ADVERTISEMENT

ಚರ್ಚೆಗೆ ಗ್ರಾಸವಾದ ಅಖಿಲೇಶ್‌ ಯಾದವ್‌, ಎಎಪಿ ಮುಖಂಡ ಸಂಜಯ್‌ ಸಿಂಗ್‌ ಭೇಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜುಲೈ 2021, 10:17 IST
Last Updated 4 ಜುಲೈ 2021, 10:17 IST
ಅಖಿಲೇಶ್‌ ಯಾದವ್‌ ಮತ್ತು ಸಂಜಯ್‌ ಸಿಂಗ್‌
ಅಖಿಲೇಶ್‌ ಯಾದವ್‌ ಮತ್ತು ಸಂಜಯ್‌ ಸಿಂಗ್‌   

ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಮತ್ತು ಎಎಪಿ ಮುಖಂಡ ಸಂಜಯ್‌ ಸಿಂಗ್‌ ನಡುವಿನ ಭೇಟಿಯು ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ನಾಂದಿ ಹಾಡಿದೆ.

ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಎಎಪಿ ಮತ್ತು ಸಮಾಜವಾದಿ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಬಗೆಗಿನ ಮಾತುಗಳು ಸಹ ಮುನ್ನೆಲೆಗೆ ಬಂದಿವೆ.

ಅಖಿಲೇಶ್‌ ಯಾದವ್‌ ಜೊತೆಗಿನ ಭೇಟಿ ವಿಚಾರವಾಗಿ ಟ್ವೀಟ್‌ ಮಾಡಿರುವ ಸಂಜಯ್‌ ಸಿಂಗ್‌ ಅವರು, ಬಿಜೆಪಿಯ ದಮನಕಾರಿ ನೀತಿಗಳ ಬಗ್ಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ.

ADVERTISEMENT

'ಚುನಾವಣೆಯ ಹೊರತಾಗಿಯೂ ಚರ್ಚೆಗೆ ಅವಕಾಶ ನೀಡಿದಕ್ಕಾಗಿ ಅಖಿಲೇಶ್‌ ಯಾದವ್‌ ಅವರಿಗೆ ತುಂಬಾ ಧನ್ಯವಾದಗಳು. ಬಿಜೆಪಿಯ ದಮನಕಾರಿ ನೀತಿಗಳು ಮತ್ತು ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ' ಎಂದು ಸಂಜಯ್‌ ಸಿಂಗ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

2022ರಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿದ್ದ ಅಖಿಲೇಶ್‌ ಯಾದವ್‌, ‘ಉತ್ತರ ಪ್ರದೇಶದಲ್ಲಿ 2022ರಲ್ಲಿ ಕೇವಲ ಚುನಾವಣೆ ನಡೆಯುವುದಿಲ್ಲ. ಬದಲಾಗಿ ನಾಟಕೀಯ ಕ್ರಾಂತಿಯಾಗಲಿದೆ. ವಿಧಾನಸಭಾ ಚುನಾವಣೆಯಲ್ಲಿ 403 ಸ್ಥಾನಗಳ ಪೈಕಿ 350 ಸೀಟುಗಳನ್ನು ಸಮಾಜವಾದಿ ಪಕ್ಷ ಗೆಲ್ಲಲಿದೆ. ಜನರು ಬಿಜೆಪಿಯ ವಿರುದ್ಧ ಇದ್ದಾರೆ’ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.