ADVERTISEMENT

ವಿಮಾನ ದುರಂತದ ನೋವಿನ ಕತೆಗಳು

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 19:04 IST
Last Updated 13 ಜೂನ್ 2025, 19:04 IST
 ದುರಂತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಸ್ಥರು ಅಹಮದಾಬಾದ್‌ ಆಸ್ಪತ್ರೆ ಎದುರು ಕಣ್ಣೀರು ಹಾಕಿದರು –ಪಿಟಿಐ ಚಿತ್ರ
 ದುರಂತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಸ್ಥರು ಅಹಮದಾಬಾದ್‌ ಆಸ್ಪತ್ರೆ ಎದುರು ಕಣ್ಣೀರು ಹಾಕಿದರು –ಪಿಟಿಐ ಚಿತ್ರ   

ಕುಟುಂಬಕ್ಕೆ ಆಸರೆಯಾಗಿದ್ದ ಮಗಳು

ಇಂಫಾಲ್/ ಕಂಗ್ಪೋಕ್ಪಿ: ವಿಮಾನ ದುರಂತದಲ್ಲಿ ಮೃತಪಟ್ಟ ಮಣಿಪುರ ಮೂಲದ ವಿಮಾನದ ಸಿಬ್ಬಂದಿ ಲಾಮ್‌ನುಂಥೆಮ್ ಸಿಂಗ್ಸೋನ್‌ (26) ಅವರ ದುಡಿಮೆಯಿಂದಲೇ ಅವರ ಕುಟುಂಬದ ಜೀವನ ಸಾಗುತ್ತಿತ್ತು. ರಾಜ್ಯದಲ್ಲಿನ ಜನಾಂಗೀಯ ಹಿಂಸಾಚಾರದಿಂದ ನಲುಗಿದ್ದ ಕುಟುಂಬಕ್ಕೆ ಇವರೊಬ್ಬರೇ ಆಸರೆಯಾಗಿದ್ದರು.

‘ಜೂನ್‌ 11ರಂದು ಅವರ ತಾಯಿಗೆ ಕರೆ ಮಾಡಿ, ‘ಗುರುವಾರ ಲಂಡನ್‌ಗೆ ಹೋಗುವುದಿದೆ. ಹೀಗಾಗಿ ಇಂದು (ಬುಧವಾರ ರಾತ್ರಿ) ಆದಷ್ಟು ಬೇಗ ಮಲಗಬೇಕು’ ಎಂದಿದ್ದರು. ಅದೇ ತಾಯಿ–ಮಗಳ ಕೊನೆಯ ಮಾತುಕತೆ’ ಎಂದು ಸಂಬಂಧಿಯೊಬ್ಬರು ತಿಳಿಸಿದರು.

ADVERTISEMENT

ಮಣಿಪುರ ಹಿಂಸಾಚಾರ ಸಂದರ್ಭದಲ್ಲಿ ಕುಕಿ ಸಮುದಾಯಕ್ಕೆ ಸೇರಿದ ಇವರ ಕುಟುಂಬವು ಇಂಫಾಲ್‌ನಿಂದ  ಓಡಿ ಬಂದಿತ್ತು. ಸದ್ಯ ಕುಟುಂಬವು ಕಂಗ್ಪೋಕ್ಪಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದೆ. ತಂದೆಯನ್ನು ಕಳೆದುಕೊಂಡಿರುವ ಸಿಂಗ್ಸೋನ್‌, ತಾಯಿ ಮತ್ತು ಮೂವರು ಸಹೋದರರ ಜವಾಬ್ದಾರಿಯನ್ನು ಹೊತ್ತಿದ್ದರು. ಹಿರಿಯ ಸಹೋದರ ದೀರ್ಘಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ, ಉಳಿದ ಇಬ್ಬರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

‘ಸಿಂಗ್ಸೋನ್‌ ಅವರ ಸಾವಿನ ಸುದ್ದಿ ತಿಳಿದು ಅವರ ತಾಯಿ ಆಘಾತಕ್ಕೊಳಗಾಗಿದ್ದಾರೆ. ಊಟವನ್ನೇ ತ್ಯಜಿಸಿದ್ದಾರೆ’ ಎಂದು ಮನೆಯಲ್ಲಿನ ಸೂತಕದ ಛಾಯೆಯನ್ನು ವಿವರಿಸಿದರು.

