
ಬಾರಾಮತಿ: ಬುಧವಾರ ವಿಮಾನ ಪತನದ ದುರಂತದಲ್ಲಿ ಮೃತಪಟ್ಟ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ (66) ಅವರ ಅಂತ್ಯಕ್ರಿಯೆ ಗುರುವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ತವರು ನೆಲ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆಯಿತು. ಅಪಾರ ಸಂಖ್ಯೆಯ ಜನರು ಅಂತಿಮ ದರ್ಶನ ಪಡೆದು, ‘ಅಜಿತ್ ದಾದಾ’ಗೆ ಕಂಬನಿಯ ವಿದಾಯ ಕೋರಿದರು.
ಅಜಿತ್ ಪವಾರ್ ಅವರ ಪಾರ್ಥಿವ ಶರೀರವನ್ನು ಬುಧವಾರ ರಾತ್ರಿ ಬಾರಾಮತಿಯ ಪುಣ್ಯಶ್ಲೋಕ ಅಹಲ್ಯಾದೇವಿ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಗುರುವಾರ ಬೆಳಿಗ್ಗೆ ಅಲ್ಲಿಂದ ಸ್ವಗ್ರಾಮ ಕಾಟೇವಾಡಿಗೆ ತರಲಾಯಿತು. ಅಲ್ಲಿಂದ ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನಕ್ಕೆ ತಂದು ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ಅಂತ್ಯಕ್ರಿಯೆಯ ವಿಧಿಗಳು ನಡೆದವು. ಅಜಿತ್ ಪವಾರ್ ಪುತ್ರರಾದ ಪಾರ್ಥ್ ಮತ್ತು ಜಯ್ ಪವಾರ್, ರಾಜ್ಯಸಭಾ ಸದಸ್ಯೆಯೂ ಆಗಿರುವ ಪತ್ನಿ ಸುನೀತಾ, ಅವರ ಕುಟುಂಬ ಸದಸ್ಯರು ಭಾಗವಹಿಸಿದ್ದರು. ಅಜಿತ್ ಅವರ ಸಹೋದರಿ, ಸಂಸದೆ ಸುಪ್ರಿಯಾ ಸುಳೆ (ಎನ್‌ಸಿಪಿ ಶರದ್ ಪವಾರ್ ಬಣ) ಸುನೀತಾ ಪವಾರ್ ಅವರ ಜತೆಗೇ ಇದ್ದು, ಅವರನ್ನು ಸಂತೈಸಿದರು. ‘ಅಜಿತ್ ದಾದಾ ಅಮರ್ ರಹೇ’ ಎಂಬ ಘೋಷಣೆ ಪ್ರತಿಧ್ವನಿಸಿತು.
ಕಾಟೇವಾಡಿಯಲ್ಲಿರುವ ಅಜಿತ್ ಪವಾರ್ ನಿವಾಸಕ್ಕೆ ಭೇಟಿ ನೀಡಿದ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅಂತಿಮ ನಮನ ಸಲ್ಲಿಸಿದರು. ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ, ಮುರುಳೀಧರ್ ಮೊಹೊಲ್, ಅಜಿತ್ ಪವಾರ್ ಅವರ ದೊಡ್ಡಪ್ಪ, ಕೇಂದ್ರದ ಮಾಜಿ ಸಚಿವ ಶರದ್ ಪವಾರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತಿತರರು ಬಾರಾಮತಿಯಲ್ಲಿ ಅಂತಿಮ ದರ್ಶನ ಪಡೆದರು.
