ಲಖನೌ: ತಮ್ಮ ಮಗಳ ಹೆಸರಿನಲ್ಲಿ ನಕಲಿ ಎಕ್ಸ್ ಖಾತೆ ಇರುವುದನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮಂಗಳವಾರ ಪತ್ತೆ ಮಾಡಿದ್ದಾರೆ. ಅದನ್ನು ನಿರ್ವಹಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಿರುಚಿದ ಚಿತ್ರಗಳನ್ನು ಈ ಹ್ಯಾಂಡಲ್‌ನಲ್ಲಿ ಬಳಸಲಾಗಿತ್ತು.
ಘಟನೆ ಬೆಳಕಿಗೆ ಬಂದು 24 ಗಂಟೆಗಳು ಕಳೆದಿದೆ. ಆದರೆ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಕ್ಸ್ ಪೋಸ್ಟ್‌ನಲ್ಲಿ ಕಿಡಿ ಕಾರಿದ್ದಾರೆ. ಇದನ್ನು ಲಘುವಾಗಿ ಪರಿಗಣಿಸಬೇಡಿ ಎಂದು ವಿವಾದಾತ್ಮಕ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ.
‘ಈ ಖಾತೆಯಲ್ಲಿ ಮಾಡಲಾದ ತೀವ್ರ ಆಕ್ಷೇಪಾರ್ಹ ಇತರೆ ಪೋಸ್ಟ್‌ಗಳ ಬಗ್ಗೆಯೂ ನಮ್ಮ ಗಮನ ಸೆಳೆಯಲಾಗಿದೆ. ಕೆಲವು ಸಮಾಜ ವಿರೋಧಿಗಳು ನಮ್ಮ ಕುಟುಂಬ ಸದಸ್ಯರು, ಪಕ್ಷದ ನಾಯಕರು ಮತ್ತು ಸಹಚರರ ಹೆಸರುಗಳು ಹಾಗೂ ಚಿತ್ರಗಳನ್ನು ಹೋಲುವ ಚಿತ್ರಗಳನ್ನು ದುರುಪಯೋಗಪಡಿಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಖಂಡನೀಯ ಕಂಟೆಂಟ್ ಪೋಸ್ಟ್ ಮಾಡುತ್ತಿದ್ದಾರೆ’ಎಂದು ಯಾದವ್ ಹೇಳಿದ್ದಾರೆ.
ಅಂತಹ ಪೋಸ್ಟ್‌ಗಳು ಅಥವಾ ಚಿತ್ರಗಳಿಗೆ ಯಾವುದೇ ಸಂಬಂಧ ನಿರಾಕರಿಸಿದ ಅವರು, ಅವು ರಾಜಕೀಯ ಅಥವಾ ಆರ್ಥಿಕ ಉದ್ದೇಶಗಳಿಂದ ನಡೆಸಲ್ಪಡುವ ದೊಡ್ಡ ಪಿತೂರಿಯ ಭಾಗವಾಗಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರದ ಸೈಬರ್ ಭದ್ರತಾ ಕೋಶವು ನಿಜವಾಗಿಯೂ ಕ್ರಮ ಕೈಗೊಳ್ಳಲು ಬಯಸಿದರೆ, ಅದು ಅಪರಾಧಿಗಳನ್ನು 24 ಗಂಟೆಗಳಲ್ಲಿ ಅಲ್ಲ, 24 ನಿಮಿಷಗಳಲ್ಲಿ ಪತ್ತೆಹಚ್ಚಬಹುದು ಎಂದು ಯಾದವ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.