ADVERTISEMENT

ವಿಮಾನ ಪತನ | ಅಜಿತ್‌ ಪವಾರ್‌ ದುರ್ಮರಣ: ಇಂದು ಅಂತ್ಯಕ್ರಿಯೆ; 3 ದಿನ ಶೋಕಾಚರಣೆ

ಪಿಟಿಐ
Published 28 ಜನವರಿ 2026, 23:15 IST
Last Updated 28 ಜನವರಿ 2026, 23:15 IST
<div class="paragraphs"><p>ಬಾರಾಮತಿಯಲ್ಲಿ ಪತನಗೊಂಡು, ಸುಟ್ಟು ಕರಕಲಾದ ಬಳಿಕ ಉಳಿದಿರುವ ವಿಮಾನದ ಅವಶೇಷ </p></div>

ಬಾರಾಮತಿಯಲ್ಲಿ ಪತನಗೊಂಡು, ಸುಟ್ಟು ಕರಕಲಾದ ಬಳಿಕ ಉಳಿದಿರುವ ವಿಮಾನದ ಅವಶೇಷ

   

ಪಿಟಿಐ ಚಿತ್ರ

ಪುಣೆ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ, ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್‌ (66) ಮತ್ತು ಇತರ ನಾಲ್ವರು ಪ್ರಯಾಣಿಸುತ್ತಿದ್ದ ಲಘು ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.

ADVERTISEMENT

ದೆಹಲಿ ಮೂಲದ ವಿಎಸ್‌ಆರ್‌ ವೆಂಚರ್ಸ್‌ನ ‘ಲಿಯರ್‌ಜೆಟ್‌–45’ ಅಪಘಾತಕ್ಕೀಡಾದ ವಿಮಾನ. ಸಿಬ್ಬಂದಿ ಸೇರಿದಂತೆ ಒಟ್ಟು ಐವರು ವಿಮಾನದಲ್ಲಿದ್ದರು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಮಾಹಿತಿ ನೀಡಿದೆ.

ದುರಂತದಲ್ಲಿ ಪವಾರ್‌ ಅವರ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್‌ಒ) ವಿದೀಪ್‌ ಜಾಧವ್‌, ವಿಮಾನ ಸಹಾಯಕಿ ಪಿಂಕಿ ಮಾಲಿ, ಪೈಲಟ್‌ ಕ್ಯಾಪ್ಟನ್‌ ಸುಮಿತ್‌ ಕಪೂರ್‌, ಸಹ ಪೈಲಟ್‌ ಕ್ಯಾಪ್ಟನ್‌ ಶಾಂಭವಿ ಪಾಠಕ್‌ ಮೃತಪಟ್ಟಿದ್ದಾರೆ. ಸುಮಿತ್‌ ಅವರು 15,000 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರೆ, ಶಾಂಭವಿ ಅವರು 1,500 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು.

ಚುನಾವಣಾ ಪ್ರಚಾರಕ್ಕೆ ಹೊರಟಿದ್ದರು:

ಮಹಾರಾಷ್ಟ್ರದಲ್ಲಿ ಫೆಬ್ರುವರಿ 5ರಂದು ನಡೆಯಲಿರುವ ಜಿಲ್ಲಾ ಪರಿಷತ್‌ ಚುನಾವಣೆಯ ಪ್ರಚಾರದ ಭಾಗವಾಗಿ, ಕೆಲ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲು ಅಜಿತ್‌ ಪವಾರ್‌ ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ವಿಮಾನ ರಾಡಾರ್‌ ಪ್ರಕಾರ, ವಿಮಾನವು ಬೆಳಿಗ್ಗೆ 8.10ಕ್ಕೆ ಮುಂಬೈನಿಂದ ಹೊರಟಿತ್ತು. 8.50ಕ್ಕೆ ವಿಮಾನ ಪತನಗೊಂಡಿದೆ. ವಿಮಾನದ ಬಹುತೇಕ ಭಾಗ ಸುಟ್ಟು ಕರಕಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪ್ಪಳಿಸಿದ ಕೂಡಲೇ ಸ್ಫೋಟ:

‘ವಿಮಾನವು ಗಾಳಿಯಲ್ಲಿ ಅಸ್ಥಿರವಾಗಿ ಕಾಣಿಸಿಕೊಂಡಿತು. ಅದು ನೆಲಕ್ಕೆ ಅಪ್ಪಳಿಸಿದ ಕೂಡಲೇ ಸ್ಪೋಟಗೊಂಡಿತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. 

