ಅಹಮದಾಬಾದ್: ದುರಂತಕ್ಕೆ ಸಾಕ್ಷ್ಯವಾಗಿ ಉಳಿದ ಅವಶೇಷಗಳು, ಸುಟ್ಟ ಸ್ಥಿತಿಯಲ್ಲಿರುವ ಕಟ್ಟಡ, ಮಾತುಗಳಿಗೂ ದಕ್ಕದ ವಿಷಾದ, ಆಪ್ತರನ್ನು ಕಳೆದುಕೊಂಡವರಲ್ಲಿ ಮಡುಗಟ್ಟಿದ ನೋವು...
ಭೀಕರ ವಿಮಾನ ಅಪಘಾತ ಸಂಭವಿಸಿದ ಇಲ್ಲಿನ ಬಿ.ಜೆ.ವೈದ್ಯ ಕಾಲೇಜು ಹಾಸ್ಟೆಲ್ ಸಂಕೀರ್ಣದ ಬಳಿ ಶುಕ್ರವಾರ ಕಂಡುಬಂದ ಸ್ಥಿತಿ ಇದು. ಸೂತಕದ ಛಾಯೆ ಇಡೀ ವಾತಾವರಣವನ್ನು ಆವರಿಸಿದಂತಿತ್ತು.
ವಿಮಾನವು ಕಟ್ಟಡಕ್ಕೆ ಅಪ್ಪಳಿಸಿದಾಗ ಮೃತಪಟ್ಟ ವಿಮಾನದಲ್ಲಿದ್ದ 241 ಮಂದಿ ಮತ್ತು ಕಟ್ಟಡದಲ್ಲಿದ್ದ 24 ಮಂದಿಯನ್ನು ಗುರುತಿಸುವ ಕಾರ್ಯ ಶುಕ್ರವಾರ ಚುರುಕುಗೊಂಡಿತು.
‘ಆರು ಶವಗಳ ಗುರುತು ಪತ್ತೆಯಾ ಗಿದ್ದು, ಶವಗಳನ್ನು ಅವರ ಸಂಬಂಧಿಕರಿಗೆ ಒಪ್ಪಿಸಲಾಯಿತು. ಉಳಿದಂತೆ ಪೂರ್ಣ ಅಥವಾ ಗುರುತಿಸಲಾಗದಷ್ಟು ಕರಕಲಾಗಿ ರುವ ಶವಗಳ ಗುರುತು ಪತ್ತೆ, ಡಿಎನ್‌ಎ ಪರೀಕ್ಷೆ ಪ್ರಕ್ರಿಯೆಗೆ ಕನಿಷ್ಠ 72 ಗಂಟೆ ಬೇಕಾ ಗಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ‘ಅಹಮದಾಬಾದ್‌ನ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಒಟ್ಟು 265 ಶವಗಳನ್ನು ತರಲಾಗಿದೆ’ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಚಿರಾಗ್ ಗೋಸಾಯಿ ತಿಳಿಸಿದರು.
ಸಂಬಂಧಿಕರ ಡಿಎನ್‌ಎ ಮಾದರಿ ಸಂಗ್ರಹಿಸುವ ಕೆಲಸ ನಡೆದಿದೆ. 215 ಮಂದಿ ಮೃತರ ಸಂಬಂಧಿಕರು ಡಿಎನ್‌ಎ ಮಾದರಿಯನ್ನು ನೀಡಲು ಸಂಪರ್ಕಿಸಿದ್ದಾರೆ’ ಎಂದು ವಿವರಿಸಿದರು.
ಸಿಬ್ಬಂದಿ ಮಹಾರಾಷ್ಟ್ರದವರು: ಅಪಘಾತಕ್ಕೀಡಾದ ಬೋಯಿಂಗ್ 787 ಡ್ರೀಮ್‌ಲೈನರ್ (ಎಐ 171) ವಿಮಾನದಲ್ಲಿದ್ದ ಇಬ್ಬರು ಪೈಲಟ್ ಸೇರಿ 10 ಸಿಬ್ಬಂದಿ ಮಹಾರಾಷ್ಟ್ರದವರು.
ಅಧಿಕಾರಿಯೊಬ್ಬರ ಪ್ರಕಾರ, ಕ್ಯಾಪ್ಟನ್ ಸುಮೀತ್ ಪುಷ್ಕರಾಜ್ ಸಭರ್ವಾಲ್ (56) ತಮ್ಮ ವಯೋವೃದ್ಧ
ತಂದೆ–ತಾಯಿ ಜೊತೆಗೆ ಮಹಾರಾಷ್ಟ್ರದ ಜಲವಾಯುವಿಹಾರ ಬಡಾವಣೆಯಲ್ಲಿ ವಾಸವಿದ್ದರು.