ಸಿಂಗ್ಸೋನ್‌ ಅವರ ಮೃತದೇಹವನ್ನು ಇನ್ನಷ್ಟೇ ಪತ್ತೆ ಮಾಡಬೇಕಿದೆ ಎಂದು ಏರ್‌ ಇಂಡಿಯಾ ಸಿಬ್ಬಂದಿ ತಿಳಿಸಿದ್ದಾರೆ ಎಂದು ಅವರು ಹೇಳಿದರು.

 ದುರಂತದಲ್ಲಿ ಮೃತಪಟ್ಟ ಸಂತ್ರಸ್ತರ ಪತ್ತೆಗಾಗಿ ಕುಟುಂಬಸ್ಥರು ಡಿಎನ್‌ಎ ಮಾದರಿಯನ್ನು ನೀಡಿದರು –ಪಿಟಿಐ ಚಿತ್ರ

ವಿಮಾನದೊಂದಿಗೆ ಕನಸುಗಳೂ ಭಗ್ನ

ಪುಣೆ: ವಿಮಾನದ ಮತ್ತೊಬ್ಬರು ಸಿಬ್ಬಂದಿ ಇರ್ಫಾನ್‌ ಸಮೀರ್‌ ಶೇಖ್‌ (22) ಅವರು ಎರಡು ವರ್ಷಗಳ ಹಿಂದೆ ದೊಡ್ಡ ಕನಸಿನೊಂದಿಗೆ ವಿಮಾನಯಾನ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು. ಅವರ ಕನಸೆಲ್ಲಾ ಈಗ ನುಚ್ಚುನೂರಾಗಿದೆ ಎಂದು ಸಂಬಂಧಿಯೊಬ್ಬರು ಕಣ್ಣೀರು ಹಾಕಿದರು. ಇರ್ಫಾನ್‌ ಬಕ್ರೀದ್‌ ದಿನ ಮನೆಗೆ ಬಂದು ಕುಟುಂಬಸ್ಥರೊಂದಿಗೆ ಹಬ್ಬ ಆಚರಿಸಿದ್ದರು ಎಂದು ತಿಳಿಸಿದರು. ‘ವಿಮಾನ ಅಪಘಾತಕ್ಕೀಡಾದ ಸುದ್ದಿ ತಿಳಿಯುತ್ತಿದ್ದಂತೆಯೇ ಇರ್ಫಾನ್‌ ಅವರ ತಾಯಿ ಆಘಾತಕ್ಕೆ ಒಳಗಾಗಿದ್ದಾರೆ. ತಾಯಿ ತಂದೆ ಮತ್ತು ಸಹೋದರ ಕೂಡಲೇ ಅಹಮದಾಬಾದ್‌ಗೆ ಪ್ರಯಾಣಿಸಿದ್ದಾರೆ. ಅಧಿಕಾರಿಗಳು ಡಿಎನ್‌ಎ ಪರೀಕ್ಷೆಗಾಗಿ ಇರ್ಫಾನ್‌ ಅವರ ಅಣ್ಣನ ಡಿಎನ್‌ಎ ಮಾದರಿಯನ್ನು  ಪಡೆದಿದ್ದಾರೆ’ ಎಂದು ಚಿಕ್ಕಪ್ಪ ಫಿರೋಜ್‌ ಶೇಖ್‌ ಹೇಳಿದರು.