‘ವಿಮಾನ ಪತನದ ಬೆನ್ನಲ್ಲೇ ಭಾರಿ ಪ್ರಮಾಣದಲ್ಲಿ ಬೆಂಕಿ, ಹೊಗೆ ಕಾಣಿಸಿಕೊಂಡಿತು. ಈ ವೇಳೆ ಸತತವಾಗಿ ನಾಲ್ಕರಿಂದ ಐದು ಬಾರಿ ಸ್ಫೋಟಗಳೂ ಸಂಭವಿಸಿದವು’ ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.  ‘ಮೃತದೇಹಗಳನ್ನು ಬಾರಾಮತಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಸಂದೀಪ್‌ ಸಿಂಗ್‌ ಗಿಲ್‌ ತಿಳಿಸಿದ್ದಾರೆ.

ಪವಾರ್ ಅವರಿಗೆ ಪತ್ನಿ ಸುನೇತ್ರಾ (ರಾಜ್ಯಸಭೆ ಸದಸ್ಯೆ), ಇಬ್ಬರು ಪುತ್ರರಾದ ಪಾರ್ಥ, ಜಯ್‌ ಇದ್ದಾರೆ. ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್‌ ಅಜಿತ್‌ ಅವರ ದೊಡ್ಡಪ್ಪ.

ಇತ್ತೀಚೆಗೆ ಪುಣೆ ಮತ್ತು ಪಿಂಪ್ರಿ ಚಿಂಚವಾಡದಲ್ಲಿ ನಡೆದ ಮುನ್ಸಿಪಲ್‌ ಕಾರ್ಪೊರೇಷನ್‌ ಚುನಾವಣೆಯಲ್ಲಿ ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ, ಎನ್‌ಸಿಪಿ (ಎಸ್‌ಪಿ) ಜತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು. 

ಮೂರು ದಿನಗಳ ಶೋಕ: 

ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ನಿಧನದ ಪ್ರಯುಕ್ತ ಮಹಾರಾಷ್ಟ್ರ ಸರ್ಕಾರ ಬುಧವಾರ ಸಾರ್ವಜನಿಕ ರಜಾ ಪ್ರಕಟಿಸಿತು. ಅಲ್ಲದೆ ಮೂರು ದಿನಗಳವರೆಗೆ ರಾಜ್ಯದಾದ್ಯಂತ ಶೋಕಾಚರಣೆ ಘೋಷಿಸಿದೆ. ಈ ಸಮಯದಲ್ಲಿ ಸರ್ಕಾರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತದೆ ಮತ್ತು ಯಾವುದೇ ಅಧಿಕೃತ ಮನರಂಜನೆ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಗುರುವಾರ ಅಂತ್ಯಕ್ರಿಯೆ: 

ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಜಿತ್‌ ಪವಾರ್‌ ಅವರ ಅಂತ್ಯಕ್ರಿಯೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಎನ್‌ಸಿಪಿ ಪ್ರಕಟಣೆ ತಿಳಿಸಿದೆ.

ಅಜಿತ್‌ ಪವಾರ್‌ ನಿಧನಕ್ಕೆ ಗಣ್ಯರ ಕಂಬನಿ

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅಗಲಿಕೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಸೇರಿದಂತೆ ಹಲವು ನಾಯಕರು ಕಂಬನಿ ಮಿಡಿದಿದ್ದಾರೆ. ಜತೆಗೆ ಅಜಿತ್‌ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ.   

