ಲಖನೌ: ಮೈತ್ರಿಯಲ್ಲಿ ಒಡಕು ಮೂಡಿದೆ ಎಂಬ ವದಂತಿಗಳಿಗೆ ತೆರೆ ಎಳೆದಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ‘ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜತೆಗಿನ ಮೈತ್ರಿ ಮುಂದುವರೆಯಲಿದೆ. ಎರಡು ವರ್ಷಗಳ ನಂತರ ಬರುವ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಸ್ಪರ್ಧೆ ಮಾಡಲಿವೆ’ ಎಂದು ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅಖಿಲೇಶ್ ಯಾದವ್ ಅವರು, ‘ ಇಂಡಿಯಾ ಒಕ್ಕೂಟವು ಅಖಂಡವಾಗಿದೆ. ಯಾರಾದರೂ ಮೈತ್ರಿ ತೊರೆಯುವ ಅಪೇಕ್ಷೆ ಇದ್ದರೆ ಸ್ವತಂತ್ರರು’ ಎಂದು ಹೇಳಿದರು.
‘ಅತ್ಯಂತ ಹಳೆಯ ಪಕ್ಷವು ಯಾರ ಸಹಾಯವನ್ನೂ ಬಯಸುವುದಿಲ್ಲ’ ಎಂದು ಸಹಾರನ್‌ಪುರದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಹೇಳಿಕೆ ನೀಡಿದ್ದ ಬೆನ್ನಲ್ಲೇ ಅಖಿಲೇಶ್ ಮಹತ್ವದ ಸಂದೇಶ ರವಾನೆ ಮಾಡಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು 80 ಸ್ಥಾನಗಳ ಪೈಕಿ 43 ಸ್ಥಾನಗಳನ್ನು ಗೆದ್ದಿದ್ದವು. ಬಿಜೆಪಿ ಸಂಸದರ ಸ್ಥಾನ 63ರಿಂದ 33ಕ್ಕೆ ಕುಸಿದಿತ್ತು. ಈಗಾಗಲೇ ಎರಡೂ ಮೈತ್ರಿ ಪಕ್ಷಗಳು ವಿಧಾನಸಭೆ ಕ್ಷೇತ್ರಗಳ ಸೀಟು ಹಂಚಿಕೆ ಕಾರ್ಯತಂತ್ರಗಳನ್ನು ಆರಂಭಿಸಿವೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.