
ಮುಂಬೈ: ಮಹಾರಾಷ್ಟ್ರದ ಪುಣೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ಅವಘಡದಲ್ಲಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟಿದ್ದಾರೆ. ಲ್ಯಾಂಡಿಂಗ್ ವೇಳೆ ವಿಮಾನ ಪತನಗೊಂಡಿದೆ. ಅವಘಡ ಕುರಿತಂತೆ ಮಾತನಾಡಿರುವ ಪ್ರತ್ಯಕ್ಷದರ್ಶಿಗಳು ಭೀಕರ ದೃಶ್ಯದ ಬಗ್ಗೆ ಹೇಳಿಕೊಂಡಿದ್ದಾರೆ.
‘ವಿಮಾನ ಪತನದ ದೃಶ್ಯವನ್ನು ನಾನು ಕಣ್ಣಾರೆ ಕಂಡೆ. ಅದು ಅತ್ಯಂತ ನೋವಿನ ಸಂಗತಿ. ವಿಮಾನ ಲ್ಯಾಂಡಿಂಗ್ ವೇಳೆ ಪತನವಾಗಿದೆ. ಕೂಡಲೇ ಹಲವು ಸ್ಫೋಟಗಳು ಸಂಭವಿಸಿದವು. ಭಾರೀ ಪ್ರಮಾಣದ ಬೆಂಕಿ ಆವರಿಸಿತ್ತು’ ಎಂದು ಪ್ರತ್ಯಕ್ಷದರ್ಶಿ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. ಕನಿಷ್ಠ ನಾಲ್ಕೈದು ಬಾರಿ ಸ್ಫೋಟದ ಸದ್ದು ಕೇಳಿಸಿತು ಎಂದೂ ಅವರು ಹೇಳಿದ್ದಾರೆ.
ಅಪಘಾತದ ಸ್ಥಳಕ್ಕೆ ಆಗಮಿಸಿದ ನಿಲ್ದಾಣದ ಸಿಬ್ಬಂದಿ, ವಿಮಾನದಿಂದ ಜನರನ್ನು ಹೊರತರಲು ಯತ್ನಿಸಿದರು. ಬೆಂಕಿ ಜ್ವಾಲೆ ಭಾರಿ ಪ್ರಮಾಣದಲ್ಲಿದ್ದರಿಂದ ಏನೂ ಮಾಡಲು ಆಗಲಿಲ್ಲ. ಅಜಿತ್ ಪವಾರ್ ಸೇರಿ ಹಲವರು ವಿಮಾನದಲ್ಲಿದ್ದರು. ಇದು ನಿಜಕ್ಕೂ ಅತ್ಯಂತ ನೋವಿನ ಸಂಗತಿ ಎಂದಿದ್ದಾರೆ.
ಅಜಿತ್ ಪವಾರ್ ಜೊತೆಗೆ ಆಪ್ತ ಕಾರ್ಯದರ್ಶಿ, ವಿಮಾನದ ಸಿಬ್ಬಂದಿ ಸೇರಿ ಐದು ಮಂದಿ ಇದ್ದರು.
ಅಪಘಾತದ ಸ್ಥಳದಲ್ಲಿ ಬೆಂಕಿಯಿಂದ ಭಾರಿ ಹೊಗೆ ಆವರಿಸಿರುವುದು ಕಂಡುಬಂದಿದೆ. ಸುತ್ತಲಿನ ಬಯಲು ಪ್ರದೇಶದಲ್ಲೆಲ್ಲ ಹೊಗೆ ಆವರಿಸಿರುವುದು ವಿಡಿಯೊಗಳಲ್ಲಿ ಕಾಣಬಹುದಾಗಿದೆ.
ಲ್ಯಾಂಡಿಂಗ್ ಯತ್ನದ ವೇಳೆ ವಿಮಾನವು ರನ್‌ವೇಯಿಂದ ಜಾರಿ ಪಕ್ಕಕ್ಕೆ ಸರಿದಿದೆ. ಈ ಸಂದರ್ಭ ಸ್ಫೋಟ ಸಂಭವಿಸಿದೆ. ಜೆಟ್ 45 ವಿಮಾನವನ್ನು ಮುಂಬೈನಿಂದ ಕರೆಸಲಾಗಿತ್ತು ಎಂದು ವಿಮಾನ ನಿಲ್ದಾಣದ ವ್ಯವಸ್ಥಾಪಕ ಶಿವಾಜಿ ತವಾರೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.