ನವವಿವಾಹಿತೆಯ ಬಯಕೆ ಭಸ್ಮ

ಅಹಮದಾಬಾದ್‌ (ಪಿಟಿಐ): ಬ್ರಿಟನ್‌ನಲ್ಲಿ ಪತಿಯೊಂದಿಗೆ ಹೊಸ ಜೀವನ ಆರಂಭಿಸಲು ಹೊರಟಿದ್ದ ನವವಿವಾಹಿತೆ ಅಂಕಿತ ಪಟೇಲ್‌ ಅವರ ಕನಸಗಳು ವಿಮಾನದೊಂದಿಗೆ ಭಸ್ಮವಾಗಿವೆ. ಹೌದು ಅಂಕಿತ ಮತ್ತು ವಸಂತ್‌ ಅವರು ಕಳೆದ ಡಿಸೆಂಬರ್‌ 14ರಂದು ವಿವಾಹವಾಗಿದ್ದರು. ಬ್ರಿಟನ್‌ನಲ್ಲಿ ಅಂಗಡಿ ಇಟ್ಟಿರುವ ವಸಂತ್‌  ಮದುವೆಯಾದ 12 ದಿನಕ್ಕೇ ಬ್ರಿಟನ್‌ಗೆ ತೆರಳಿದ್ದರು. ಕಳೆದ ಆರು ತಿಂಗಳಿನಿಂದ ವೀಸಾ ಪ್ರಕ್ರಿಯೆಗಾಗಿ ಕಾಲುಸವೆಸಿದ್ದ ಅಂಕಿತ ಕೊನೆಗೂ ವೀಸಾ ಪಡೆದು ಪತಿಯನ್ನು ಕಾಣುವ ಆಸೆಗಣ್ಣಿನಿಂದ ಗುರುವಾರ ವಿಮಾನ ಏರಿದ್ದರು.  ಅಂಕಿತಾ ಅವರನ್ನು ಕಳುಹಿಸಲು ಕುಟುಂಬಸ್ಥರು ವಿಮಾನ ನಿಲ್ದಾಣದವರೆಗೂ ಬಂದಿದ್ದರು. ‘ಅಂಕಿತಾಳನ್ನು ಕಳುಹಿಸಿ ಸ್ವಲ್ಪ ದೂರ ಬಂದ ತಕ್ಷಣವೇ ದುರಂತದ ಬಗ್ಗೆ ತಿಳಿಯಿತು. ಪಾರ್ಥಿವ ಶರೀರಕ್ಕಾಗಿ ಕಾಯುತ್ತಿದ್ದೇವೆ' ಎಂದು ಅತ್ತಿಗೆ ಗಾಯತ್ರಿ ಪಟೇಲ್‌ ತಿಳಿಸಿದರು.

- ಕುಟುಂಬಸ್ಥರಿಗೆ ಬರಸಿಡಿಲು

ಮುಂಬೈ: ವಿಮಾನದ ಪೈಲಟ್‌ಗಳಲ್ಲಿ ಒಬ್ಬರಾದ ಕ್ಯಾಪ್ಟನ್‌ ಸುಮೀತ್‌ ಸಭರ್ವಾಲ್ ಅವರು ಒಳ್ಳೆಯ ವ್ಯಕ್ತಿಯಾಗಿದ್ದರು ಎಂದು ಕುಟುಂಬದ ಸ್ನೇಹಿತ ವಿಂಗ್‌ ಕಾಮಾಂಡರ್‌ (ನಿವೃತ್ತ) ಸಂಜಯ್‌ ಪೈ ತಿಳಿಸಿದರು. ‘ಸಾವಿನ ಸುದ್ದಿ ತಿಳಿದಾಗಿನಿಂದ ಬರಸಿಡಿಲು ಬಡಿದಂತಾಗಿದೆ. ಸಭರ್ವಾಲ್ ಅವರು ತಂದೆ ಪುಷ್ಕರಾಜ್‌ ಅವರೊಂದಿಗೆ ವಾಸವಿದ್ದರು’ ಎಂದರು. 

