ಅಹಮದಾಬಾದ್: ಅಪರಾಧ ಕೃತ್ಯದ ಮರುಸೃಷ್ಟಿ ಸಲುವಾಗಿ ಘಟನಾ ಸ್ಥಳಕ್ಕೆ ಕರೆದೊಯ್ಯಲಾಗಿದ್ದ ಕೊಲೆ ಆರೋಪಿಯನ್ನು ಪೊಲೀಸರೇ ಗುಂಡಿಕ್ಕಿ ಹತ್ಯೆ ಮಾಡಿರುವ ಪ್ರಕರಣ ಅಹಮದಾಬಾದ್‌ನಲ್ಲಿ ವರದಿಯಾಗಿದೆ.
ಆರೋಪಿಯು, ಪೊಲೀಸರಿಂದ ರಿವಾಲ್ವರ್ ಕಸಿದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದ. ಹೀಗಾಗಿ, ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಆತ ಮೃತಪಟ್ಟಿದ್ದಾನೆ. ಘಟನೆ ವೇಳೆ ಒಬ್ಬ ಪೊಲೀಸ್ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 20ರ ರಾತ್ರಿ ವೈಭವ್ ಮನ್ವಾನಿ (25) ಎಂಬವರನ್ನು ಕೊಲೆ ಮಾಡಿ, ಅವರ ಸ್ನೇಹಿತೆ ಮೇಲೆ ತೀವ್ರ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ವಿಪುಲ್ ಅಲಿಯಾಸ್ ವಿಮಲ್ ಅಲಿಯಾಸ್ ನೀಲ್ ಪರ್ಮಾರ್ ಎಂಬಾತನನ್ನು ಅಹಮದಾಬಾದ್ ಅಪರಾಧ ಪತ್ತೆ ವಿಭಾಗವು, ರಾಜ್‌ಕೋಟ್ ಜಿಲ್ಲೆಯ ಕಗ್ದಾಡಿ ಗ್ರಾಮದಲ್ಲಿ ಮಂಗಳವಾರ ಬಂಧಿಸಿತ್ತು.
ವೈಭವ್ ಅವರ ತಲೆ, ಕುತ್ತಿಗೆ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ 12 ಕಡೆ ಇರಿಯಲಾಗಿತ್ತು. ಅವರ ಸ್ನೇಹಿತೆಯ ಕುತ್ತಿಗೆ ಮತ್ತು ಹೊಟ್ಟೆ ಭಾಗಕ್ಕೆ ನಾಲ್ಕು ಸಲ ಇರಿಯಲಾಗಿತ್ತು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ನರ್ಮದಾ ನಾಲೆ ಬಳಿ ವೈಭವ್ ಅವರ ಜನ್ಮದಿನದ ಸಂಭ್ರಮದಲ್ಲಿದ್ದ ಇವರಿಬ್ಬರನ್ನು ದೋಚುವ ಸಲುವಾಗಿ ವಿಪುಲ್ ದಾಳಿ ಮಾಡಿದ್ದ.
ವೈಭವ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಆದರೆ, ಕೂಡಲೇ ಅಲ್ಲಿಂದ ಪರಾರಿಯಾಗಿದ್ದ ಮಹಿಳೆ, ದಾರಿಯಲ್ಲಿ ಹೋಗುತ್ತಿದ್ದವರ ನೆರವು ಪಡೆದು ಪಾರಾಗಿದ್ದರು. ನಂತರ, ಘಟನೆ ಬಗ್ಗೆ ತಮ್ಮ ತಂದೆಗೆ ತಿಳಿಸಿದ್ದರು.
'ಅದಾಲಾಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಅಲ್ಲಿನ ಒಂದು ತಂಡ, ಕೃತ್ಯದ ಮರಸೃಷ್ಟಿ ಸಲುವಾಗಿ ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದಿತ್ತು. ಈ ವೇಳೆ, ಪೊಲೀಸರಿಂದ ರಿವಾಲ್ವರ್ ಕಸಿದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ ಆರೋಪಿ, ಪರಾರಿಯಾಗಲು ಯತ್ನಿಸಿದ. ಹೀಗಾಗಿ, ರಕ್ಷಣಾ ಉದ್ದೇಶದಿಂದ ಪೊಲೀಸರೂ ಪ್ರತಿದಾಳಿ ನಡೆಸಬೇಕಾಯಿತು. ಈ ವೇಳೆ ಆರೋಪಿ ಮೃತಪಟ್ಟಿದ್ದಾನೆ' ಎಂದು ಘಟನಾ ಸ್ಥಳಕ್ಕೆ ಧಾವಿಸಿದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸ್ಥಳೀಯ ಅಪರಾಧ ವಿಭಾಗದ ಪೊಲೀಸರ ತಂಡ ಆರೋಪಿಯನ್ನು ಘಟನಾ ಸ್ಥಳಕ್ಕೆ ಸುಮಾರು ಮುಂಜಾನೆ 4.45ರ ಸುಮಾರಿಗೆ ಕರೆದೊಯ್ದಿತ್ತು ಎಂದು ಗಾಂಧೀನಗರ ವಲಯ ಡಿಐಜಿ ವೀರೇಂದ್ರ ಸಿಂಗ್ ಯಾದವ್ ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
'ಘಟನೆ ಮರುಸೃಷ್ಟಿ ಸಂದರ್ಭದಲ್ಲಿ ಆರೋಪಿಯು ಸಬ್ ಇನ್‌ಸ್ಪೆಕ್ಟರ್ ಪಟಾದಿಯಾ ಅವರಿಂದ ರಿವಾಲ್ವರ್ ಕಸಿದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿಯಾಗಲು ಪ್ರಯತ್ನಿಸಿದ. ಈ ವೇಳೆ ಒಂದು ಗುಂಡು ಅಪರಾಧ ವಿಭಾಗದ ರಾಜೇಂದ್ರಸಿನ್ಹ ಅವರಿಗೆ ತಗುಲಿತ್ತು. ಹೀಗಾಗಿ ರಕ್ಷಣೆ ಸಲುವಾಗಿ ಪ್ರತಿದಾಳಿ ನಡೆಸಬೇಕಾಯಿತು. ಆಗ ಆರೋಪಿ ಮೃತಪಟ್ಟಿದ್ದಾನೆ' ಎಂದು ಯಾದವ್ ಹೇಳಿರುವುದಾಗಿ ಉಲ್ಲೇಖಿಸಲಾಗಿದೆ.
ಪ್ರಾಥಮಿಕ ಮಾಹಿತಿ ಆಧಾರದಲ್ಲಿ, 'ಪಾರ್ಮರ್‌ಗೆ ಹಿಂದಿನಿಂದ ಗುಂಡು ತಗುಲಿದೆ. ಆತನ ಬೆನ್ನು ಮತ್ತು ತೊಡೆ ಭಾಗಕ್ಕೆ ಗುಂಡು ಬಿದ್ದಿದೆ. ರಾಜೇಂದ್ರಸಿನ್ಹ ಅವರ ಎಡಗೈಗೆ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ತಿಳಿಸಿದ್ದಾರೆ.
ಹಾಗೆಯೇ, 'ಕೈಗೆ ಕೋಳ ಹಾಕಿದ್ದರೂ, ಆರೋಪಿಯು ಪೊಲೀಸ್ ವಾಹನದತ್ತ ಗುಂಡು ಹಾರಿಸಿದ್ದ. ಇದರಿಂದಾಗಿ, ವಾಹನದ ವಿಂಡ್‌ಶೀಲ್ಡ್ ಮತ್ತು ಬಾಗಿಲಿಗೆ ಹಾನಿಯಾಗಿದೆ. ಖಚಿತವಾಗಿ ಎಷ್ಟು ಗುಂಡುಗಳನ್ನು ಹಾರಿಸಲಾಗಿದೆ ಎಂಬುದು ವಿಧಿವಿಜ್ಞಾನ ಪರೀಕ್ಷೆ ನಂತರವಷ್ಟೇ ಗೊತ್ತಾಗಲಿದೆ' ಎಂದು ಯಾದವ್ ವಿವರಿಸಿದ್ದಾರೆ ಎಂಬುದಾಗಿಯೂ ವರದಿಯಾಗಿದೆ.
ಏತನ್ಮಧ್ಯೆ, ವೈಭವ್ ಅವರ ಕುಟುಂಬದವರು ಪೊಲೀಸರ ಕ್ರಮ ತೃಪ್ತಿ ತಂದಿದೆ. ನ್ಯಾಯ ಸಿಕ್ಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.