ಶ್ರೀನಗರ: ಅಮರನಾಥ ಯಾತ್ರೆ ಆರಂಭಕ್ಕೆ ಇನ್ನೊಂದು ವಾರ ಬಾಕಿ ಉಳಿದಿದ್ದು, ಭದ್ರತಾ ಪಡೆಗಳು ಉಧಂಪುರ ಜಿಲ್ಲೆಯ ಬಸಂತಗಡ ಪ್ರದೇಶದಲ್ಲಿ ಗುರುವಾರ ಉಗ್ರರ ವಿರುದ್ಧ ’ಆಪರೇಷನ್ ಬಿಹಾಲಿ‘ ಕಾರ್ಯಾಚರಣೆ ನಡೆಸಿತು.
ಸೇನೆ ಮತ್ತು ಜಮ್ಮು–ಕಾಶ್ಮೀರ ಪೊಲೀಸರ ಜಂಟಿ ತಂಡಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಬಸಂತಗಡ ಪ್ರದೇಶದ ಬಿಹಾಲಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆಯುತ್ತಿರುವುದರಿಂದ ’ಆಪರೇಷನ್ ಬಿಹಾಲಿ’ ಎಂದು ಹೆಸರಿಡಲಾಗಿದೆ.
‘ನಾಲ್ವರು ಉಗ್ರರ ತಂಡವೊಂದನ್ನು ಭದ್ರತಾ ಪಡೆ ಸುತ್ತುವರೆದಿದೆ. ಪ್ರತಿಕೂಲ ಹವಾಮಾನವು ಕಾರ್ಯಾಚರಣೆಗೆ ತುಸು ಅಡ್ಡಿಯಾಗಿದೆ’ ಎಂದು ಜಮ್ಮು ವಲಯದ ಐಜಿಪಿ ಭೀಮ್ ಸೇನ್ ಖಚಿತಪಡಿಸಿದ್ದಾರೆ.
ಬಿಹಾಲಿ ಪ್ರದೇಶದ ಮೂಲಕ ಅಮರನಾಥ ಯಾತ್ರಿಕರು ಹಾದು ಹೋಗುತ್ತಾರೆ. ಅರಣ್ಯ, ಗುಡ್ಡಗಳಿಂದ ಆವೃತವಾಗಿರುವ ಈ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಉಗ್ರರ ಚಟುವಟಿಕೆಗಳು ಹೆಚ್ಚಿದ್ದು, ಯಾತ್ರಿಕರ ಸುರಕ್ಷತೆಗೆ ಭದ್ರತಾ ಪಡೆಗಳು ಈ ಬಾರಿ ಹೆಚ್ಚುವರಿ ಕ್ರಮಗಳನ್ನು ಕೈಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.