ಸಹ ಪೈಲಟ್ ಕ್ಲೈವ್ ಕುಂದರ್ ಅವರು, ಮುಂಬೈನ ಪಶ್ಚಿಮ ಉಪನಗರದ ನಿವಾಸಿ ಎಂದು ಅವರ ಸಾಮಾಜಿಕ ಮಾಧ್ಯಮ ಖಾತೆ ಆಧರಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಕ್ಯಾಬಿನ್ ಸಿಬ್ಬಂದಿ ದೀಪಕ್ ಪಾಠಕ್ ಠಾಣೆ ಜಿಲ್ಲೆಯ ಬದ್ಲಾಪುರದ ನಿವಾಸಿ. ಲಂಡನ್‌ಗೆ ಹೊರಡುವ ಮೊದಲು ತಾಯಿಯ ಜೊತೆಗೆ ಕಡೆಯದಾಗಿ ಮಾತನಾಡಿದ್ದರು. ಅವರು 11 ವರ್ಷಗಳಿಂದ ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅವರ ಸಹೋದರಿ ಮಾಹಿತಿ ಹಂಚಿಕೊಂಡರು.
ಮತ್ತೋರ್ವ ಸಿಬ್ಬಂದಿ ಮೈಥಿಲಿ ಪಾಟೀಲ್ (23) ನವಿ ಮುಂಬೈನ ನಹವಾ ಗ್ರಾಮದ ನಿವಾಸಿ. ಎರಡು ವರ್ಷಗಳ ಹಿಂದೆ ಏರ್ ಇಂಡಿಯಾಕ್ಕೆ ಸೇರಿದ್ದು, ಇವರ ತಂದೆ ಮೋರೇಶ್ವರ್ ಪಾಟೀಲ್ ಅವರು ಒಎನ್‌ಜಿಸಿ ಸಂಸ್ಥೆಯಲ್ಲಿ ಕಾರ್ಮಿಕ ಗುತ್ತಿಗೆದಾರರಾಗಿದ್ದಾರೆ.
‘ವಿಮಾನ ಏರುವ ಮುನ್ನ ತಂದೆಗೆ ಕರೆ ಮಾಡಿದ್ದ ಮೈಥಿಲಿ, ಲಂಡನ್‌ನಲ್ಲಿ ವಿಮಾನ ಇಳಿಯುತ್ತಿದ್ದಂತೆಯೇ
ಮತ್ತೆ ಕರೆ ಮಾಡುವುದಾಗಿ ತಿಳಿಸಿದ್ದಳು. ಅಷ್ಟು ಹೊತ್ತಿ ಗಾಗಲೇ ದುರಂತದಲ್ಲಿ ಮೃತಪಟ್ಟಿದ್ದಾಳೆ’ ಎಂದು ಗ್ರಾಮದ ಮಾಜಿ ಸರಪಂಚ್ ನೋವು ತೋಡಿಕೊಂಡಿದ್ದಾರೆ.
ಮತ್ತೊಬ್ಬ ಸಿಬ್ಬಂದಿ ಅಪರ್ಣಾ ಮಹದಿಕ್ (43) ಇಲ್ಲಿನ ಗೋರೆಗಾಂವ್ ನಿವಾಸಿಯಾಗಿದ್ದು, ಇವರು ಎನ್‌ಸಿಪಿ ನಾಯಕ ಸುನೀಲ್ ತತ್ಕರೆ ಸಂಬಂಧಿ ಎಂದು ಹೇಳಲಾಗಿದೆ. ಉಳಿದಂತೆ ರೋಶ್ನಿ ರಾಜೇಂದ್ರ ಸೊಂಘಾರೆ ಮತ್ತು ಸಾಯಿನಿತಾ ಚಕ್ರವರ್ತಿ ಇಬ್ಬರೂ ದೊಂಬಿವಿಲಿ ನಿವಾಸಿಗಳು.
