ನವದೆಹಲಿ: ವಿಮಾನಗಳ ಸುರಕ್ಷತೆ ವಿಚಾರವಾಗಿ ಜುಲೈನಲ್ಲಿ ಏರ್ ಇಂಡಿಯಾ ಸಂಸ್ಥೆಯು 51 ಲೋಪಗಳನ್ನು ಎಸಗಿರುವುದು ಕಂಡುಬಂದಿದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಹೇಳಿದೆ.
ಕೆಲ ಪೈಲಟ್‌ಗಳಿಗೆ ಅಗತ್ಯ ತರಬೇತಿ ಕೊರತೆ, ಅನುಮೋದನೆಯಿರದ ಸಿಮುಲೇಟರ್‌ಗಳ ಬಳಕೆ, ಗುಣಮಟ್ಟವಿಲ್ಲದ ರೋಸ್ಟರ್ ಸಿಸ್ಟಮ್‌ಗಳ ಬಳಕೆ ಸೇರಿದಂತೆ ವಿವಿಧ ಲೋಪಗಳಿರುವುದು ಜುಲೈಗೆ ಸಂಬಂಧಿಸಿದ ಲೆಕ್ಕಪರಿಶೋಧನೆಯಲ್ಲಿ ಕಂಡುಬಂದಿದೆ ಎಂದು ಡಿಜಿಸಿಎ ಹೇಳಿದೆ.
ಸರ್ಕಾರ ಒದಗಿಸಿರುವ ವರದಿಯಲ್ಲಿನ ಅಂಶಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಕಳೆದ ತಿಂಗಳು ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾದ ವಿಮಾನ ಅವಘಡಕ್ಕೆ ಈ ವಾರ್ಷಿಕ ಲೆಕ್ಕಪರಿಶೋಧನೆ ಸಂಬಂಧವಿಲ್ಲದೇ ಇದ್ದರೂ, ಈ ಅಪಘಾತದ ನಂತರ ಸಂಸ್ಥೆಯನ್ನು ಮತ್ತಷ್ಟು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.
‘ಲೆವೆಲ್–1’ಕ್ಕೆ ಸಂಬಂಧಿಸಿದ ಏಳು ಮಹತ್ವದ ಲೋಪದೋಷಗಳನ್ನು ಜುಲೈ 30ರ ಒಳಗಾಗಿ ಏರ್‌ಇಂಡಿಯಾ ನಿವಾರಿಸಬೇಕಿದೆ. ಇತರ 44 ಲೋಪಗಳನ್ನು ಆಗಸ್ಟ್ 23ರ ಒಳಗಾಗಿ ಸರಿಪಡಿಸಬೇಕಿದೆ ಎಂದು 11 ಪುಟಗಳ ವರದಿಯಲ್ಲಿ ಡಿಜಿಸಿಎ ಹೇಳಿದೆ.
‘ಲೆಕ್ಕಪರಿಶೋಧನೆ ವೇಳೆ ಸಂಸ್ಥೆಯು ಸಂಪೂರ್ಣ ಪಾರದರ್ಶಕತೆಯಿಂದ ನಡೆದುಕೊಂಡಿದೆ. ಸಂಸ್ಥೆ ಕೈಗೊಂಡಿರುವ ಪರಿಹಾರ ಕ್ರಮಗಳನ್ನು ಒಳಗೊಂಡ ಪ್ರತಿಕ್ರಿಯೆ ಡಿಜಿಸಿಎಗೆ ನಿಗದಿತ ಸಮಯದೊಳಗೆ ಸಲ್ಲಿಸಲಾಗುವುದು’ ಎಂದು ಏರ್ ಇಂಡಿಯಾ ತಿಳಿಸಿದ್ದಾಗಿ ರಾಯಿಟರ್ಸ್ ವರದಿ ಮಾಡಿದೆ.
ಟಾಟಾ ಸಮೂಹ ಒಡೆತನದ ಏರ್ ಇಂಡಿಯಾ, 34 ಬೋಯಿಂಗ್ 787, 23 ಬೋಯಿಂಗ್ 777 ವಿಮಾನಗಳಿವೆ ಎಂದು ‘ಫ್ಲೈಟ್‌ರೇಡಾರ್24’ ವೆಬ್‌ಸೈಟ್‌ನಲ್ಲಿ ಮಾಹಿತಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.