ಅಸ್ಪಷ್ಟ ಗೋಚರತೆ: ಪತನಕ್ಕೆ ಕಾರಣ

ಅಸ್ಪಷ್ಟ ಗೋಚರತೆಯ ಕಾರಣ ವಿಮಾನ ನಿಲ್ದಾಣದ ಮೇಲೆ ಒಮ್ಮೆ ‘ಗೋ– ಅರೌಂಡ್‌’ (ಸುತ್ತು ಹಾಕಿದ) ಹಾಕಿದ ಬಳಿಕ ವಿಮಾನಕ್ಕೆ ಇಳಿಯಲು ಅನುಮತಿ ನೀಡಲಾಯಿತು. ಆದರೆ ಅನುಮತಿಯ ಸಂದೇಶ ಪಡೆದ ಬಗ್ಗೆ ಪೈಲಟ್‌ನಿಂದ ಅಂತಿಮವಾಗಿ ಯಾವುದೇ ‘ರೀಡ್‌ಬ್ಯಾಕ್‌’ (ದೃಢೀಕರಣ) ಬರಲಿಲ್ಲ ಕೆಲ ಕ್ಷಣಗಳಲ್ಲಿಯೇ ರನ್‌ವೇ ಅಂಚಿನಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ. 

ವಿಮಾನ ಅಪಘಾತಕ್ಕೀಡಾದ ಅಂತಿಮ ಕ್ಷಣಗಳ ವಿವರವನ್ನು ಸಚಿವಾಲಯ ಹಂಚಿಕೊಂಡಿದೆ. ಬಾರಾಮತಿ ವಾಯು ಸಂಚಾರ ನಿಯಂತ್ರಣದ ಪ್ರಕಾರ ವಿಮಾನವು ಬೆಳಿಗ್ಗೆ 8.18ಕ್ಕೆ ಸಂಪರ್ಕಕ್ಕೆ ಬಂದಿತ್ತು. ನಂತರ ಅದು ಬಾರಾಮತಿಗೆ 30 ನಾಟಿಕಲ್‌ ಮೈಲುಗಳಷ್ಟು ದೂರದಲ್ಲಿದ್ದಾಗ ಅದರಿಂದ ಕರೆ ಸ್ವೀಕರಿಸಲಾಗಿತ್ತು. ಈ ವೇಳೆ ಗೋಚರತೆಯನ್ನು ಆಧರಿಸಿ ತಮ್ಮ ವಿವೇಚನೆ ಬಳಸಿ ವಿಮಾನ ಇಳಿಸುವಂತೆ ಪೈಲಟ್‌ಗೆ ಸೂಚಿಸಲಾಯಿತು.  ಬಳಿಕ ರನ್‌ವೇ ಗೋಚರಿಸದ ಬಗ್ಗೆ ವಿಮಾನದ ಸಿಬ್ಬಂದಿಯಿಂದ ವರದಿ ಬಂದಿತು. ನಂತರ ಪೈಲಟ್‌ ಮತ್ತೆ ‘ಗೋ– ಅರೌಂಡ್‌’ ಪ್ರಾರಂಭಿಸಿದರು. ಸುತ್ತಾಟದ ಬಳಿಕ ರನ್‌ವೇಯನ್ನು ಗುರುತಿಸಬಹುದೇ ಎಂದು ಕೇಳಲಾಯಿತು. ಆಗ ಪ್ರತಿಕ್ರಿಯಿಸಿದ ಪೈಲಟ್‌ ‘ರನ್‌ವೇ ಗೋಚರಿಸುತ್ತಿಲ್ಲ ಗೋಚರಿಸದ ಬಳಿಕ ತಿಳಿಸುತ್ತೇನೆ’ ಎಂದು ಹೇಳಿದ್ದರು. ಕೆಲ ಸೆಕೆಂಡುಗಳಲ್ಲಿಯೇ ವಿಮಾನ ಸಿಬ್ಬಂದಿಯು ರನ್‌ವೇಯನ್ನು ಗುರುತಿಸಬಹುದು ಎಂದು ವರದಿ ಮಾಡಿದರು.  ಅದರ ಬೆನ್ನಲ್ಲೇ ರನ್‌ವೇಯತ್ತ ಇಳಿಯಲು ವಿಮಾನ ಮುಂದಾಯಿತು. ಕೂಡಲೇ ವಿಮಾನ ಭೂ ಸ್ಪರ್ಶಕ್ಕೆ ಅನುಮತಿ ನೀಡಲಾಯಿತು. ಆದರೆ ಆ ಕಡೆಯಿಂದ ಸಂದೇಶ ಪಡೆದ ಯಾವುದೇ ದೃಢೀಕರಣ ಎಟಿಸಿಗೆ ಬರಲಿಲ್ಲ. ಕೆಲ ಸೆಕೆಂಡುಗಳಲ್ಲಿಯೇ ರನ್‌ವೇ ಬಳಿ ಬೆಂಕಿ ಕಾಣಿಸಿಕೊಂಡಿತು ಎಂದು ಪ್ರಕಟಣೆ ತಿಳಿಸಿದೆ.  

