ವಾಷಿಂಗ್ಟನ್: ‘ದುರಂತಕ್ಕೊಳಗಾದ ವಿಮಾನವು ಹಾರಾಟಕ್ಕೆ ತಾಂತ್ರಿಕವಾಗಿ ಸಂಪೂರ್ಣವಾಗಿ ಸಜ್ಜುಗೊಂಡಿರಲಿಲ್ಲ’ ಎಂದು ಅಮೆರಿಕದ ತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
‘ಪತನಗೊಂಡ ವಿಮಾನವು ಹಾರಾಟ ನಡೆಸುವುದಕ್ಕೆ ತಾಂತ್ರಿಕವಾಗಿ ಸಂಪೂರ್ಣವಾಗಿ ಸಜ್ಜುಗೊಂಡಿತ್ತೇ ಎಂದು ತನಿಖಾಧಿಕಾರಿಗಳು ಪ್ರಶ್ನಿಸಿದರು’ ಎಂದು ವಾಷಿಂಗ್ಟನ್ ಮೂಲದ ವಿಮಾನಯಾನ ಸುರಕ್ಷತಾ ಸಲಹೆಗಾರ ಜಾನ್ ಎಂ. ಕಾಕ್ಸ್ ಹೇಳಿದರು.
‘ಈಗಲೇ ಯಾವುದೇ ನಿರ್ಧಾರಕ್ಕೆ ಬರಲಾಗದು. ಆದರೆ, ಪತನಗೊಂಡ ವಿಮಾನದ ಚಿತ್ರಗಳನ್ನು ಗಮನಿಸಿದಾಗ, ವಿಮಾನದ ರೆಕ್ಕೆಯಂಚಿನಲ್ಲಿರುವ ಕವಾಟದ ವಿನ್ಯಾಸದಲ್ಲಿ ವ್ಯತ್ಯಾಸ ಇದೆಯೇ ಎನ್ನುವುದರ ಕುರಿತು ತನಿಖೆ ನಡೆಯುವ ಅಗತ್ಯ ಇದೆ ಎನಿಸುತ್ತದೆ. ಕವಾಟದ ಸ್ಥಾನ, ರಚನೆಯಲ್ಲಿ ವ್ಯತ್ಯಾಸ ಇದ್ದರೆ, ವಿಮಾನ ಮೇಲೇರಲು ಅಡ್ಡಿಯಾಗುತ್ತದೆ. ಕವಾಟ ಇರುವ ಸ್ಥಾನ ನಿರ್ದಿಷ್ಟ ಸ್ಥಳದಲ್ಲಿದ್ದರೆ ಮಾತ್ರ ಟೇಕಾಫ್ ವೇಳೆ ಕಡಿಮೆ ವೇಗ ಇದ್ದರೂ ವಿಮಾನ ಸುಲಭವಾಗಿ ಮೇಲೇರುತ್ತದೆ’ ಎಂದು ಜಾನ್ ಹೇಳಿದರು.
‘ವಿಮಾನ ಪತನಕ್ಕೆ ಕಾರಣ ಏನು ಎಂದು ಇಷ್ಟು ಬೇಗ ಹೇಳಲಾಗದು. ಮೊದಲ ನೋಟಕ್ಕೆ ಇದು ಅತ್ಯಂತ ಆಶ್ಚರ್ಯಕರ ಸಂಗತಿ’ ಎಂದು ನ್ಯೂಯಾರ್ಕ್ ವಿಶ್ವವಿದ್ಯಾಲಯ ಸೇಫ್ಟಿ ಎಂಜಿನಿಯರಿಂಗ್ ತಜ್ಞ ಜಾನ್ ಮ್ಯಾಕ್‌ಡರ್ಮಿಡ್ ಹೇಳಿದ್ದಾರೆ.
‘ದುರಂತಕ್ಕೊಳಗಾದ ವಿಮಾನವು 200 ಮೀಟರ್ ಅಥವಾ 650 ಅಡಿಗಳಿಂತ ಹೆಚ್ಚು ಮೇಲೇರಿರಲಿಲ್ಲ’ ಎಂದು ಅವರು ಹೇಳಿದ್ದಾರೆ.
ಅಗಲವಾದ ದೇಹ ವಿನ್ಯಾಸ ಹೊಂದಿರುವ ಈ ವಿಮಾನವು ಅವಳಿ ಎಂಜಿನ್ ಹೊಂದಿದೆ. 2009ರಲ್ಲಿ ಡ್ರೀಮ್‌ಲೈನರ್ ಸರಣಿಯ ವಿಮಾನಗಳು ಕಾರ್ಯಾಚರಣೆ ಆರಂಭಿಸಿದ ನಂತರ ನಡೆದಿರುವ ಮೊದಲ ದುರಂತ ಇದಾಗಿದೆ ಎನ್ನುತ್ತದೆ ವಿಮಾನಯಾನ ಸುರಕ್ಷಾ ಜಾಲದ ದತ್ತಾಂಶಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.