ತಾಯಿ ನೋಡಲು ಬಂದಿದ್ದ ಎನ್‌ಆರ್‌ಐ ಕುಟುಂಬ

ಮುಂಬೈ: ಅನಾರೋಗ್ಯಪೀಡಿತ ತಾಯಿಯನ್ನು ನೋಡಲು ಬ್ರಿಟನ್‌ನಿಂದ ಮುಂಬೈಗೆ ಬಂದಿದ್ದ ಕುಟುಂಬವು ವಿಮಾನ ಅಪಘಾತದಲ್ಲಿ ಮೃತಪಟ್ಟಿದೆ. ಭಾರತೀಯ ಮೂಲದ ಜಾವೇದ್‌ ಅಲಿ (37) ಅವರು ಬ್ರಿಟನ್‌ ಮೂಲದ ಮರಿಯಂ ಅಲಿ (35) ಅವರನ್ನು ವಿವಾಹವಾಗಿದ್ದರು. ದಂಪತಿಗೆ ಎಂಟು ವರ್ಷದ ಪುತ್ರ ಮತ್ತು ನಾಲ್ಕು ವರ್ಷದ ಪುತ್ರಿ  ಇದ್ದರು.  ಅನಾರೋಗ್ಯಪೀಡಿತರಾಗಿದ್ದ ಜಾವೇದ್ ಅವರ ತಾಯಿಯನ್ನು ನೋಡಲು ನಾಲ್ವರೂ ಮುಂಬೈಗೆ ಬಂದಿದ್ದರು. ಗೋರೆಗಾಂವ್‌ನಲ್ಲಿ ಒಂದು ವಾರ ಇದ್ದ ಕುಟುಂಬವು ಗುರುವಾರ ನತದೃಷ್ಟ ಏರ್‌ಇಂಡಿಯಾ ವಿಮಾನದಲ್ಲಿ ವಾಪಸ್‌ ಲಂಡನ್‌ಗೆ ಹೊರಟಿತ್ತು. ‘ರಜೆ ಇದ್ದ ಕಾರಣ ಮುಂಬೈಗೆ ಬಂದಿದ್ದರು. ಈಗ ಎಲ್ಲರೂ ಇನ್ನಿಲ್ಲವಾಗಿದ್ದಾರೆ’ ಎಂದು ಅವರ ಕುಟುಂಬ ಸದಸ್ಯರು ನೋವು ತೋಡಿಕೊಂಡರು.

ಎರಡು ದಿನಗಳ ಹಿಂದೆ ವಿವಾಹ

ವಡೋದರ: ದುರಂತದಲ್ಲಿ ಮೃತಪಟ್ಟ ಭವಿಕ್‌ ಮಹೇಶ್ವರಿ (26) ಅವರು ಎರಡು ದಿನಗಳ ಹಿಂದಷ್ಟೇ ಸರಳ ವಿವಾಹವಾಗಿದ್ದರು. ಲಂಡನ್‌ಗೆ ತುರ್ತಾಗಿ ಹೊರಡಬೇಕಿದ್ದ ಕಾರಣ ರಿಜಿಸ್ಟರ್‌ ಮದುವೆ ಆಗಿದ್ದರು. ಲಂಡನ್‌ನಿಂದ ಮತ್ತೆ ವಾಪಸ್‌ ಬಂದಾಗ ಅದ್ದೂರಿ ಕಾರ್ಯಕ್ರಮ ಆಯೋಜಿಸಲು ಪೋಷಕರು ಯೋಜಿಸಿದ್ದರು. ಆದರೆ ವಿಧಿಯ ಲೆಕ್ಕಾಚಾರವೇ ಬೇರೆಯಾಗಿತ್ತು... ‘ಎರಡು ವಾರದ ಹಿಂದೆ ಭವಿಕ್‌ ವಡೋದರಕ್ಕೆ ಬಂದಿದ್ದ. ಇದೇ ಸಮಯದಲ್ಲೇ ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿದೆವು. ಕುಟುಂಬಸ್ಥರ ಸಮ್ಮುಖದಲ್ಲಿ ಸರಳ ವಿವಾಹ ಮಾಡಿದೆವು’ ಎಂದು ಹೇಳುವಾಗ ಭವಿಕ್‌ ಅವರ ತಂದೆ ಅರ್ಜುನ್‌ ಮಹೇಶ್ವರಿ ಅವರ ಕಣ್ಣಾಲಿಗಳು ತುಂಬಿದ್ದವು. ‘ಕೊನೆಯ ಸಲ ಫೋನ್‌ ಮಾಡಿದ್ದ ಮಗ ವಿಮಾನವು ಟೇಕ್‌ ಆಫ್‌ ಆಗಲು ಸಿದ್ಧವಾಗಿದೆ ಎಂದು ಹೇಳಿದ’ ಎಂದು ಅವರು ತಿಳಿಸಿದರು. ‘ಭವಿಕ್‌ ಅವರನ್ನು ಲಂಡನ್‌ಗೆ ಕಳುಹಿಸಲು ಪತ್ನಿ ವಿಮಾನ ನಿಲ್ದಾಣದವರೆಗೂ ಬಂದಿದ್ದರು.  ಅವರು ಮನೆಗೆ ವಾಪಸ್‌ ಹೋಗುವ ದಾರಿ ಮಧ್ಯೆಯೇ ದುರಂತ ಸುದ್ದಿ ಕಿವಿಗೆ ಅಪ್ಪಳಿಸಿತು’ ಎಂದು ಸಂಬಂಧಿಕರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.