ADVERTISEMENT

ಕೇರಳ: ಸೆಪ್ಟೆಂಬರ್‌ ಅಂತ್ಯದೊಳಗೆ ಒಂದು ಡೋಸ್‌ ಲಸಿಕೆ ನೀಡುವ ಗುರಿ

ಕೋವಿಡ್‌ ಪ್ರಕರಣಗಳಲ್ಲಿ ಹೆಚ್ಚಳ, 3ನೇ ಅಲೆ ಭೀತಿ

ಪಿಟಿಐ
Published 24 ಆಗಸ್ಟ್ 2021, 11:42 IST
Last Updated 24 ಆಗಸ್ಟ್ 2021, 11:42 IST
ವೀಣಾ ಜಾರ್ಜ್‌
ವೀಣಾ ಜಾರ್ಜ್‌   

ತಿರುವನಂತಪುರ: ಕೇರಳ ರಾಜ್ಯ ಸರ್ಕಾರ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಸೆಪ್ಟೆಂಬರ್‌ ಅಂತ್ಯದ ವೇಳೆಗೆ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ನೀಡುವ ಗುರಿ ಹೊಂದಿದೆ.

ಈ ಗುರಿ ಸಾಧನೆಗಾಗಿ ಯೋಜನೆ ರೂಪಿಸುವಂತೆ ಎಲ್ಲ ಜಿಲ್ಲಾಡಳಿತಗಳಿಗೆ ನಿರ್ದೇಶನವನ್ನೂ ನೀಡಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಪೋಸ್ಟ್‌ ಮಾಡಿದ್ದಾರೆ.

ರಾಜ್ಯದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಕಾರ್ಯಕ್ರಮಕ್ಕೆ ವೇಗ ನೀಡುವ ಸಂಬಂಧ ಚರ್ಚಿಸಲು ಇತ್ತೀಚೆಗೆ ನಡೆದ ಆರೋಗ್ಯ ಇಲಾಖೆ ಅಧಿಕಾರಿಗಳ ತುರ್ತು ಸಭೆಯಲ್ಲಿ ಈ ನಿರ್ದೇಶನ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

ADVERTISEMENT

‘ರಾಜ್ಯಕ್ಕೆ 1.11 ಕೋಟಿ ಡೋಸ್ ಲಸಿಕೆ ಪೂರೈಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ’ ಎಂದು ಹೇಳಿದ್ದಾರೆ.

‘ಓಣಂ ಹಬ್ಬದ ನಂತರ ಕೋವಿಡ್‌ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬರುವ ಸಾಧ್ಯತೆ ಇದೆ. ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ಎಲ್ಲ ಆಸ್ಪತ್ರೆಗಳು ಸಜ್ಜಾಗಿರಬೇಕು ಎಂಬ ನಿರ್ದೇಶನವನ್ನು ಸಹ ನೀಡಲಾಗಿದೆ’ ಎಂದು ಹೇಳಿದ್ದಾರೆ.

‘ಕೋವಿಡ್‌ನ ಮೂರನೇ ಅಲೆಯ ಆತಂಕವೂ ಇದೆ. ಹೀಗಾಗಿ, ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಸೌಲಭ್ಯ ಹೊಂದಿದ ಹಾಸಿಗೆಗಳು, ಐಸಿಯು ಹಾಗೂ ವೆಂಟೆಲೇಟರ್‌ ವ್ಯವಸ್ಥೆಗೆ ಸಹ ಕ್ರಮ ಕೈಗೊಳ್ಳಲಾಗಿದೆ’ ಎಂದಿದ್ದಾರೆ.

‘ಮೂರನೇ ಅಲೆ ಸಂದರ್ಭದಲ್ಲಿ ಮಕ್ಕಳೇ ಹೆಚ್ಚು ಬಾಧಿತರಾಗುವರು ಎಂದು ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ಮಕ್ಕಳಿಗಾಗಿ ಐಸಿಯು ವಾರ್ಡ್‌ಗಳನ್ನು ಸ್ಥಾಪಿಸಲಾಗುವುದು. ಕೋವಿಡೇತರ ಕಾಯಿಲೆಗಳಿಗೆ ಸಹ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.