ADVERTISEMENT

2022ರ ವೇಳೆಗೆ 75 ಮೈಲುಗಲ್ಲು

​ಪ್ರಜಾವಾಣಿ ವಾರ್ತೆ
Published 28 ಮೇ 2019, 20:00 IST
Last Updated 28 ಮೇ 2019, 20:00 IST
   

ನವದೆಹಲಿ: ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡುವುದು ಮೋದಿ ನೇತೃತ್ವದ ಹೊಸ ಸರ್ಕಾರದ ಆದ್ಯತೆಯಾಗಲಿದೆ. 2022ರೊಳಗೆ ಪ್ರತಿ ಗ್ರಾಮಕ್ಕೂ ಸರ್ವ ಋತು ರಸ್ತೆ ಸಂಪರ್ಕ ಕಲ್ಪಿಸುವುದು, ಬಡವರಿಗಾಗಿ 2 ಕೋಟಿ ಮನೆಗಳ ನಿರ್ಮಾಣ ಮತ್ತು ಸಣ್ಣ ಮತ್ತು ಮಧ್ಯಮ ರೈತರಿಗೆ ಆರ್ಥಿಕ ನೆರವು ಒದಗಿಸಲು ಸರ್ಕಾರ ಯೋಜನೆ ರೂಪಿಸಿದೆ.

‘2022ರ ವೇಳೆಗೆ ಹೊಸ ಭಾರತ ನಿರ್ಮಾಣ’ ಎಂಬುದು ಹೊಸ ಸರ್ಕಾರದ ಮಂತ್ರವೆನಿಸಲಿದೆ. ಮೊದಲ 1000 ದಿನಗಳಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ರೂಪುರೇಷೆಯನ್ನು ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಈಗಾಗಲೇ ಸಿದ್ಧಪಡಿಸಿದೆ. ಜೂನ್‌ 6 ಮತ್ತು 7ರಂದು ರಾಜ್ಯ ಸರ್ಕಾರಗಳ ಪ್ರತಿನಿಧಿಗಳ ಜೊತೆ ನಡೆಯಲಿರುವ ಸಭೆಯಲ್ಲಿ ಈ ಯೋಜನೆಗಳ ಬಗ್ಗೆ ಚರ್ಚಿಸಲು ಸಚಿವಾಲಯ ಸಿದ್ಧತೆ ಮಾಡಿಕೊಂಡಿದೆ.

‘2022ರ ಆಗಸ್ಟ್‌ 15ರಂದು ಭಾರತವು 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದ್ದು, ಅಷ್ಟರೊಳಗೆ ವಿವಿಧ ಕ್ಷೇತ್ರಗಳಲ್ಲಿ 75 ಮೈಲುಗಲ್ಲುಗಳನ್ನು ಸ್ಥಾಪಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಗ್ರಾಮಿಣಾಭಿವೃದ್ಧಿ ಕ್ಷೇತ್ರದಲ್ಲಿ ಈ ಮೂರು ಮೈಲುಗಲ್ಲುಗಳನ್ನು ನಿಗದಿಪಡಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

2018–19ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಸರ್ಕಾರ ₹ 1.12 ಲಕ್ಷ ಕೋಟಿ ಅನುದಾನ ನಿಗದಿ ಮಾಡಿದ್ದರೆ, 2019–20ನೇ ಸಾಲಿಗೆ ಮಂಡಿಸಿದ್ದ ಮಧ್ಯಂತರ ಬಜೆಟ್‌ನಲ್ಲಿ ಈ ಮೊತ್ತವನ್ನು ₹ 1.17 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ.ಗ್ರಾಮೀಣ ಭಾಗದಲ್ಲಿ ದಿನಕ್ಕೆ 130 ರಿಂದ 135 ಕಿ.ಮೀ.ನಷ್ಟು ರಸ್ತೆಗಳನ್ನು ನಿರ್ಮಿಸಲು ಗುರಿ ಇಟ್ಟುಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.