತಿಕ್ಕುವ ಕೆಲಸಕ್ಕೆ ಕೈಹಾಕಿದ್ದಾರೆ. ನಮ್ಮ ನಾಯಕ ಮೋದಿ ಅವರು ಪ್ರದರ್ಶಿಸಿದ ರಾಜಕೀಯ ಇಚ್ಛಾಶಕ್ತಿಯೇ ಪಾಕಿಸ್ತಾನದ ಈ ನಡೆಗೆ ಕಾರಣ.

ಅಮಿತ್ ಶಾ, ಬಿಜೆಪಿ ಅಧ್ಯಕ್ಷ
***
ನಿರ್ದಿಷ್ಟ ದಾಳಿ, ಓಹೋ ಅದ್ಭುತ!! ನಾವು ಅವರ (ಪಾಕಿಸ್ತಾನ) ವಿಮಾನ ಹೊಡೆದು ಉರುಳಿಸಿದ್ದೇವೆ. ವಿಮಾನ ಹೊಡೆದು ಹಾಕಿದ್ದಕ್ಕೆ ಸಾಕ್ಷ್ಯವೇನು ಎಂದು ಕೇಳಿದರೆ ಅಥವಾ 300 ಜನರು ಸತ್ತಿದ್ದಾರೆ ಎಂದು ಅಮಿತ್‌ ಶಾ ಹೇಳುತ್ತಿರುವುದಕ್ಕೆ ಆಧಾರವೇನು ಎಂದು ಪ್ರಶ್ನಿಸಿದರೆ ನೀವು ದೇಶದ್ರೋಹಿ.

ಫಾರೂಕ್‌ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್‌ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.