ADVERTISEMENT

ಲಖಿಂಪುರ– ಖೇರಿ ಹಿಂಸಾಚಾರ: ಅಮಿತ್‌ ಶಾ ವಿರುದ್ಧ ಅಖಿಲೇಶ್‌ ಯಾದವ್‌ ವಾಗ್ದಾಳಿ

ಪಿಟಿಐ
Published 30 ಅಕ್ಟೋಬರ್ 2021, 10:32 IST
Last Updated 30 ಅಕ್ಟೋಬರ್ 2021, 10:32 IST
ಅಖಿಲೇಶ್‌ ಯಾದವ್‌
ಅಖಿಲೇಶ್‌ ಯಾದವ್‌   

ಲಖನೌ: ಕಾರ್ಯಕ್ರಮವೊಂದರಲ್ಲಿ ತಮ್ಮ ಕಿರಿಯ ಸಹೋದ್ಯೋಗಿ ಅಜಯ್ ಮಿಶ್ರಾ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚಿಗೆ ಲಖಿಂಪುರ–ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೆ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾ ಕಾರಣ ಎನ್ನಲಾಗಿದೆ. ಹೀಗಾಗಿ ಅಜಯ್‌ ಮಿಶ್ರಾ ಅವರನ್ನು ವಜಾಗೊಳಿಸುವಂತೆ ವಿರೋಧ ಪಕ್ಷಗಳು ಒತ್ತಾಯಿಸಿವೆ.

ಇಲ್ಲಿ ಶುಕ್ರವಾರ ನಡೆದ ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಶಾ ಮತ್ತು ಮಿಶ್ರಾ ಅವರ ಚಿತ್ರವನ್ನು ಯಾದವ್‌ ತಮ್ಮ ಟ್ವಿಟರ್‌ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.

ADVERTISEMENT

‘ಸುಳ್ಳು ದುರ್ಬೀನುಗಳನ್ನು ಹಿಡಿದು ಹುಡುಕುವ ಸೋಗು ಈಗ ಮುಗಿದಿದೆ. ಹುಡುಕುವ ವ್ಯಕ್ತಿ ಪಕ್ಕದಲ್ಲೇ ನಿಂತಿದ್ದಾನೆ’ ಎಂದು ಅಖಿಲೇಶ್‌ ಯಾದವ್‌ ಪೋಸ್ಟ್‌ ಮಾಡಿದ್ದಾರೆ.

ಅಪರಾಧ ಹಿನ್ನಲೆಯುಳ್ಳ ರಾಜಕಾರಣಿಗಳು ಅಥವಾ ‘ಬಾಹುಬಲಿ’ ಎಂದು ಕರೆಯಲಾಗುವ ಯಾವುದೇ ಬಲಿಷ್ಠ ವ್ಯಕ್ತಿಗಳನ್ನು ಇತ್ತೀಚೆಗೆ ದುರ್ಬೀನಿನಲ್ಲಿ ಹುಡುಕಿದರೂ ಸಿಗುತ್ತಿಲ್ಲ ಎಂದು ಶಾ ಶುಕ್ರವಾರ ತಮ್ಮ ಭಾಷಣದ ವೇಳೆ ಹೇಳಿದ್ದರು.

‘2017ರ ಮೊದಲು ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆ ಹದಗೆಟ್ಟ ಸ್ಥಿತಿಯನ್ನು ಕಂಡು ನನ್ನ ರಕ್ತ ಕುದಿಯುತ್ತಿತ್ತು. ಹಿಂದಿನ ಸರ್ಕಾರದ ಅವಧಿಯಲ್ಲಿ ಹೆಣ್ಣು ಮಕ್ಕಳು ಹೊರಬರಲು ಆಗುತ್ತಿರಲಿಲ್ಲ. ಪ್ರತಿ ಜಿಲ್ಲೆಯಲ್ಲೂ ಇಬ್ಬರು–ಮೂವರು ‘ಬಾಹುಬಲಿ’ಗಳಿದ್ದರು. ಆದರೆ ಇಂದು ದುರ್ಬೀನು ಹಾಕಿ ಹುಡುಕಿದರೂ ಯಾರೂ ಕಾಣುತ್ತಿಲ್ಲ’ ಎಂದು ಶಾ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.