ನರೇಂದ್ರ ಮೋದಿ
–ಪಿಟಿಐ ಚಿತ್ರ
ನವದೆಹಲಿ: ಭಾರತೀಯ ವಾಯುಪಡೆ ದಿನಾಚರಣೆಯ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಶುಭಾಶಯ ಕೋರಿದ್ದಾರೆ.
‘ವಾಯುಪಡೆ ದಿನದಂದು ಎಲ್ಲಾ ಯೋಧರು, ಮಾಜಿ ಸೈನಿಕರು ಮತ್ತು ಅವರ ಕುಟುಂಬಸ್ಥರಿಗೆ ಹಾರ್ದಿಕ ಶುಭಾಶಯಗಳು. ಭಾರತೀಯ ವಾಯುಪಡೆಯು ಯಾವಾಗಲೂ ಧೈರ್ಯ, ಬದ್ಧತೆ ಮತ್ತು ಶ್ರೇಷ್ಠತೆಯನ್ನು ಪ್ರದರ್ಶಿಸಿದೆ. ನಮ್ಮ ವಾಯುಪಡೆಯು ವಿಪತ್ತುಗಳು ಮತ್ತು ಮಾನವೀಯ ಕಾರ್ಯಾಚರಣೆಗಳ ಸಮಯದಲ್ಲಿ ನಮ್ಮ ಆಕಾಶವನ್ನು ರಕ್ಷಿಸುತ್ತದೆ ಮತ್ತು ರಾಷ್ಟ್ರಕ್ಕೆ ದಣಿವರಿಯದ ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸುತ್ತದೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ನಮ್ಮ ವಾಯುಪಡೆಯು ಧೈರ್ಯವಾಗಿ ಪ್ರತಿಯೊಂದು ಸವಾಲನ್ನು ಎದುರಿಸುವ ಮೂಲಕ ದೇಶವನ್ನು ಹೆಮ್ಮೆಪಡುವಂತೆ ಮಾಡಿದೆ. ಭವಿಷ್ಯದ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಸಾಧಿಸಲಿ ಎಂದು ನಾನು ಭಾರತೀಯ ವಾಯುಪಡೆಗೆ ನನ್ನ ಶುಭಾಶಯಗಳನ್ನು ಕೋರುತ್ತೇನೆ’ ಎಂದು ಮುರ್ಮು ತಿಳಿಸಿದ್ದಾರೆ.
‘ವಾಯುಪಡೆಯ ದಿನದಂದು ಎಲ್ಲಾ ಧೈರ್ಯಶಾಲಿ ಯೋಧರು ಮತ್ತು ಅವರ ಕುಟುಂಬಸ್ಥರಿಗೆ ಶುಭಾಶಯಗಳು. ಭಾರತೀಯ ವಾಯುಪಡೆಯು ಶೌರ್ಯ, ಶಿಸ್ತು ಮತ್ತು ನಿಖರತೆಯನ್ನು ಪ್ರತಿನಿಧಿಸುತ್ತದೆ. ಅತ್ಯಂತ ಸವಾಲಿನ ಸಂದರ್ಭಗಳಲ್ಲಿ ದೇಶದ ಆಕಾಶವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಯೋಧರ ಪಾತ್ರ ತುಂಬಾ ಶ್ಲಾಘನೀಯ. ಅವರ ಬದ್ಧತೆ, ವೃತ್ತಿಪರತೆ ಮತ್ತು ಅದಮ್ಯ ಮನೋಭಾವವು ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಪಡುವಂತೆ ಮಾಡುತ್ತದೆ’ ಎಂದು ಮೋದಿ ಪ್ರತಿಪಾದಿಸಿದ್ದಾರೆ.
‘ಭಾರತೀಯ ವಾಯುಪಡೆಯ ದಿನದಂದು ನಮ್ಮ ಆಕಾಶದ ರಕ್ಷಕರಿಗೆ ಆತ್ಮೀಯ ಶುಭಾಶಯಗಳನ್ನು ಸಲ್ಲಿಸುತ್ತೇನೆ. ವಾಯುಪಡೆಯ ಹೆಸರೇ ಭಾರತೀಯರ ಹೃದಯದಲ್ಲಿ ಅಪಾರ ಹೆಮ್ಮೆಯನ್ನು ಹುಟ್ಟುಹಾಕುತ್ತದೆ. ರಾಷ್ಟ್ರೀಯ ಭದ್ರತೆಯ ಭಾರವನ್ನು ಹೊರುವುದಾಗಲಿ ಅಥವಾ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಜೀವಗಳನ್ನು ರಕ್ಷಿಸುವುದಾಗಲಿ, ಭಾರತೀಯ ವಾಯುಪಡೆಯು ಧೈರ್ಯ ಮತ್ತು ಅಚಲ ದೇಶಭಕ್ತಿಯಿಂದ ಎದ್ದು ನಿಲ್ಲುತ್ತದೆ. ಈ ದಿನದಂದು ರಾಷ್ಟ್ರಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿದ ಪಡೆಯ ಹುತಾತ್ಮರಿಗೆ ನಾನು ಗೌರವ ಸಲ್ಲಿಸುತ್ತೇನೆ’ ಎಂದು ಗೃಹ ಸಚಿವ ಅಮಿತ್ ಶಾ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.