ಎನ್‌ಸಿಪಿಯ ಕಾರ್ಯಾಧ್ಯಕ್ಷ, ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್, ಶರದ್ ಪವಾರ್ ಅವರ ಸಹೋದರ ಪ್ರತಾಪ್‌ರಾವ್ ಪವಾರ್, ಅಜಿತ್ ಪವಾರ್ ಅವರ ಕಿರಿಯ ಸಹೋದರ ಶ್ರೀನಿವಾಸ್ ಪವಾರ್, ಅಭಿಜಿತ್ ಪವಾರ್, ಸಹೋದರಿಯರು, ಕುಟುಂಬ ಸದಸ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಮಾಜಿ ಮುಖ್ಯಮಂತ್ರಿ ಸುಶೀಲ್‌ಕುಮಾರ್ ಶಿಂದೆ, ಅಶೋಕ್ ಚೌವಾಣ್, ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್, ಮುಖಂಡರಾದ ಮಾಣಿಕ್ಯರಾವ್ ಠಾಕ್ರೆ, ನಟ ರಿತೇಶ್ ದೇಶ್‌ಮುಖ್ ಅಂತಿಮ ನಮನ ಸಲ್ಲಿಸಿದರು.
ಬೆಂಬಲ ಕೋರಿದ ನಾಯ್ಡು: ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ವಿಮಾನ ಅಪಘಾತಕ್ಕೆ ಸಂಬಂಧಿಸಿದ ತನಿಖೆಯನ್ನು ತ್ವರಿತಗೊಳಿಸಲು ಮಹಾರಾಷ್ಟ್ರ ಸರ್ಕಾರದ ಬೆಂಬಲವನ್ನು ಕೋರಿ ಕೇಂದ್ರ ವಿಮಾನಯಾನ ಸಚಿವ ಕೆ. ರಾಮ ಮೋಹನ್ ನಾಯ್ಡು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ಪತ್ರ ಬರೆದಿದ್ದಾರೆ.
ಅಜಿತ್ ಪವಾರ್ ಅವರೊಂದಿಗೆ ವಿಮಾನ ದುರಂತದಲ್ಲಿ ಮೃತಪಟ್ಟ ಫ್ಲೈಟ್ ಅಟೆಂಡೆಂಟ್ ಪಿಂಕಿ ಮಾಲಿ ಅವರ ಅಂತ್ಯಕ್ರಿಯೆ ಮುಂಬೈನಲ್ಲಿ ಮತ್ತು ಕ್ಯಾಪ್ಟನ್ ಶಾಂಭವಿ ಪಾಠಕ್ ಅವರ ಅಂತ್ಯಕ್ರಿಯೆ ನವದೆಹಲಿಯಲ್ಲಿ ನಡೆಯಿತು.
ಪವಾರ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ವಿದೀಪ್ ಜಾಧವ್ ಮತ್ತು ಕ್ಯಾಪ್ಟನ್ ಸುಮಿತ್ ಕಪೂರ್ ಕೂಡ ವಿಮಾನ ದುರಂತದಲ್ಲಿ ಮೃತಪಟ್ಟಿದ್ದರು.
ಕೊಡುಗೆ ನೀಡಿದ ಆಂಬುಲೆನ್ಸ್‌ನಲ್ಲೇ ಕೊನೆಯ ಪಯಣ
ಮುಂಬೈ (ಪಿಟಿಐ): ‘ಬಾರಾಮತಿಗೆ ಹೊಸ ಆಂಬುಲೆನ್ಸ್ ಸಿಗುವಂತೆ ಅಜಿತ್ ಪವಾರ್ ನೋಡಿಕೊಂಡರು. ಆದರೆ ದುರದೃಷ್ಟವಶಾತ್ ಅವರ ಮೃತದೇಹವನ್ನೇ ಅದೇ ಆಂಬುಲೆನ್ಸ್‌ನಲ್ಲಿ ಸಾಗಿಸಬೇಕಾಗಿ ಬಂತು’ ಎಂದು ಬಾರಾಮತಿ ಪುರಸಭೆಗೆ ಸೇರಿದ ಆಂಬುಲೆನ್ಸ್‌ನ ಚಾಲಕ ನಜೀಂ ಕಾಜಿ ನೋವಿನಿಂದ ನುಡಿದರು. ‘ಪುರಸಭೆಗೆ ಸೇರಿದ ಆಂಬುಲೆನ್ಸ್ 10 ವರ್ಷಗಳಷ್ಟು ಹಳೆಯದಾಗಿತ್ತು. ಆರು ತಿಂಗಳ ಹಿಂದೆ ಈ ವಿಷಯ ಅಜಿತ್ ಪವಾರ್ ಅವರ ಗಮನಕ್ಕೆ ಬಂದಿತ್ತು. ತಕ್ಷಣವೇ ಅಧಿಕಾರಿಗಳ ಸಭೆ ಕರೆದಿದ್ದ ಅವರು ಹೊಸ ಆಂಬುಲೆನ್ಸ್‌ಗೆ ವ್ಯವಸ್ಥೆ ಮಾಡಿದ್ದರು. ಆದರೆ ವಿಧಿಯಾಟ ಬೇರೆ ಇತ್ತು. ಇಂದು ಅವರ ಪಾರ್ಥಿವ ಶರೀರವನ್ನು ನಾನು ಇದೇ ವಾಹನದಲ್ಲಿ ಸಾಗಿಸಬೇಕಾಗಿ ಬಂದಿದೆ. ಎಂಥ ದೌರ್ಭಾಗ್ಯ’ ಎಂದು ನಜೀಂ ಭಾವುಕರಾದರು. ಆಂಬುಲೆನ್ಸ್ ಹತ್ತಾಂತರಿಸುವ ಸಂದರ್ಭದಲ್ಲಿ ಅಜಿತ್ ಪವಾರ್ ಅವರು ‘ನಿಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿ’ ಎಂದು ಪುಟ್ಟ ಸಲಹೆ ನೀಡಿದ್ದರು. ಅವರ ಈ ಮಾತನ್ನು ನಾನು ಎಂದಿಗೂ ಮರೆಯುವುದಿಲ್ಲ’ ಎಂದು ಹೇಳಿದರು.
ಸಂಪುಟದಲ್ಲಿ ಸ್ಥಾನ ನೀಡಲು ಆಗ್ರಹ
ಅಜಿತ್ ಪವಾರ್ ಅವರ ದುರ್ಮರಣದ ಬೆನ್ನಲ್ಲೇ ಅವರ ಪತ್ನಿ ರಾಜ್ಯಸಭಾ ಸದಸ್ಯೆ ಸುನಿತಾ ಪವಾರ್ ಅವರಿಗೆ ಮಹಾರಾಷ್ಟ್ರದ ಸಂಪುಟದಲ್ಲಿ ಸ್ಥಾನ ನೀಡುವಂತೆ ಎನ್‌ಸಿಪಿ ಮುಖಂಡರು ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಎರಡು ಬಣಗಳ ವಿಲೀನ ಕುರಿತು ಮಾತುಕತೆಗೆ ವಿರೋಧ ಪಕ್ಷವಾದ ಎನ್‌ಸಿಪಿ (ಎಸ್‌ಪಿ) ಒಲವು ತೋರಿದೆ. ‘ವಿಲೀನಕ್ಕೆ ಸಂಬಂಧಿಸಿದಂತೆ ಪ್ರಯತ್ನಗಳನ್ನು ಮುಂದುವರಿಸಲು ಹಿಂಜರಿಯುವುದಿಲ್ಲ’ ಎಂದು ಎನ್‌ಸಿಪಿ (ಎಸ್‌ಪಿ) ಸ್ಪಷ್ಟಪಡಿಸಿದೆ. ‘ಬಿಜೆಪಿ ನೇತೃತ್ವದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಭಾಗವಾಗಿರುವ ಎನ್‌ಸಿಪಿಯನ್ನು ಸುನಿತಾ ಪವಾರ್ ಮುನ್ನಡೆಸಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ. ಮಹಾರಾಷ್ಟ್ರದ ಜನರ ಆಗ್ರಹವೂ ಇದೇ ಆಗಿದೆ’ ಎಂದು ಎನ್‌ಸಿಪಿ ಮುಖಂಡ ಅಜಿತ್ ಪವಾರ್ ಅವರ ಆಪ್ತ ಸಚಿವ ನರಹರಿ ಜೀರ್ವಾಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.