ನವದೆಹಲಿ: ತಾವು ಪ್ರಯಾಣಿಸುತ್ತಿದ್ದ ತಿರುವನಂತಪುರ–ದೆಹಲಿ ವಿಮಾನದ ಮಾರ್ಗ ಬದಲಾಯಿಸಿ, ಚೆನ್ನೈಗೆ ಕರೆದೊಯ್ಯಲಾಯಿತು. ಈ ಮೂಲಕ ಏರ್ ಇಂಡಿಯಾದಿಂದ ತಮ್ಮ ಹಕ್ಕುಚ್ಯುತಿಯಾಗಿದೆ ಎಂದು ಕಾಂಗ್ರೆಸ್‌ನ ಕೆ.ಸಿ.ವೇಣುಗೋಪಾಲ್ ಸೇರಿ ಐವರು ಸಂಸದರು ಮಂಗಳವಾರ ದೂರಿದ್ದಾರೆ.
ಈ ಕುರಿತು ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ನೋಟಿಸ್ ಸಲ್ಲಿಸಿದ್ದಾರೆ.
ವೇಣುಗೋಪಾಲ್ ಅವರಲ್ಲದೇ, ಕಾಂಗ್ರೆಸ್‌ನ ಕೆ.ಸುರೇಶ್, ಅಡೂರ್ ಪ್ರಕಾಶ್, ರಾಬರ್ಟ್ ಬ್ರೂಸ್ ಹಾಗೂ ಸಿಪಿಎಂನ ಕೆ.ರಾಧಾಕೃಷ್ಣನ್ ಅವರು ಆಗಸ್ಟ್ 10ರಂದು ಏರ್ ಇಂಡಿಯಾ ವಿಮಾನದಲ್ಲಿ (ಎಐ 2455) ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ವಿಮಾನದ ಮಾರ್ಗ ಬದಲಿಸಿದ್ದರ ಕುರಿತು ಈ ಸಂಸದರು, ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರಿಗೂ ಪತ್ರ ಬರೆದಿದ್ದು, ಘಟನೆ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
‘ಆಗಸ್ಟ್ 10ರಂದು ರಾತ್ರಿ 7.15ಕ್ಕೆ ತಿರುವನಂತಪುರದಿಂದ ವಿಮಾನ ಹೊರಡಬೇಕಿತ್ತು. ಆದರೆ, ರಾತ್ರಿ 8.30ಕ್ಕೆ ಹೊರಟಿತು. ಪ್ರಯಾಣದ ವೇಳೆ ವಿಮಾನವು ಭಾರಿ ಪ್ರಕ್ಷುಬ್ಧತೆಗೆ ಒಳಗಾಯಿತು’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
‘ಊಟ ಸೇರಿ ವಿವಿಧ ಸೌಲಭ್ಯಗಳು ಕೂಡ ವಿಮಾನದಲ್ಲಿ ಇರಲಿಲ್ಲ. ಹಾರಾಟದ ಮಧ್ಯೆ, ತಾಂತ್ರಿಕ ಸಮಸ್ಯೆ ಕಂಡುಬಂದಿರುವ ಕಾರಣ ವಿಮಾನದ ಮಾರ್ಗ ಬದಲಿಸಿ, ಚೆನ್ನೈಗೆ ಒಯ್ಯಲಾಗುವುದು ಎಂಬುದಾಗಿ ಪೈಲಟ್ ಘೋಷಿಸಿದ್ದರು’ ಎಂದೂ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.