ಅಹಮದಾಬಾದ್‌ನ ಭೂಮಿ ಚೌಹಾಣ್
ಅಹಮದಾಬಾದ್: ‘ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು10 ನಿಮಿಷ ವಿಮಾನ ನಿಲ್ದಾಣಕ್ಕೆ ತಡವಾಗಿ ಹೋದ ಕಾರಣ ವಿಮಾನ ತಪ್ಪಿತ್ತು. ಈಗ ಬದುಕುಳಿದಿದ್ದಕ್ಕೆ ದೇವರಿಗೆ ಧನ್ಯವಾದ ಹೇಳುತ್ತೇನೆ’ ಎಂದು ಪತನವಾದ ಏರ್ ಇಂಡಿಯಾ ವಿಮಾನದಲ್ಲಿ ಲಂಡನ್‌ಗೆ ತೆರಳಬೇಕಿದ್ದ ಅಹಮದಾಬಾದ್‌ನ ಭೂಮಿ ಚೌಹಾಣ್ ಹೇಳಿದ್ದಾರೆ.
ಗುರುವಾರ ಮಧ್ಯಾಹ್ನ 1.40ರ ಸುಮಾರಿಗೆ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ಎಐ 171 ವಿಮಾನ ಪತನವಾಗಿ ಅದರಲ್ಲಿದ್ದ 242 ಪ್ರಯಾಣಿಕರಲ್ಲಿ 241 ಜನ ಮೃತಪಟ್ಟಿದ್ದಾರೆ.
ಭೂಮಿ ಅವರು ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ರಜೆಗಾಗಿ ಸ್ವಂತ ಊರು ಅಹಮದಾಬಾದ್‌ಗೆ ಬಂದಿದ್ದರು. ಇದೇ ವಿಮಾನದಲ್ಲಿ ಅವರು ಲಂಡನ್‌ಗೆ ವಾಪಸ್ ತೆರಳಬೇಕಿತ್ತು. ಆದರೆ ದಾರಿ ಮಧ್ಯೆ ಟ್ರಾಫಿಕ್‌ನಲ್ಲಿ ಸಿಲುಕಿ ವಿಮಾನ ನಿಲ್ದಾಣಕ್ಕೆ ಬರುವಷ್ಟರಲ್ಲಿ ತಡವಾಗಿತ್ತು. ಹೀಗಾಗಿ ಅವರು ವಿಮಾನವನ್ನು ತಪ್ಪಿಸಿಕೊಂಡಿದ್ದರು.
‘ವಿಮಾನ ನಿಗದಿತ ಸಮಯಕ್ಕೆ ಹೊರಟಿತ್ತು, ಆದರೆ ನಾನು ಬರುವುದು 10 ನಿಮಿಷ ತಡವಾಗಿತ್ತು, ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಬಳಿ ಕೇಳಿಕೊಂಡಿದ್ದೆ, ಆದರೆ ಅವರು ನನ್ನನ್ನು ಒಳಕ್ಕೆ ಬಿಟ್ಟಿರಲಿಲ್ಲ. ಇದು ನಿಜವಾಗಿಯೂ ಪವಾಡವೇ ಸರಿ. ಮಾತಾಜಿ ಮತ್ತು ಗಣಪತಿ ನನ್ನನ್ನು ಕಾಪಾಡಿದ್ದಾರೆ. ದೇವರಿಗೆ ಧನ್ಯವಾದ ಹೇಳುತ್ತೇನೆ, ದುರಂತದಲ್ಲಿ ಮೃತಪಟ್ಟವರಿಗೆ ನನ್ನ ಸಂತಾಪಗಳು’ ಎಂದು ಪಿಟಿಐ ಜತೆ ಮಾತನಾಡುವಾಗ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.