ಏನಿದು ‘ಗೋ– ಅರೌಂಡ್‌’

‘ಗೋ– ಅರೌಂಡ್‌’ ಎಂಬುದು ವಿಮಾನಯಾನ ಪರಿಭಾಷೆಯಲ್ಲಿ ಬಳಸುವ ಪ್ರಮಾಣಿತ ಕಾರ್ಯವಿಧಾನ. ವಿಮಾನ ಭೂಸ್ಪರ್ಶಿಸಲು ಸಾಧ್ಯವಾಗದೇ ಇದ್ದಾಗ ಪೈಲಟ್‌ ವಿಮಾನವನ್ನು ಮತ್ತೆ ಮೇಲಕ್ಕೆ ಏರಿಸಿ ಸುತ್ತು ಹಾಕುತ್ತಾರೆ. ಕೆಟ್ಟ ಹವಾಮಾನ ಕಳಪೆ ಗೋಚರತೆ ಅಸ್ಥಿರ ಮಾರ್ಗ ರನ್‌ವೇಯಲ್ಲಿನ ದಟ್ಟಣೆ ಕಾರಣಗಳಿಂದ ವಿಮಾನವನ್ನು ಸುರಕ್ಷಿತವಾಗಿ ಭೂಸ್ಪರ್ಶಿಸಲು ಸಾಧ್ಯವಾಗದಿದ್ದಾಗ ಇದನ್ನು ಬಳಸಲಾಗುತ್ತದೆ.  

‘ರೀಡ್‌ಬ್ಯಾಕ್‌’ ಬಗ್ಗೆ:

ವಿಮಾನಯಾನದಲ್ಲಿ ‘ರೀಡ್‌ಬ್ಯಾಕ್‌’ ಎಂಬುದು ಒಂದು ನಿರ್ಣಾಯಕ ಸುರಕ್ಷತಾ ಕಾರ್ಯವಿಧಾನ. ವಿಮಾನ ಸಂಚಾರ ನಿಯಂತ್ರಕರಿಂದ (ಎಟಿಸಿ) ಸ್ವೀಕರಿಸಿದ ಸಂದೇಶ ಅಥವಾ ಸೂಚನೆಯ ಅಗತ್ಯ ಭಾಗಗಳನ್ನು ಪೈಲಟ್‌ ಇಲ್ಲಿ ಪುನರಾವರ್ತಿಸುತ್ತಾರೆ. ಈ ಮೂಲಕ ಅವರು ನಿಯಂತ್ರಕರ ಸೂಚನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವುದನ್ನು ದೃಢೀಕರಿಸುತ್ತಾರೆ. ವಿಎಸ್‌ಆರ್‌ ವೆಂಚರ್ಸ್‌ ಏಳು ಲಿಯರ್‌ಜೆಟ್‌– 45 ವಿಮಾನಗಳು ಐದು ಎಂಬ್ರೇರ್‌– 135ಬಿಜೆ ವಿಮಾನಗಳು ನಾಲ್ಕು ಕಿಂಗ್‌ ಏರ್‌–ಬಿ200 ವಿಮಾನಗಳು ಮತ್ತು ಒಂದು ಪಿಲಾಟಸ್‌ ಪಿಸಿ–12 ವಿಮಾನವನ್ನು ಹೊಂದಿದೆ.

