ADVERTISEMENT

ಅಜಿತ್‌ ಪವಾರ್ ಜೊತೆ ಸೇರಿ ಸರ್ಕಾರ ರಚಿಸಿದ್ದರ ಹಿಂದಿನ ಸತ್ಯ ಬಿಚ್ಚಿಟ್ಟ ಫಡಣವೀಸ್‌

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 7:25 IST
Last Updated 8 ಡಿಸೆಂಬರ್ 2019, 7:25 IST
   

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಸರ್ಕಾರ ರಚನೆಯ ಸಂಬಂಧ ಚರ್ಚೆ ನಡೆಸುತ್ತಿರುವಾಗಲೇ ಬಿಜೆಪಿ–ಎನ್‌ಸಿಪಿ ಸರ್ಕಾರ ರಚನೆಯಾಗಿದ್ದು ಹೇಗೆ ಎಂಬುದರ ಬಗ್ಗೆ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಮಾತನಾಡಿದ್ದಾರೆ. ಸರ್ಕಾರ ರಚನೆ ಮಾಡಲು ಪ್ರಸ್ತಾಪ ಇಟ್ಟವರೇ ಅಜಿತ್‌ ಪವಾರ್‌ ಎಂದು ಅವರು ಬಹಿರಂಗಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿರುವ ದೇವೇಂದ್ರ ಫಡಣವೀಸ್‌, ‘ಎನ್‌ಸಿಪಿಯ 54 ಶಾಸಕರು ಬಿಜೆಪಿ ನೇತೃತ್ವದ ಸರ್ಕಾರ ಬೆಂಬಲಿಸುವುದಾಗಿ ಅಜಿತ್‌ ಭರವಸೆ ನೀಡಿದ್ದರು,’ ಎಂದು ಎಂದು ಹೇಳಿದ್ಧಾರೆ.

‘ಅಜಿತ್‌ ಪವಾರ್‌ ಅವರು ನನ್ನನ್ನು ಕೆಲ ಶಾಸಕರೊಂದಿಗೆ ಮಾತನಾಡಿಸಿದ್ದರು. ಅವರೂ ಕೂಡ ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ಭರವಸೆ ನೀಡಿದ್ದರು. ಸರ್ಕಾರ ರಚನೆಯ ವಿಚಾರವನ್ನು ಅಜಿತ್‌ ಪವಾರ್‌ ಅವರು ಶರದ್‌ ಪವಾರ್‌ ಅವರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದ್ದರು,’ ಎಂದು ಅವರು ಬಹಿರಂಗಪಡಿಸಿದ್ದಾರೆ.

ADVERTISEMENT

‘ಸರ್ಕಾರ ರಚನೆಯ ಪ್ರಸ್ತಾಪದೊಂದಿಗೆ ನನ್ನೊಂದಿಗೆ ಮಾತನಾಡಿದ್ದ ಅಜಿತ್‌, ಕಾಂಗ್ರೆಸ್‌ ಜೊತೆ ಹೋಗಲು ಎನ್‌ಸಿಪಿಗೆ ಇಷ್ಟವಿಲ್ಲ. ಮೂರು ಪಕ್ಷಗಳ ಸರ್ಕಾರ ಹೆಚ್ಚು ದಿನ ನಡೆಯುವುದಿಲ್ಲ. ಸ್ಥಿರ ಸರ್ಕಾರಕ್ಕಾಗಿ ಬಿಜೆಪಿ ಜೊತೆ ಹೋಗಬೇಕೆಂದಿದ್ದೇವೆ ಎಂದು ತಿಳಿಸಿದರು. ಅಜಿತ್‌ ಅವರ ಮಾತು ನಂಬಿದ್ದು ನಮಗೆ ತಿರುಗುಬಾಣವಾಗಿದೆ. ಆದರೆ, ತೆರೆಯ ಹಿಂದೆ ನಡೆದಿದ್ದನ್ನು ಸೂಕ್ತ ಸಂದರ್ಭದಲ್ಲಿ ಬಹಿರಂಗಪಡಿಸುತ್ತೇನೆ,’ ಎಂದು ದೇವೇಂದ್ರ ಫಡಣವೀಸ್ ಹೇಳಿದ್ದಾರೆ.

ನೀರಾವರಿ ಹಗರಣದಲ್ಲಿ ಅಜಿತ್‌ ಪವಾರ್‌ ಅವರಿಗೆ ಎಸಿಬಿ ನೀಡಿರುವ ಕ್ಲೀನ್‌ ಚಿಟ್‌ ಹೈಕೊರ್ಟ್‌ನಲ್ಲಿ ನಿಲ್ಲುವುದಿಲ್ಲ ಎಂದೂಇದೇ ವೇಳೆ ಫಡಣವೀಸ್‌ಭವಿಷ್ಯ ನುಡಿದಿದ್ದಾರೆ.

ಅತಂತ್ರ ವಿಧಾನಸಭೆ ಸೃಷ್ಟಿಯಾಗಿದ್ದ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಶೇನೆ ಮೈತ್ರಿ ಕೂಟ ಸರ್ಕಾರ ರಚಿಸುವಲ್ಲಿ ವಿಫಲವಾಗಿದ್ದವು. ನಂತರದಲ್ಲಿ ಶಿವಸೇನೆಯು ಎನ್‌ಸಿಪಿ, ಕಾಂಗ್ರೆಸ್‌ ಜೊತೆ ಸೇರಿ ಸರ್ಕಾರ ಮಾಡುವ ತಯಾರಿಯಲ್ಲಿರುವಾಗಲೇ, ಎನ್‌ಸಿಪಿಯ ಅಜಿತ್‌ ಪವಾರ್‌ ಅವರು ಬಿಜೆಪಿ ಜೊತೆ ಸೇರಿ ದೇವೇಂದ್ರ ಫಡಣವೀಸ್‌ ನೇತೃತ್ವದಲ್ಲಿ ನ.23ರಂದು ಬೆಳಗ್ಗೆ ತರಾತುರಿಯಲ್ಲಿ ಸರ್ಕಾರ ರಚನೆ ಮಾಡಿದ್ದರು. ಆದರೆ, 80 ಗಂಟೆಗಳಲ್ಲೇ ಸರ್ಕಾರ ಉರುಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.