ADVERTISEMENT

ಏರ್‌ ಇಂಡಿಯಾ | ನೌಕರರಿಗೆ ವೇತನ ರಹಿತ ಕಡ್ಡಾಯ ರಜೆ: ಸಮಿತಿ ರಚನೆ

ಪಿಟಿಐ
Published 26 ಜುಲೈ 2020, 9:45 IST
Last Updated 26 ಜುಲೈ 2020, 9:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ನಷ್ಟದಲ್ಲಿರುವ ಏರ್‌ ಇಂಡಿಯಾ ಸಂಸ್ಥೆಯು ನೌಕರರನ್ನು ಐದು ವರ್ಷಗಳ ಕಾಲ ವೇತನ ರಹಿತ ಕಡ್ಡಾಯ ರಜೆ ಮೇಲೆ ಕಳುಹಿಸಲು ತೀರ್ಮಾನಿಸಿದ್ದು, ಈ ಸಂಬಂಧ ಹೆಚ್ಚುವರಿ ಅಥವಾ ಅನಗತ್ಯ ನೌಕರರನ್ನು ಪಟ್ಟಿ ಮಾಡಲು ಸಮಿತಿಯೊಂದನ್ನು ರಚಿಸಿದೆ.

ಏರ್‌ ಇಂಡಿಯಾದ ಉತ್ತರ ವಲಯದ ಪ್ರಾದೇಶಿಕ ನಿರ್ದೇಶಕ ಪಿ.ಎಸ್‌.ನೇಗಿ ಅವರು ಈ ಕುರಿತು ಆದೇಶ ಹೊರಡಿಸಿದ್ದು, ಅದರಲ್ಲಿ ಉಲ್ಲೇಖಿಸಿರುವಂತೆ ನೌಕರರನ್ನು ಪಟ್ಟಿ ಮಾಡುವ ಸಮಿತಿಯಲ್ಲಿ ಜನರಲ್ ಮ್ಯಾನೇಜರ್ (ಸಿಬ್ಬಂದಿ), ಜನರಲ್ ಮ್ಯಾನೇಜರ್ (ಹಣಕಾಸು) ಮತ್ತು ವಿಭಾಗೀಯ ಮುಖ್ಯಸ್ಥರು ಇರುತ್ತಾರೆ.

ಜುಲೈ 14ರಂದು, ನೌಕರರ ಕಾರ್ಯದಕ್ಷತೆ, ಕಾರ್ಯಕ್ಷಮತೆ, ಸಾಮರ್ಥ್ಯ, ಗುಣಮಟ್ಟ ಮತ್ತಿತರ ಅಂಶಗಳನ್ನು ಪರಾಮರ್ಶಿಸಿ, ಅದರ ಆಧಾರದ ಮೇಲೆ ನೌಕರರನ್ನು ಪಟ್ಟಿ ಮಾಡಿ, ವೇತನ ರಹಿತ ಕಡ್ಡಾಯ ರಜೆ ಮೇಲೆ ಕಳುಹಿಸುವಂತೆ, ವಿವಿಧ ವಿಭಾಗಗಳ ನಿರ್ದೇಶಕರಿಗೆ ಸಂಸ್ಥೆ ಸೂಚಿಸಿತ್ತು. ಈಗ ಆ ಆದೇಶದ ಅನ್ವಯವೇ ಅನಗತ್ಯ ಅಥವಾ ಹೆಚ್ಚುವರಿಯಾಗಿರುವ ನೌಕರರನ್ನು ಗುರುತಿಸಲು ಸಮಿತಿಯನ್ನು ರಚಿಸಲಾಗುತ್ತಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕರು, ಎಲ್ಲ ವಿಭಾಗಗಳಲ್ಲಿರುವ ಸಿಬ್ಬಂದಿಯ ಪಟ್ಟಿಯನ್ನು ಮುಖ್ಯಸ್ಥರೊಂದಿಗೆ ಹಂಚಿಕೊಳ್ಳುವ ಜತೆಗೆ, ಹೆಚ್ಚುವರಿ ಅಥವಾ ಅನಗತ್ಯ ಸಿಬ್ಬಂದಿಯನ್ನು ಗುರುತಿಸುವ ಪ್ರಕ್ರಿಯೆಯಲ್ಲೂ ಪಾಲ್ಗೊಳ್ಳಲಿದ್ದಾರೆ. ಈ ಪ್ರಕ್ರಿಯೆ ನಂತರ ಸಿದ್ಧವಾಗುವ ಪಟ್ಟಿ ಆಗಸ್ಟ್‌ 11ರೊಳಗೆ ಏರ್ ಇಂಡಿಯಾದ ಪ್ರಾದೇಶಿಕ ನಿರ್ದೇಶಕರ ಕಚೇರಿಗೆ ತಲುಪಬೇಕಿದೆ. ಇಲ್ಲಿ ಪರಿಶೀಲನೆಗೆ ಒಳಪಟ್ಟ ನಂತರ ಆ ಪಟ್ಟಿಯನ್ನು ಪ್ರಧಾನ ಕಚೇರಿಗೆ ತಲುಪಿಸಲಾಗುತ್ತದೆ‘ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಏರ್ ಇಂಡಿಯಾ ಸಂಸ್ಥೆಯು ದೇಶದಲ್ಲಿ ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಎಂಬ ನಾಲ್ಕು ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ಇದರಲ್ಲಿ ಉತ್ತರ ವಲಯದ ಪ್ರಾದೇಶಿಕ ಕಚೇರಿಯಿಂದ ಮಾತ್ರ ಇಂಥದ್ದೊಂದು ಆದೇಶ ಹೊರಬಿದ್ದಿದ್ದು, ಉಳಿದ ಕಚೇರಿಗಳ ಮಾಹಿತಿ ಲಭ್ಯವಾಗಿಲ್ಲ.

ಕೊರೊನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ವಿಮಾನ ಸಂಚಾರದ ಮೇಲೆ ಏರ್ ಇಂಡಿಯಾ ಸೇರಿದಂತೆ ಕೆಲವು ವಿಮಾನಯಾನ ಸಂಸ್ಥೆಗಳು ಆರ್ಥಿಕ ನಷ್ಟ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಏರ್‌ ಇಂಡಿಯಾ ಸಂಸ್ಥೆ, ತನ್ನ ನೌಕರರನ್ನು ಐದು ವರ್ಷಗಳ ಕಾಲ ವೇತನ ರಹಿತ ಕಡ್ಡಾಯ ರಜೆ ಮೇಲೆ ಕಳುಹಿಸುವ ನಿರ್ಧಾರ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.