ಮಹಾರಾಷ್ಟ್ರದ ಅಭಿವೃದ್ಧಿಗೆ ವಿಶೇಷವಾಗಿ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪವಾರ್‌ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ
ದ್ರೌಪದಿ ಮುರ್ಮು ರಾಷ್ಟ್ರಪತಿ
ಅಜಿತ್‌ ದಾದಾ’ ಅವರು ತಳಮಟ್ಟದಲ್ಲಿ ಬಲವಾದ ಸಂಪರ್ಕ ಹೊಂದಿದ್ದ ಜನ ನಾಯಕ. ಗ್ರಾಮೀಣ ಪ್ರದೇಶದ ಏಳಿಗೆಗೆ ಶ್ರಮಿಸಿದವರು. ಮಹಾರಾಷ್ಟ್ರ ಮತ್ತು ಭಾರತದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ 
ನರೇಂದ್ರ ಮೋದಿ ಪ್ರಧಾನಿ
ಅಜಿತ್‌ ಪವಾರ್‌ ಅವರ ಅಗಲಿಕೆಯಿಂದ ಎನ್‌ಡಿಎ ಕುಟುಂಬಕ್ಕೆ ಮಾತ್ರವಲ್ಲದೆ ನನಗೂ ವೈಯಕ್ತಿವಾಗಿ ನಷ್ಟವಾಗಿದೆ
ಅಮಿತ್‌ ಶಾ ಕೇಂದ್ರ ಗೃಹ ಸಚಿವ
ಇದನ್ನು ನಂಬಲು ಆಗುತ್ತಿಲ್ಲ. ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಶೂನ್ಯ ಅವರಿಸಿದೆ. ರಾಜ್ಯದ ಬಗ್ಗೆ ಚೆನ್ನಾಗಿ ತಿಳಿದಿದ್ದ ಸಮಸ್ಯೆಗಳ ಬಗ್ಗೆ ಆಳವಾದ ಅರಿವು ಹೊಂದಿದ್ದ ನಾಯಕ ಅವರಾಗಿದ್ದರು
ದೇವೇಂದ್ರ ಫಡಣವೀಸ್‌ ಮುಖ್ಯಮಂತ್ರಿ ಮಹಾರಾಷ್ಟ್ರ
ನಾನು ಅಣ್ಣನನ್ನು ಕಳೆದುಕೊಂಡಿದ್ದೇನೆ. ಅವರು ಉತ್ತಮ ಸಹೋದ್ಯೋಗಿ ಆತ್ಮೀಯ ಸ್ನೇಹಿತನಾಗಿದ್ದರು. ಅವರ ಸಾವು ದುರದೃಷ್ಟಕರ. ವೈಯಕ್ತಿಕವಾಗಿ ನನಗೆ ತೀವ್ರ ದುಃಖ ತರಿಸಿದೆ. ವಿಮಾನ ಅಪಘಾತದ ಬಗ್ಗೆ ತನಿಖೆ ನಡೆಸಲಾಗುವುದು
ಏಕನಾಥ ಶಿಂದೆ ಉಪ ಮುಖ್ಯಮಂತ್ರಿ ಮಹಾರಾಷ್ಟ್ರ
ಮ್ಮ ನಡುವೆ ಉತ್ತಮ ಬಾಂಧವ್ಯ ಇತ್ತು. ಅಜಿತ್‌ ಮುಕ್ತ ಮನಸ್ಸಿನ ವ್ಯಕ್ತಿ. ರಾಜಕೀಯದಲ್ಲಿ ಅವರು ಪಥ ಬದಲಿಸಿದ್ದರೂ ನಮ್ಮಿಬ್ಬರ ಸಂಬಂಧ ಕಡಿದುಕೊಂಡಿರಲಿಲ್ಲ
ಉದ್ಧವ್‌ ಠಾಕ್ರೆ ಶಿವಸೇನಾ (ಯುಬಿಟಿ) ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.