ಮೃತಪಟ್ಟ ಪ್ರಯಾಣಿಕರಾದ ಮಹಾದೇವ್ ಪವಾರ್ (68) ಪತ್ನಿ ಆಶಾ (60) ಸೋಲಾಪುರ ಜಿಲ್ಲೆಯ ಸಂಗೋಲಾದ ಹತಿಡ್ ಗ್ರಾಮದ ನಿವಾಸಿ. 15 ವರ್ಷದಿಂದ ಗುಜರಾತ್‌ನಲ್ಲಿ ನೆಲಸಿದ್ದು, ಮಗನನ್ನು ಭೇಟಿಯಾಗುವ ಸಂಬಂಧ ಲಂಡನ್‌ಗೆ ಹೊರಟಿದ್ದರು.
ನಾಗಪುರದ ಉದ್ಯಮಿ ಮನೀಶ್ ಕಮ್ದರ್ ಪುತ್ರಿ ಯಶಾ ಕಮ್ದರ್ ಮೋಧಾ, ಈಕೆಯ ಪುತ್ರ ರುದ್ರ, ಅತ್ತೆ ರಕ್ಷಾಬೆನ್ ಅವರು ದುರಂತದಲ್ಲಿ ಅಸುನೀಗಿದ್ದಾರೆ.
ದಿನದ ಬೆಳವಣಿಗೆ...
l ದುರಂತಕ್ಕೆ ಕಾರಣ ಏನು ಎಂಬುದನ್ನು ತಿಳಿಯುವಲ್ಲಿ ಪ್ರಮುಖ ಪಾತ್ರ ವಹಿಸುವ ವಿಮಾನದ ಬ್ಲ್ಯಾಕ್ ಬಾಕ್ಸ್ ಶುಕ್ರವಾರ ದುರಂತ ನಡೆದ ಸ್ಥಳದಲ್ಲಿ ಪತ್ತೆಯಾಗಿದೆ
l ಏರ್ ಇಂಡಿಯಾ ಮಾಲೀಕತ್ವವನ್ನು ಟಾಟಾ ಸಮೂಹ ಹೊಂದಿದೆ. ಪ್ರಸ್ತುತ ಏರ್ ಇಂಡಿಯಾದಲ್ಲಿ 26 ಬೋಯಿಂಗ್ 787–8ಎಸ್ 7 ಬೋಯಿಂಗ್ 787–9ಎಸ್ ವಿಮಾನಗಳಿವೆ
l ಅಪಘಾತದ ತನಿಖೆಗಾಗಿ ಬ್ರಿಟನ್ ಮತ್ತು ಅಮೆರಿಕದಿಂದ ತಜ್ಞರ ತಂಡವು ಆಗಮಿಸಿದೆ ಎಂದು ಏರ್ ಇಂಡಿಯಾ ಅಧ್ಯಕ್ಷ ಎನ್.ಚಂದ್ರಶೇಖರನ್ ತಿಳಿಸಿದ್ದಾರೆ
l ಅಪಘಾತದ ಕಾರಣಗಳ ‘ಸತ್ಯ ಬಯಲಿಗೆಳೆಯಲು’ ಪಾರದರ್ಶಕವಾಗಿ ತನಿಖೆ ನಡೆಸಬೇಕು ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ಆಗ್ರಹಪಡಿಸಿದೆ. ವಕ್ತಾರ ಕುನಾಲ್ ಘೋಷ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ
ಉನ್ನತ ಮಟ್ಟದ ಸಭೆ
ವಿಮಾನ ಅಪಘಾತ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಬಳಿಕ ಹಿರಿಯ ಅಧಿಕಾರಿಗಳ ಜೊತೆಗೆ ಪರಿಶೀಲನಾ ಸಭೆ ನಡೆಸಿ ಮಾಹಿತಿ ಪಡೆದರು. ವಿಮಾನ ನಿಲ್ದಾಣದ ಸಮೀಪವಿರುವ ಗುಜ್‌ಸೈಲ್ ಕಟ್ಟಡ ದಲ್ಲಿ ನಡೆದ ಉನ್ನತಾಧಿಕಾರಿಗಳ ಸಭೆಯಲ್ಲಿ ಗುಜರಾತ್ ಸಿ.ಎಂ ಭೂಪೇಂದ್ರ ಪಟೇಲ್ ಗುಜರಾತ್ ಬಿಜೆಪಿ ಘಟಕದ ಅಧ್ಯಕ್ಷ ಸಿ.ಆರ್.ಪಾಟೀಲ್ ನಾಗರಿಕ ವಿಮಾನ ಯಾನ ಸಚಿವ ರಾಮಮೋಹನ್ ನಾಯ್ಡು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.